ಹಿರೇಬಂಡಾಡಿ: ಅಕ್ರಮ ಮದ್ಯ ಮಾರಾಟ ಆರೋಪ-ಪ್ರತಿಭಟನೆ

0

ಅಧಿಕಾರಿಗಳಿಂದ ಕಟ್ಟಡ ನೆಲಸಮಗೊಳಿಸುವ ಎಚ್ಚರಿಕೆ

ಹಿರೇಬಂಡಾಡಿ: ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಹಿರೇಬಂಡಾಡಿ ಗ್ರಾಮದ ಶಾಖೆಪುರದಲ್ಲಿ ನ.14ರಂದು ಸಂಜೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಗ್ರಾಮ ಪಂಚಾಯತ್‌ನವರು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

ಹಿರೇಬಂಡಾಡಿ ಹಾಗೂ ಕೊಯಿಲ ಗ್ರಾಮದ ಗಡಿಭಾಗದ ಶಾಖೆಪುರದಲ್ಲಿನ ಎರಡು ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಎರಡು ದಿನದ ಹಿಂದೆ ಎರಡೂ ಅಂಗಡಿಗಳಿಗೆ ದಾಳಿ ನಡೆಸಿದ್ದರು. ಈ ವೇಳೆ ಒಂದು ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದರು. ಆದರೂ ನ.13ರಂದು ಸಂಜೆ ಇದೇ ಅಂಗಡಿಯಲ್ಲಿ ಮತ್ತೆ ಮದ್ಯ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ನ.14ರಂದು ಸಂಜೆ ಅಂಗಡಿಯ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಕಡು ಬಡವರು, ಕೂಲಿಕಾರ್ಮಿಕರೇ ಹೆಚ್ಚಾಗಿದ್ದು ಮನೆ ಸಮೀಪದಲ್ಲೇ ಅಕ್ರಮ ಮದ್ಯ ಮಾರಾಟವಾಗುತ್ತಿರುವುದರಿಂದ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ವ್ಯಾಪಾರಕ್ಕಾಗಿ ನೀಡಿರುವ ಅಂಗಡಿ ಪರವಾನಿಗೆಯನ್ನು ರದ್ದು ಪಡಿಸಿ ಅಂಗಡಿಯನ್ನು ಅಲ್ಲಿಂದ ತೆರವುಗೊಳಿಸುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದರು. ಗ್ರಾಮಸ್ಥರಾದ ನೀಲಯ್ಯ, ದಯಾನಂದ, ಹೊನ್ನಪ್ಪ, ವಿನಯ ಪಟ್ಟೆ, ತೇಜುಪಾಲ್, ವಾರಿಜ, ಕಮಲ, ರಶ್ಮಿ, ನಳಿನಿ ಸೇರಿದಂತೆ ಶಾಖೆಪುರ ಅಸುಪಾಸಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಪಿಡಿಒ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಪರಮೇಶ್ವರ, ಸದಸ್ಯ ನಿತೀನ್, ಕೊಯಿಲ ಗ್ರಾ.ಪಂ. ಅಧ್ಯಕ್ಷ ಹರ್ಷಿತ್, ಉಪಾಧ್ಯಕ್ಷೆ ಕಮಲಾಕ್ಷಿ, ಪಿಡಿಒ ಜೆರಾಲ್ಡ್ ಮಸ್ಕರೇನಸ್, ಸದಸ್ಯ ಚಂದ್ರಶೇಖರ ಮಾಳ, ಕಡಬ ಠಾಣಾ ಹೆಡ್‌ಕಾನ್‌ಸ್ಟೇಬಲ್ ಹರೀಶ್, ಉಪ್ಪಿನಂಗಡಿ ಠಾಣೆ ಸಿಬ್ಬಂದಿಯೋರ್ವರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿ ಆಲಿಸಿದರು. ಬಳಿಕ ಮದ್ಯ ಮಾರಾಟ ಮಾಡದಂತೆ ಶಾಖೆಪುರದಲ್ಲಿನ ಎರಡೂ ಅಂಗಡಿಯವರಿಗೆ ತಾಕೀತು ಮಾಡಿರುವ ಗ್ರಾಮ ಪಂಚಾಯತ್‌ನವರು ಕಟ್ಟಡ ನೆಲಸಮಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here