ನೆಲ್ಯಾಡಿ: ಶಬರೀಶ ಯಕ್ಷಗಾನ ಕಲಾಕೇಂದ್ರದ 5ನೇ ವಾರ್ಷಿಕೋತ್ಸವ

0

ಯಕ್ಷಗಾನ ಅತ್ಯಂತ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ; ಶ್ರೀ ರಾಜಶೇಖರಾನಂದ ಸ್ವಾಮೀಜಿ

ನೆಲ್ಯಾಡಿ: ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲೆಯ ಅತಿಥಿ ಕಲಾವಿದರಿಂದ ವಿಶ್ವಾಮಿತ್ರ ಮೇನಕೆ ಯಕ್ಷಗಾನ, ಶಬರೀಶ ಕಲಾಕೇಂದ್ರದ ಮಕ್ಕಳಿಂದ ದಕ್ಷ-ಯಜ್ಞ ಯಕ್ಷಗಾನ, ಪ್ರಸಿದ್ಧ ಹಾಸ್ಯ ಕಲಾವಿದರಿಂದ ಯಕ್ಷ ಹಾಸ್ಯ ಸಂಭ್ರಮ ನ.13ರಂದು ಸಂಜೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕೈಕಂಬ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು, ಆಧುನಿಕ ಬದುಕಿನಲ್ಲಿ ಎಲ್ಲವೂ ಯಾಂತ್ರಿಕೃತವಾಗುತ್ತಿದೆ. ಯಕ್ಷಗಾನವೂ ಈಗ ಕಾಲಮಿತಿಯಾಗಿದೆ. ಸಾಮಾಜಿಕ ಬದುಕಿನಲ್ಲಿ ಆನಂದ ಕೊಡುವ ಕಲೆ ಯಕ್ಷಗಾನ. ಹಿಂದೆ ಕಲಾವಿದರ ಬದುಕು ಬಹಳ ಕಷ್ಟದಲ್ಲಿತ್ತು. ಆದರೆ ಇಂದು ಯಕ್ಷದ್ರುವ ಪಟ್ಲದಂತಹ ಸಂಸ್ಥೆಗಳ ಮೂಲಕ ಕಲಾವಿದರಿಗೆ ಸಹಾಯ ಹಸ್ತ ದೊರೆಯುವಂತಾಗಿದೆ. ಪ್ರಶಸ್ತಿಗಳು ಕಲಾವಿದರನ್ನು ಅರಸಿಕೊಂಡು ಬರುವಂತಾಗಿದೆ. ಯಕ್ಷಗಾನ ಕಲೆಯು ಅತ್ಯಂತ ಶ್ರೀಮಂತವಾದ ಕಲೆಗಳಲ್ಲಿ ಒಂದಾಗಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷಕಲಾ ಪೋಷಕರೂ ಆದ ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್‌ರವರು ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಸ್ವಾರ್ಥ ಇಲ್ಲ, ಅವರು ತನ್ನ ಊರಿಗೆ ಕೀರ್ತಿ ತರುತ್ತಾರೆ. ಈಗಿನ ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವುದೇ ಮುಖ್ಯವಾಗಿದೆ. ಕಲೆಗಳ ಬಗ್ಗೆ, ಆಚಾರ ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಯಕ್ಷಗಾನ ಕಲಿಕೆಯಿಂದ ಹೆಚ್ಚಿನ ಜ್ಞಾನಾರ್ಜನೆ ಆಗೋದಲ್ಲದೆ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಹೇಮಂತ್ ರೈ ಮನವಳಿಕೆ ಮಾತನಾಡಿ, ಹೆಸರಾಂತ ಯಕ್ಷಗಾನ ಕಲಾವಿದ, ಯಕ್ಷಗುರು ಪ್ರಶಾಂತ ಶೆಟ್ಟಿಯವರು ತನ್ನೂರಿನಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಯಕ್ಷ ಕಲಾವಿದರನ್ನು ಹುಟ್ಟು ಹಾಕುವ ಅದ್ಭುತವಾದ ಕೆಲಸ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತದ್ದು. ಪಾಲಕರಿಗೆ ತಮ್ಮ ಮಕ್ಕಳು ಅಂಕ ಗಳಿಕೆ ಒಂದೇ ಆಗಿರುತ್ತದೆ. ಆ ರೀತಿಯ ವಿದ್ಯೆಯಿಂದ ಯಾವುದೇ ಸಂಸ್ಕೃತಿ ಆಚಾರ ವಿಚಾರಗಳು ಬೆಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮಲ್ಲಿರುವ ಗುರಿಯನ್ನು, ಶಕ್ತಿಯನ್ನು ಬಲಪಡಿಸಿಕೊಂಡು ಆ ಮೂಲಕ ಕೆಲಸ ಮಾಡಿ ತಮ್ಮ ಶಕ್ತಿ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಗುಡ್ಡಪ್ಪ ಗೌಡ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಆನಂದ ಶೆಟ್ಟಿ ದೋಂತಿಲ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಿನೇಶ್ ರೈ ಕಡಬ, ಯಕ್ಷಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಶಬರೀಶ ಕಲಾ ಕೇಂದ್ರದ ಕೋಶಾಧಿಕಾರಿ ಗಣೇಶ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆನಂದ ಅಜಿಲ, ಗಣೇಶ್ ಪರಾರಿ, ಗುಣಕರ, ಜತ್ತಪ್ಪ ಶೆಟ್ಟಿ, ಶಕುಂತಳಾ, ಲೋಕೇಶ್ ಬಾಣಜಾಲು, ಸುಮ, ರಘುನಾಥ, ಜಯಂತಿಯವರು ಅತಿಥಿಗಳಿಗೆ ಶಾಲುಹಾಕಿ ಗೌರವಿಸಿದರು.

ಯಕ್ಷಗಾನ ಪೋಷಕ ಹರಿಪ್ರಸಾದ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಬರೀಶ ಕಲಾ ಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ ವಂದಿಸಿದರು. ಸುಧೀರ್ ಕೆ.ಎಸ್.ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ ಪ್ರಾರ್ಥಿಸಿದರು.

ಯಕ್ಷಗಾನ:

ಸಂಜೆ ಯಕ್ಷಗುರು ಪ್ರಶಾಂತ ಶೆಟ್ಟಿಯವರ ಶಿಷ್ಯವೃಂದ ಹಾಗೂ ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರಿಂದ ಸತೀಶ್ ಶೆಟ್ಟಿ ಪಟ್ಲರವರ ಸಾರಥ್ಯದಲ್ಲಿ ’ವಿಶ್ವಾಮಿತ್ರ-ಮೇನಕೆ’ ಯಕ್ಷಗಾನ ನಡೆಯಿತು. ರಾತ್ರಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶಬರೀಶ ಕಲಾಕೇಂದ್ರದ ಮಕ್ಕಳಿಂದ ’ದಕ್ಷ-ಯಜ್ಷ’ ಯಕ್ಷಗಾನ ಪ್ರದರ್ಶನಗೊಂಡಿತು. ಬಳಿಕ ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ರೈ ಕಡಬ, ಸುಂದರ ಬಂಗಾಡಿ ಹಾಗೂ ಸಿ.ಕೆ.ಪ್ರಶಾಂತ್‌ರವರಿಂದ ಯಕ್ಷ ಹಾಸ್ಯ ಸಂಭ್ರಮ ನಡೆಯಿತು. ಮುಮ್ಮೇಳದಲ್ಲಿ ಗಾನಮಂದಾರ ಗಿರೀಶ್ ಕಕ್ಕೆಪದವು ಸಹಕರಿಸಿದರು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಅಭಿನಂದನೆ:

ಯಕ್ಷಗಾನ ಕಲಾ ಸಾಧಕ ಜೋಸೆಫ್ ಡಿ’ಸೋಜ ನೆಲ್ಯಾಡಿ ಹಾಗೂ ಅವರ ಪತ್ನಿಯನ್ನು ಶಬರೀಶ ಕಲಾಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಆನಂದ ಅಜಿಲರವರು ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜೋಸೆಫ್ ಡಿ.ಸೋಜರವರು, ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ಶಿಕ್ಷಕರಾಗಿದ್ದ ದಿನಕರ್ ರಾವ್‌ರವರು ಯಕ್ಷಗಾನ ಕಲಿಸಿದ್ದರು. ಆ ಬಳಿಕ ಕದ್ರಿ, ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿದ್ದೇನೆ. ಈ ಸಂದರ್ಭದಲ್ಲಿ ದೋಂತಿಲದಲ್ಲಿ ಮಕ್ಕಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡುತ್ತಿದ್ದೆ. ನನ್ನಿಂದ ಆರಂಭದಲ್ಲಿ ತರಬೇತಿ ಪಡೆದ ರವಿಭಟ್ ಹಾಗೂ ಪ್ರಶಾಂತ್ ಶೆಟ್ಟಿಯವರು ಈಗ ಯಕ್ಷಗಾನ ರಂಗದಲ್ಲಿ ಮಿಂಚುತ್ತಿದ್ದಾರೆ. ಅಪಘಾತದಿಂದಾಗಿ ಯಕ್ಷಗಾನ ತಿರುಗಾಟ ಮೇಳದಿಂದ ದೂರವಾದರೂ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ ಎಂದರು. ನೆಲ್ಯಾಡಿ ಶಬರೀಶ ಕಲಾ ಕೇಂದ್ರದ ಪೂರ್ವಾಧ್ಯಕ್ಷ ಸುಧೀರ್ ಕೆ.ಎಸ್. ದಂಪತಿಗೆ ಗೌರವಾರ್ಪಣೆ ಮಾಡಲಾಯಿತು.

ಧನಸಹಾಯ:

ಯಕ್ಷಗಾನ ಕಲಾವಿದ, ಯಕ್ಷಗುರು ಪ್ರಶಾಂತ್ ಶೆಟ್ಟಿಯವರ ಮಾತೃಶ್ರೀ ದಿ.ಯಮುನಾ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಪ್ರಸಂಗಕರ್ತರಾದ ಗಣೇಶ್ ಕೆಲಕ್ಕಾಡಿಯವರಿಗೆ ಧನ ಸಹಾಯ ನೀಡಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಬರೀಶ ಕಲಾ ಕೇಂದ್ರದ ವಿದ್ಯಾರ್ಥಿನಿ ಶ್ರೀರಕ್ಷಾ, ಅನುಪಮಾ, ಭವಿಷ್ಯರವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here