ಮಂಗಳೂರು:ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪತ್ರಿಕೆಯೊಂದರಲ್ಲಿ ಸುಳ್ಳು ಪ್ರಕಟನೆ ನೀಡಿ, ಸಾರ್ವಜನಿಕರಿಗೆ ನಕಲಿ ನೌಕರಿ ಆಮಿಷವೊಡ್ಡಿ ಹಣ ಸಂಗ್ರಹಿಸಿ ವಂಚಿಸಲು ಯತ್ನಿಸಿರುವ ಬಗ್ಗೆ ನಗರದ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನ.11ರಂದು ಪತ್ರಿಕೆಯೊಂದರಲ್ಲಿ, ‘ಮ್ಯಾನ್ ಪವರ್ ರಿಕ್ರೂಟ್‌ಮೆಂಟ್ ಏಜೆನ್ಸಿ(ಎನ್‌ಜಿಒ) ಬಾಳೆಗುಂಡಿ ಸದನ ಕೆ.ಆರ್.ಪುರಂ ಮುಖ್ಯರಸ್ತೆ, ಮೊದಲನೆ ಮಹಡಿ ಶಿವಮೊಗ್ಗ’ ಎಂಬ ಸಂಸ್ಥೆಯ ಹೆಸರಿನಲ್ಲಿ ನೀಡಲಾದ ಪ್ರಕಟನೆಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ಡಿಪೋದಲ್ಲಿ 250 ಹುದ್ದೆಗಳು, ಪುತ್ತೂರು ವಿಭಾಗದಲ್ಲಿ 200 ಹುದ್ದೆಗಳು, ಚಾಮರಾಜ ನಗರ ವಿಭಾಗದಲ್ಲಿ 100 ಹುದ್ದೆಗಳು ಸೇರಿದಂತೆ ಒಟ್ಟು 650 ಡ್ರೈವರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಪ್ರತಿ ಅಭ್ಯರ್ಥಿಗಳು ಬಯೋಡಾಟಾದೊಂದಿಗೆ 1,000 ರೂ. ಅರ್ಜಿ ಶುಲ್ಕದ ಡಿಡಿಯನ್ನು ಮತ್ತು 10,000 ರೂ. ಡಿಡಿಯನ್ನು ನೇಮಕಾತಿ ಅರ್ಜಿಯೊಂದಿಗೆ ಸಲ್ಲಿಸಬೇಕು. ನೇಮಕಾತಿ ತಿರಸ್ಕೃತಗೊಂಡಾಗ 10,000 ರೂ. ಹಿಂದಿರುಗಿಸಲಾಗುವುದು. ನೇಮಕಾತಿಯ ಒಟ್ಟು ಶುಲ್ಕ ಒಬ್ಬರಿಗೆ 25,000 ರೂ. ಮಾತ್ರವಿದ್ದು 15,000 ರೂ.ಗಳನ್ನು ನೇಮಕಾತಿ ಪತ್ರ ಪಡೆಯುವ ಸಂದರ್ಭ ನೀಡಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ಕಚೇರಿ ಹಾಗೂ ವಿಭಾಗಗಳಿಂದ ಯಾವುದೇ ಪ್ರಕಟನೆ ನೀಡಿರಲಿಲ್ಲ. ಆರೋಪಿಗಳು ಕೆಎಸ್‌ಆರ್‌ಟಿಸಿ ಹೆಸರು ದುರ್ಬಳಕೆ ಮಾಡಿ ಸಾರ್ವಜನಿಕರಿಗೆ ನಕಲಿ ನೌಕರಿ ಆಮಿಷವೊಡ್ಡಿ ಹಣ ಸಂಗ್ರಹಿಸಿ ವಂಚಿಸುವ ಉದ್ದೇಶದಿಂದ ಸುಳ್ಳು ಪ್ರಕಟನೆ ನೀಡಿದ್ದಾರೆ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.