ಕೋಡಿಂಬಾಡಿಯಲ್ಲಿ ಮಹಿಳೆಯರು ನಿರ್ಮಿಸಿದ ಶೆಡ್ ತೆರವು ಮಾಡುವಂತೆ ದೂರು

0

ಅಧಿಕಾರಿಗಳಿಂದ ಪರಿಶೀಲನೆ; ಪಕ್ಕದಲ್ಲಿರುವ ಕಟ್ಟಡವನ್ನೂ ತೆರವುಗೊಳಿಸಲು ಆಗ್ರಹ

ಪುತ್ತೂರು: ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಒತ್ತುವರಿ ಮಾಡಿ ಇಬ್ಬರು ಮಹಿಳೆಯರು ಶೆಡ್ ನಿರ್ಮಿಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಘಟನೆ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಬಳಿಯ ಬದಿನಾರು ಎಂಬಲ್ಲಿ ನಡೆದಿದೆ. ಅಕ್ರಮ ಎಂದು ಹೇಳಲಾಗುತ್ತಿರುವ ಎರಡು ಶೆಡ್‌ಗಳ ಪಕ್ಕದಲ್ಲಿಯೇ ಇನ್ನೊಂದು ಕಟ್ಟಡ ಈಗಾಗಲೇ ನಿರ್ಮಾಣ ಆಗಿದ್ದರೂ ಅದನ್ನು ತೆರವು ಮಾಡದೆ ನಮ್ಮ ಶೆಡ್‌ಗಳನ್ನು ಮಾತ್ರ ತೆರವು ಮಾಡಲು ರಾಜಕೀಯ ವ್ಯಕ್ತಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾದ ಘಟನೆ ಈ ಸಂದರ್ಭದಲ್ಲಿ ನಡೆಯಿತು.

ಘಟನೆಯ ಹಿನ್ನೆಲೆ:
ಕೋಡಿಂಬಾಡಿ ಗ್ರಾಮದ ಸೇಡಿಯಾಪು ಬಳಿಯ ಬದಿನಾರು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಒತ್ತುವರಿ ಮಾಡಿ ಇಬ್ಬರು ಶೆಡ್ ನಿರ್ಮಿಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಅಕ್ರಮ ಎಂದು ಹೇಳಲಾಗುತ್ತಿರುವ ಈ ಎರಡು ಶೆಡ್‌ಗಳ ಪಕ್ಕದಲ್ಲಿಯೇ ಇನ್ನೊಂದು ಕಟ್ಟಡವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದ್ದರೂ ಅದನ್ನು ತೆರವು ಮಾಡದೆ ನಮ್ಮ ಶೆಡ್‌ಗಳನ್ನು ಮಾತ್ರ ತೆರವು ಮಾಡಲು ರಾಜಕೀಯ ವ್ಯಕ್ತಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತವಾಯಿತು. ನಮ್ಮ ಶೆಡ್ ಪಕ್ಕದಲ್ಲಿ ಮತ್ತೊಂದು ಕಟ್ಟಡವನ್ನು ಸ್ಥಳೀಯ ಪವಿತ್ರ ಎಂಬವರು ಈ ಹಿಂದೆಯೇ ನಿರ್ಮಿಸಿದ್ದಾರೆ. ಅದಕ್ಕೆ ಕಂದಾಯ ಇಲಾಖೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದ್ದರಿಂದ ಅದೇ ನಿಯಮವನ್ನು ನಮ್ಮ ಎರಡು ಶೆಡ್‌ಗಳಿಗೂ ಅನುಸರಿಸಬೇಕು ಎಂದು ಶೆಡ್ ನಿರ್ಮಿಸಿರುವ ವಿನೋದಾ ಮತ್ತು ಅಕ್ಷತಾ ಹಾಗೂ ಅವರ ಬೆಂಬಲಿಗರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು. ಬಡವರಾದ ನಾವು ನಿರ್ಮಿಸಿರುವ ಶೆಡ್‌ಗಳನ್ನು ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ರಾಜಕೀಯ ಶಕ್ತಿ ಇರುವ ಇನ್ನೊಬ್ಬರು ಇಲ್ಲಿ ನಿರ್ಮಿಸಿರುವ ಕಟ್ಟಡ ತೆರವು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಎಂದು ತಾರತಮ್ಯ ಮಾಡಲಾಗುತ್ತಿದೆ. ಆದ್ದರಿಂದ ನಮಗೂ ನ್ಯಾಯ ದೊರಕಿಸಿಕೊಡಿ ಎಂದು ವಿನೋದಾ ಮತ್ತು ಅಕ್ಷತಾ ಆಗ್ರಹಿಸಿದರು. ಫಲಾನುಭವಿಗಳ ಮನವಿ ಆಲಿಸಿದ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು, ಇನ್ನೊಮ್ಮೆ ಬಂದು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿ ಅಲ್ಲಿಂದ ತೆರಳಿದರು. ಸ್ಥಳೀಯರಾದ ವಾಸಪ್ಪ ಗೌಡ ದಾರಂದಕುಕ್ಕು, ಗಣೇಶ್ ಹೆಗ್ಡೆ, ರಂಜಿತ್ ಕುಲಾಲ್, ತಿಲಕ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಸಾಮಾಜಿಕ ನ್ಯಾಯ ನೀಡಬೇಕು-ಜಯಪ್ರಕಾಶ್ ಬದಿನಾರು;
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವೇಳೆ ಸ್ಥಳದಲ್ಲಿದ್ದ ಕೋಡಿಬಾಂಡಿ ಗ್ರಾ. ಪಂ ಸದಸ್ಯ ಜಯಪ್ರಕಾಶ್ ಬದಿನಾರು ಅವರು ಮಾತನಾಡಿ ಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಹ ಧೋರಣೆ ಮಾಡಬಾರದು. ಶಾಸಕರು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಬಡವರಿಗೆ ಸಾಮಾಜಿಕ ನ್ಯಾಯ ನೀಡಬೇಕು. ಪಕ್ಕದವರಿಗೆ 94 ಸಿ ಹಕ್ಕು ಪತ್ರ ಮತ್ತು ಡೋರ್ ನಂಬರ್ ನೀಡಿದ್ದಾರೆ. ಆದೇ ಮಾನದಂಡದ ಪ್ರಕಾರ ವಿನೋದಾ ಮತ್ತು ಅಕ್ಷತಾರವರಿಗೂ ಅವಕಾಶ ಮಾಡಿಕೊಡಬೇಕು. ಬಡವರಿಗೆ ಅನ್ಯಾಯವಾದರೆ ಅವರ ಜೊತೆ ನಿಂತು ನ್ಯಾಯ ಸಿಗುವವರೆಗೂ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here