ನ.19ಕ್ಕೆ ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

0

ಪುತ್ತೂರಿನಿಂದ 10ಸಾವಿರಕ್ಕೂ ಮಿಕ್ಕಿ ಮಂದಿ ಮಂಗಳೂರಿಗೆ – ಗೌಡ ಸಂಘದಿಂದ ಪತ್ರಿಕಾಗೋಷ್ಠಿ

ಪುತ್ತೂರು: ನ.19ರಂದು ಮಂಗಳೂರಿನ ಬಾವುಟಗುಡೆಯಲ್ಲಿ ಸ್ವಾತಂತ್ರ್ಯದ ಸಮರ ವೀರ, ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪುತೂರು ತಾಲೂಕಿನಿಂದ ಸುಮಾರು 10ಸಾವಿರಕ್ಕೂ ಮಿಕ್ಕಿ ಮಂದಿ ಮಂಗಳೂರಿಗೆ ತೆರಳಲಿದ್ದಾರೆ ಎಂದು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಜಿಲ್ಲಾ ಸಮಿತಿ ಸದಸ್ಯ ಮೋಹನ್ ಗೌಡ ಇಡ್ಯಡ್ಕ ಅವರು ಹೇಳಿದ್ದಾರೆ.

ಅವರು ಪುತ್ತೂರು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆದಂಬಾಡಿ ರಾಮಯ್ಯ ಗೌಡರ ಹೋರಾಟಕ್ಕೆ ಗೌರವ ಪೂರ್ವಕವಾಗಿ ಸರಕಾರ ಪ್ರತಿಮೆ ಸ್ಥಾಪಿಸಿ ಲೋಕಾರ್ಪಣೆ ಮಾಡುತ್ತಿರುವುದು ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕಿದ ಗೌರವ. ಬ್ರಿಟೀಷರ ಆಡಳಿತವನ್ನು ಪ್ರಥಮವಾಗಿ ಕೊನೆಗೊಳಿಸಿದ ಕೀರ್ತಿ ರಾಮಯ್ಯ ಗೌಡರದ್ದು, ಅವರು ಬ್ರಿಟೀಷರೊಂದಿಗೆ ಹೋರಾಡಿ ಹುತಾತ್ಮರಾದರು. ಇದೀಗ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದ್ದು, ನ.19ರಂದು ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಸುಮಾರು 10ಸಾವಿರ ಮಂದಿ ತೆರಳಲಿದ್ದಾರೆ ಎಂದರು.

ಮುಂದಿನ ಜನಾಂಗಕ್ಕೆ ನೆನಪಿಸುವ ಕಾರ್ಯ:

ಸ್ಮಾರಕ ಉಸ್ತುವಾರಿ ಜಿಲ್ಲಾ ಸಮಿತಿಯ ಇನ್ನೋರ್ವ ಸದಸ್ಯ ಚಿದಾನಂದ ಬೈಲಾಡಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟವನ್ನು ಮುಂದಿನ ಜನಾಂಗಕ್ಕೆ ನೆನಪಿಸುವ ನಿಟ್ಟಿನಲ್ಲಿ ಸ್ಮಾರಕವನ್ನು ಈಗಾಗಲೇ ಮೆರವಣಿಗೆಯ ಮೂಲಕ ಬಾವುಟಗುಡ್ಡೆಯಲ್ಲಿ ಸ್ಥಾಪಿಸಲಾಗಿದೆ. ನ.19ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇದರ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾಚನದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮವು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಮಹಾಹನಗರ ಪಾಲಿಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದೆ. ಬೆಳಿಗ್ಗೆ ಬಾವುಟ ಗುಡ್ಡೆಯಲ್ಲಿ ಲೋಕಾರ್ಪಣೆ ನಡೆಯಲಿದ್ದು, ಬಳಿಕ ನೆಹರು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ತೆರಳುವ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳಲ್ಲಿ ಸಭೆ ನಡೆಸಲಾಗಿದೆ. ಶಾಸಕರ ನೇತೃತ್ವದಲ್ಲಿ5ಕ್ಕಿಂತಲೂ ಹೆಚ್ಚು ಸಭೆ ನಡೆಸಲಾಗಿದೆ. ಒಟ್ಟಿನಲ್ಲಿ ಪುತ್ತೂರಿನಿಂದ 50 ಬಸ್‌ಗಳು ಮತ್ತು ಖಾಸಗಿ ವಾಹನ ಸೇರಿದಂತೆ 10ಸಾವಿರಕ್ಕೂ ಅಧಿಕ ಮಂದಿ ಮಂಗಳೂರಿಗೆ ತೆರಳುವ ಸಿದ್ಧತೆ ನಡೆದಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ, ಒಕ್ಕಲಿಗ ಗೌಡ ಸೇವಾ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here