ಪುತ್ತೂರು:ಪುತ್ತೂರು ಹಾಗೂ ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಮಂಜೂರಾದ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಡಲೇ ಶಂಕುಸ್ಥಾಪನೆ ನೆರವೇರಿಸಬೇಕು ಹಾಗೂ 2 ಭವನಗಳಿಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ವಿಟ್ಲ ಕಚೇರಿ ಬಳಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಶಾಸಕರ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಬಳಿಕ ಶಾಸಕರಿಗೆ ಮನವಿ ಸಲ್ಲಿಸಿದರು.
ಶಾಸಕರಿಗೆ ಮನವಿ ಸಲ್ಲಿಸಿದ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು ಶಾಸಕರು ಈಡೇರಿಸುವ ಭರವಸೆ ನೀಡಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆ ಆದ ಬಳಿಕ ಯಾವುದೇ ಶಂಕುಸ್ಥಾಪನೆ, ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆ ಘೋಷಣೆಯಾಗುವ ಮೊದಲೇ ಎರಡೂ ಭವನಗಳಿಗೂ ಶಿಲಾನ್ಯಾಸ ನೆರವೇರಿಸಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಕನ್ಯಾನದಲ್ಲಿ ಸಮುದಾಯದ ಯುವಕನೋರ್ವ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತನ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ನೀಡುವ ಭರವಸೆ ಈಡೇರಿಸಬೇಕು. ನಗರ ಸಭಾ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡುವುದು, ಮೆಸ್ಕಾಂ ವಿದ್ಯುತ್ ಮೀಟರ್ ಓದುವವರನ್ನು ಕೆಲಸದಿಂದ ವಜಾಗೊಳಿಸಿದ್ದು ಅವರನ್ನು ಮರು ನೇಮಕ ಮಾಡುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದ್ದು ಶಾಸಕರು ವಿಶೇಷ ಕಾಳಜಿ ವಹಿಸಿ, ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಪುತ್ತೂರಿನಲ್ಲಿ 75 ಸೆಂಟ್ಸ್ ಹಾಗೂ ವಿಟ್ಲದಲ್ಲಿ 17 ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆಂದು ಮಂಜೂರುಗೊಂಡಿದೆ.ಇದಕ್ಕೆ ಅನುದಾನಗಳೂ ಮಂಜೂರುಗೊಂಡಿದೆ.ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನ ಭವನಕ್ಕೆ ರೂ.10 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ.ಆದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.
ಮನವಿ ಸ್ವೀಕರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರುಗೆ ಈಗಾಗಲೇ 4 ಅಂಬೇಡ್ಕರ್ ಭವನಗಳು ಮಂಜೂರುಗೊಂಡಿದ್ದು ಕಾಮಗಾರಿಗಳು ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ 20 ಲಕ್ಷ, ಹೋಬಳಿ ಮಟ್ಟದಲಿ 50 ಲಕ್ಷ ಹಾಗೂ ತಾಲೂಕು ಮಟ್ಟದಲ್ಲಿ 1 ಕೋಟಿ ರೂ.ಇಲಾಖೆಯಿಂದ ಮಂಜೂರುಗೊಂಡಿದೆ. ಗ್ರಾಮಮಟ್ಟದಲ್ಲಿ ನಾಲ್ಕು ಕಡೆ ಕಾಮಗಾರಿ ನಡೆಯುತ್ತಿದೆ.ನಿಡ್ಪಳ್ಳಿಯಲ್ಲಿ ಜಾಗದ ಸಮಸ್ಯೆಯಿದೆ.ಉಪ್ಪಿನಂಗಡಿ ಹಾಗೂ ವಿಟ್ಲ ಹೋಬಳಿ ಮಟ್ಟದಲ್ಲಿ ಪುತ್ತೂರಿನಲ್ಲಿ ತಾಲೂಕು ಮಟ್ಟದಲ್ಲಿ ನಿರ್ಮಾಣವಾಗಲಿದೆ.ಹೋಬಳಿ ಮಟ್ಟಕ್ಕೆ ಈಗಾಗಲೇ ರೂ.50 ಲಕ್ಷ ನೀಡಲಾಗಿದ್ದು ಹೆಚ್ಚಿನ ಅನುದಾನಕ್ಕೆ ಸಚಿವರ ಗಮನಕ್ಕೆ ತರಲಾಗುವುದು.ವೈಯಕ್ತಿಕವಾಗಿ ಪ.ಜಾತಿಯ ಕೃಷಿಕರಿಗೆ ಬೋರ್‌ವೆಲ್, ಉದ್ಯಮಕ್ಕೆ ನೆರವು ನೀಡಲಾಗುತ್ತಿದೆ.ಜಮೀನು ಕನ್ವರ್ಷನ್ ಸಮಸ್ಯೆಯನ್ನು ನಾನು ವಿಧಾನ ಸಭೆಯಲ್ಲಿ ಮಂಡಿಸಿ ಪರಿಹಾರ ಕಂಡುಕೊಳ್ಳಲಾಗಿದೆ.ಬೆಂಗಳೂರಿಗೆ ಹೋಗುತ್ತಿದ್ದು ಕಟ್ಟಡಕ್ಕೆ ಸಂಬಂಽಸಿದಂತೆ ನಾಳೆಯೇ ಸಚಿವರಿಗೆ ಮನವಿ ಮಾಡಿ ಅದರ ಪ್ರತಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ದಲಿತ್ ಸೇವಾ ಸಮಿತಿಯ ಪ್ರಮುಖರಾದ ಶ್ವೇತಾಪ್ರಸಾದ್, ಜಗದೀಶ್, ಯಾಮಿನಿ ಬೆಟ್ಟಂಪಾಡಿ, ಧನಂಜಯ ಬಲ್ನಾಡು, ನಾಗೇಶ್ ಮುಡಿಪು, ರೇಣುಕಾ, ಸುನಂದ, ಲಲಿತಾ ಸಾಲೆತ್ತೂರು, ಮೀನಾಕ್ಷಿ ನೆಲ್ಲಿಗುಡ್ಡೆ, ಸೋಮಪ್ಪ ನಾಯ್ಕ, ಕುಶಾಲಪ್ಪ, ವಿಟ್ಲ, ರಾಜೇಶ್ ಸೇರಿದಂತೆ ಹಲವು ಮಂದಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.ಜಿಲ್ಲಾಧ್ಯಕ್ಷ ಚಂದ್ರಶೇಖರ ವಿಟ್ಲ ಸ್ವಾಗತಿಸಿ, ವಂದಿಸಿದರು.