ಫಲಿತಾಂಶದ ಜೊತೆಗೆ ಮೂಲಭೂತ ಸೌಲಭ್ಯಗಳಲ್ಲಿಯೂ ಉಪ್ಪಳಿಗೆ ಪ್ರೌಢಶಾಲೆ ಮಾದರಿ-ಸಂಜೀವ ಮಠಂದೂರು
ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಇದರ ವತಿಯಿಂದ ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಡ ಶಾಲೆಯಲ್ಲಿ ಅಮೃತ ಶಾಲಾ ಯೋಜನೆಯಲ್ಲಿ ನಿರ್ಮಾಣಗೊಂಡ ಶಾಲಾ ನೂತನ ಕಟ್ಟಡ, ಶೌಚಾಲಯ, ಶಾಸಕರ ವಿಶೇಷ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ವಿವೇಕ ಶಾಲಾ ಕೊಠಡಿ ಸೌಲಭ್ಯ ಯೋಜನೆಯಲ್ಲಿ ನೂತನ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ಶಿಲಾನ್ಯಾಸವು ನ.14 ರಂದು ನೆರವೇರಿತು.
ನೂತನ ಕೊಠಡಿಯನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯು ಸತತ ಶೇ.100 ಫಲಿತಾಂಶ ಪಡೆಯುವುದರ ಜೊತೆಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಈಡೇರಿಸುವಲ್ಲಿಯೂ ಮಾದರಿ ಶಾಲೆಯಾಗಿದೆ. ಈ ಶಾಲೆಯು ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಯಾಗಲು ಎಲ್ಲಾ ಅರ್ಹತೆಗಳನ್ನು ಒಳಗೊಂಡಿದೆ. ಸರಕಾರದ ಸವಲತ್ತಗಳನ್ನು ಸದುಪಯೋಗಪಡಿಸಿಕೊಂಡಾಗ ಅಭಿವೃದ್ಧಿ ಸಾಧ್ಯವಿದ್ದು ಈ ಎಲ್ಲಾ ಅವಕಾಶಗಳನ್ನು ಉಪ್ಪಳಿಗೆ ಪ್ರೌಢಶಾಲೆ ಸದುಪಯೋಗ ಪಡಿಸಿಕೊಂಡಿದೆ. ಕಳೆದ 4 ವರ್ಷಗಳಲ್ಲಿ ಉಪ್ಪಳಿಗೆ ಶಾಲೆಗೆ ಒಟ್ಟು ರೂ.45ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದ ಶಾಸಕರು ಶೈಕ್ಷಣಿಕ ವಿಚಾರ, ಶಾಲೆ, ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕರ ಏಕಕಾಲದಲ್ಲಿ ಚಿಂತಿಸಿ ಮುನ್ನಡೆದಾಗ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿ ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಪುತ್ತೂರಿಗೆ ಒಟ್ಟು 35 ಶಾಲಾ ಕೊಠಡಿಗಳು ಮಂಜೂರಾಗಿದೆ. ಅವುಗಳ ಆರು ತಿಂಗಳಲ್ಲಿ ಪೂರ್ಣಗಹೊಂಡು ಮೇ. ಅಂತ್ಯಕ್ಕೆ ಹಸ್ತಾರಗೊಂಡು ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಅದರಲ್ಲಿ ಪ್ರಾರಂಭಗೊಳ್ಳಿಲದೆ ಎಂದರು. ಉಪ್ಪಳಿಗೆ ಪ್ರೌಢ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ವ್ಯವಸ್ಥಿತವಾಗಿದೆ. ಇಲ್ಲಿನ ವಿದ್ಯಾರ್ಥಿಗಳೂ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಅಧಿಕಾರಿಗಳಾಗಿ ಬರಬೇಕು ಎಂದರು.
ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್, ಬ್ರೈಟ್ ವೇ ಇಂಡಿಯಾ ಕನ್ಸಲ್ಟನ್ಸಿ ಆಂಡ್ ಅಲೈಡ್ ಸರ್ವೀಸ್ ಮಂಗಳೂರು ಇದರ ನಿರ್ದೇಶಕ ಮನಮೋಹನ ರೈ ಚೆಲ್ಯಡ್ಕ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಉಮಾವತಿ ಎಸ್ ಮಣಿಯಾಣಿ, ವಿದ್ಯಾಶ್ರೀ ಸುರೇಶ್, ಗೋಪಾಲ ಎಸ್ ಬೈಲಾಡಿ, ಪಿಡಿಓ ಸೌಮ್ಯ ಎಂ.ಎಸ್, ಇರ್ದೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ ಬೈಲಾಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ ಎಂ ಹಾಗೂ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪ್ರಕಾಶ್ ರೈ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿಕೊಟ್ಟ ಶಾಸಕ ಸಂಜೀವ ಮಠಂದೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಉದ್ಘಾಟನೆ, ಶಿಲಾನ್ಯಾಸಗೊಂಡ ಕಾಮಗಾರಿಗಳು:
ಶಾಲೆಯಲ್ಲಿ ಅಮೃತ ಶಾಲಾ ಸೌಲಭ್ಯ ಯೋಜನೆಯಲ್ಲಿ ರೂ.10 ಲಕ್ಷ ದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಬಾಲಕೀಯರ ಶೌಚಾಲಯ, ಶಾಸಕರ ವಿಶೇಷ ಅನುದಾನ ಯೋಜನೆಯಡಿ ರೂ.3.30 ಲಕ್ಷದಲ್ಲಿ ನಿರ್ಮಾಣಗೊಂಡ ಸ್ಮಾರ್ಟ್ ಕ್ಲಾಸ್, ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿತು. ವಿವೇಕಾ ಶಾಲಾ ಕೊಠಡಿ ಸೌಲಭ್ಯ ಯೋಜನೆಯ ರೂ.32.80 ಲಕ್ಷ ಅನುದಾನ ನೂತನ ಶಾಲಾ ಕೊಠಡಿ ಹಾಗೂ ನರೇಗಾ ಯೋಜನೆಯ ರೂ.4.70 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಬಾಲಕರ ಶೌಚಾಲಯದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಮುಖ್ಯ ಶಿಕ್ಷಕ ನಾರಾಯಣ ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಮಚಂದ್ರ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಕೃಷ್ಣ ಪಡುಮಲೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.