ಸಹಕಾರಿ ತತ್ವದಡಿ ಗ್ರಾಹಕರಿಗೆ ಕ್ಷಿಪ್ರ ನೆರವು: ಹರೀಶ್ ಪೂಂಜ
ಉಜಿರೆ: ಜನಸಾಮಾನ್ಯರ ಆರ್ಥಿಕ ವ್ಯವಹಾರ,ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರ ಸಂಘಗಳ ಕ್ಷಿಪ್ರ ನೆರವು ಪ್ರಮುಖ ಕಾರಣವಾಗಿದೆ. ಸಹಕಾರ ಸಂಘಗಳು ಸಹಕಾರಿ ತತ್ವದಡಿ ಜನಸಾಮಾನ್ಯರ ಅವಶ್ಯಕತೆ, ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಆರ್ಥಿಕ ಶಕ್ತಿ ನೀಡುತ್ತಿವೆ. ತುಳುನಾಡಿನ ಮಣ್ಣಿನಲ್ಲಿ ಆರ್ಥಿಕ ಶಕ್ತಿ ಅಡಗಿದ್ದು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13 ನೇ ಮಡಂತ್ಯಾರು ಶಾಖೆಯನ್ನು ಅವರು ನ.14 ರಂದು ಉದ್ಘಾಟಿಸಿ ಮಾತನಾಡಿದರು. ಸಂಘವು ಇನ್ನಷ್ಟು ಶಾಖೆಗಳನ್ನು ತೆರೆದು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿ ಮುಂದೆ ಬ್ಯಾಂಕ್ ಆಗಿ ದೇಶಕ್ಕೆ ಶಕ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯವಹಾರಕ್ಕೂ ವಿಶ್ವಾಸಕ್ಕೂ ಹತ್ತಿರದ ಸಂಬಂಧವಿದೆ. ಸ್ವಂತದ ಜತೆಗೆ ಸಮಾಜವನ್ನು ಗಮನಿಸುವವರು ಜನರ ಬಗೆಗೆ ಕಳಕಳಿ, ಸೇವೆಯ ಮನೋಭಾವ ಹೊಂದಿ ವಿಶ್ವಾಸದ ಆಧಾರದಲ್ಲಿ ಬೆಳೆದರೆ ಸಂಸ್ಥೆ ಯಶಸ್ಸು ಕಾಣುತ್ತದೆ. ಹೊಸ ಸಂಘಗಳಿಂದ ಮಡಂತ್ಯಾರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಶಾಖೆಯ ಭದ್ರತಾ ಕೊಠಡಿಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ರೆ| ಫಾ| ಬೇಸಿಲ್ ವಾಸ್ ಉದ್ಘಾಟಿಸಿ ಮಾತನಾಡಿ ಸಂಘದ ಸೇವೆಯ ಪರಿಮಳ ಎಲ್ಲೆಡೆ ಪಸರಿಸಿ, ಸುಭದ್ರವಾದ ಸೊಸೈಟಿ ರೈತರ ಆಸೆ, ಆಕಾಂಕ್ಷೆಗಳನ್ನು ಪೂರೈಸಿ ಭದ್ರತಾ ಕೊಠಡಿ ಅಕ್ಷಯ ಪಾತ್ರೆಯಾಗಿ ತುಂಬಿ ತುಳುಕಲಿ ಎಂದು ಶುಭ ಹಾರೈಸಿದರು.
ಮಡಂತ್ಯಾರು ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿಠಲ ಶೆಟ್ಟಿ ಮೂಡಾಯೂರುರವರು ನಾರಾಯಣ ಶೆಟ್ಟಿ ಅವರಿಗೆ ವಿತರಿಸಿದರು. ಶಾಖೆಯ ಕಂಪ್ಯೂಟರ್ ಕೊಠಡಿಯನ್ನು ನಿವೃತ್ತ ಉಪ ತಹಶೀಲ್ದಾರ್ ಬಿ. ಅಬ್ದುಲ್ ರಹಿಮಾನ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಪಿ. ಅನಿಲ್ ಕುಮಾರ್, ಪೊಂಪೈ ಸಂಕೀರ್ಣದ ಮಾಲಕ ಜೇಸನ್ ರೋಡ್ರಿಗಸ್, ಸಂಘದ ಉಪಾಧ್ಯಕ್ಷ ಸುಂದರ್ ರೈ ಸವಣೂರು ಉಪಸ್ಥಿತರಿದ್ದರು. ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಸುಸ್ಸಾನ ಶುಭ ಕೋರಿದರು. ಶಾಖೆಯ ವಿನ್ಯಾಸಕಾರ ಸಚ್ಚಿದಾನಂದ ರವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ.ನಾರಾಯಣ ಭಟ್, ಜಯಪ್ರಕಾಶ್ ರೈ, ಅಶ್ವಿನ್ ಎಲ್. ಶೆಟ್ಟಿ, ಸೀತಾರಾಮ ಶೆಟ್ಟಿ, ಪೂರ್ಣಿಮಾ ಎಸ್. ಆಳ್ವ, ಯಮುನಾ ಎಸ್. ರೈ, ಮಹಾಬಲ ರೈ, ಬಾಪು ಸಾಹೇಬ್, ರಾಮಯ್ಯ ರೈ, ಚಿಕ್ಕಪ್ಪ ನಾಕ್, ಜೈರಾಜ್ ಭಂಡಾರಿ, ಮಹಾದೇವ ಎಂ. ಉಪಸ್ಥಿತರಿದ್ದರು.
ಪ್ರಜ್ಞಾಶ್ರೀ ಪ್ರಾರ್ಥಿಸಿ, ಸಂಘದ ಮಹಾ ಪ್ರಬಂಧಕ ವಸಂತ ಜಾಲಾಡಿ ವಂದಿಸಿದರು. ಉಜಿರೆಯ ನಿವೃತ್ತ ಶಾಖಾ ವ್ಯವಸ್ಥಾಪಕ ಸಾಂತೂರು ಶ್ರೀನಿವಾಸ ತಂತ್ರಿ ನಿರೂಪಿಸಿದರು.
ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಸ್ವಾಗತಿಸಿ, ಪ್ರಸ್ತಾವಿಸಿ ಸಂಘವು ೧೦೫ ಕೋಟಿ ಠೇವಣಿ ಹೊಂದಿದ್ದು ಅಗತ್ಯವುಳ್ಳವರಿಗೆ ಶೀಘ್ರ ಸಾಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೂತನ ಮಡಂತ್ಯಾರು ಶಾಖೆಯಲ್ಲಿ ರೂ.೨ ಕೋಟಿ ಠೇವಣಿ ಸಂಗ್ರಹವಾಗಿದೆ. ಸಂಘದ ಬೆಳವಣಿಗೆಯ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿದೆ ಸಂಘವು ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ನೀಡಲು ಬದ್ಧವಾಗಿದೆ ಎಂದರು.