ನ.19 ಕ್ಕೆ ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

0

ಊರಿನ ಎಲ್ಲಾ ಜನರು ಭಾಗವಹಿಸುವಂತೆ ಶಾಸಕ ಸಂಜೀವ ಮಠಂದೂರು ಮನವಿ

ಪುತ್ತೂರು: 1837 ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಅವರನ್ನು ಓಡಿಸಿ 12  ದಿನ ಆಡಳಿತ ಮಾಡಿದ ಕೆದಂಬಾಡಿ ರಾಮಯ್ಯ ಗೌಡರು ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ. ಅವರನ್ನು ನೆನಪಿಸುವ ಕೆಲಸ ನಮ್ಮ ಸರಕಾರದಿಂದಾಗಿದೆ. ನ.19 ಕ್ಕೆ ಬಾವುಟಗುಡ್ಡೆಯಲ್ಲಿ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಊರಿನ ಎಲ್ಲಾ ಜನರು ಭಾಗವಹಿಸುವಂತೆ ಶಾಸಕ ಸಂಜೀವ ಮಠಂದೂರು ವಿನಂತಿಸಿದ್ದಾರೆ.


ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇದರ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರ ಸಚಿವ ಸುನಿಲ್ ಕುಮಾರ್, ಬಂದರು ಮೀನುಗಾರಿಕೆ ಸಚಿವ ಎಸ್.ಅಂಗಾರ ಮತ್ತು ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನಿಷ್ಠ 50 ಸಾವಿರ ಮಂದಿ ಜನರು ಭಾಗವಹಿಸಲಿದ್ದಾರೆ.

ಪುತ್ತೂರು ತಾಲೂಕಿನಿಂದ 10ಸಾವಿರ ಮಂದಿ ಜನರನ್ನು ಕಾರ್ಯಕ್ರಮದಲ್ಲಿ ಜೋಡಣೆ ಮಾಡುವ ಕೆಲಸ ಆಗಿದೆ. ಈಗಾಗಲೇ 75 ಬಸ್‌ಗಳನ್ನು ಮಾತನಾಡಿ ಆಗಿದೆ. ಉಳಿದಂತೆ ಖಾಸಗಿ ವಾಹನಗಳು ಮಂಗಳೂರಿಗೆ ತೆರಳಲಿದೆ. ಒಟ್ಟಿನಲ್ಲಿ ರೈತ ತನ್ನನ್ನು ತಾನು ಹೇಗೆ ಸ್ವಾತಂತ್ರ್ಯಕ್ಕೆ ಸಮರ್ಪಣೆ ಮಾಡಿದ್ದಾನೆ ಎಂಬುದನ್ನು ಮತ್ತೊಮ್ಮೆ ಮುಂದಿನ ಪೀಳಿಗೆಗೆ ನೆನಪಿಸುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ ಎಂದರು.

ಪುತ್ತೂರಿನಲ್ಲಿ ಕೋಟಿಚೇನ್ನಯ ಪ್ರತಿಮೆ:
ಪುತ್ತೂರಿನ ಇತಿಹಾಸದಲ್ಲಿ ಕೋಟಿ ಚೆನ್ನಯರು ದೈವಾಂಶ ಸಂಭೂತರು. ಅನ್ಯಾಯದ ವಿರುದ್ಧ ಹೋರಾಡಿದವರು. ಇವತ್ತು ಕೋಟಿ ಚೆನ್ನಯರನ್ನು ಕೂಡಾ ಸಮಾಜ ಸ್ಮರಿಸಬೇಕು. ಈ ನಿಟ್ಟಿನಲ್ಲಿ ಪುತ್ತೂರಿನಲ್ಲೇ ಅವರ ನೆನಪು ಶಾಶ್ವತವಾಗಿ ಉಳಿಸಲು ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಮಾಡಲು ನಗರಸಭೆ ಕೌನ್ಸಿಲ್ ಮೀಟಿಂಗ್‌ನಲ್ಲಿ ಪಾಸ್ ಮಾಡಿ, ಜಿಲ್ಲಾಧಿಕಾರಿಗೆ ಕಳುಹಿಸಿ, ಅಲ್ಲಿಂದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ, ಅಲ್ಲಿಂದ ಮತ್ತೆ ಕೆಎಸ್ಸಾರ್ಟಿಸಿ ಮ್ಯಾನೆಂಜಿಂಗ್ ಡೈರೆಕ್ಟರ್‌ಗೆ ಮತ್ತು ಸಾರಿಗೆ ಇಲಾಖೆಗೆ ಕಳುಹಿಸಿ ಮಂಜೂರಾತಿ ಮಾಡುವ ಕೆಲಸ ನಮ್ಮ ಸರಕಾರದಿಂದ ಆಗಿದೆ. ಕೇವಲ ನಾಮಕರಣ ಮಾತ್ರವಲ್ಲ ಕೋಟಿ ಚೆನ್ನಯರ ಪ್ರತಿಮೆಯನ್ನು ಅಲ್ಲಿ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕುರಿತು ಸಮುದಾಯ ಮತ್ತು ಸಂಘ ಸಂಸ್ಥೆಗಳಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಶಾಸಕರು ಹೇಳಿದರು.

ಕಾಂಗ್ರೆಸ್ ಯೋಚನೆ ಮಾಡದನ್ನು ಬಿಜೆಪಿ ಮಾಡಿದೆ:
ವಲ್ಲಭಬಾಯಿ ಪಟೇಲರ ಪ್ರತಿಮೆ, ಕೆಂಪೇಗೌಡರ ಪ್ರತಿಮೆಗೂ ಅಪರಸ್ವರ ಬಂದಿದೆ. ಮುಂದೆ ರಾಮಯ್ಯ ಗೌಡರ ಪ್ರತಿಮೆ ಆಗುವಾಗಲು ಅಪಸ್ವರ ಬರುವುದು ಸಹಜ. ಕೆಲವು ವಿಘ್ನ ಸಂತೋಷಿಗಳು, ರಾಜಕೀಯವೇ ನಮ್ಮ ಜೀವನ ಎಂದು ಹೇಳುವವರು, ಮುಂದಿನ ಚುನಾವಣೆಗೆ ಬೇಳೆ ಬೆಯಿಸುವವರು ಇಂತಹ ಕ್ಷುಲ್ಲಕ ವಿಚಾರ ಇಟ್ಟುಕೊಂಡು ಇವತ್ತು ಅಪಸ್ವರ ಎಬ್ಬಿಸುವ ಕೆಲಸ ಮಾಡುತ್ತಾರೆ.

ಸುಮಾರು 75 ವರ್ಷದಲ್ಲಿ ಸರಿ ಸುಮಾರು ಬಿಜೆಪಿ 15 ವರ್ಷ ಆಡಳಿತ ಮಾಡಿದೆ. ಆದರೆ ಉಳಿದ 60 ವರ್ಷ ಕಾಂಗ್ರೆಸ್ ಮತ್ತು ನಡುವೆ ಜೆಡಿಎಸ್ ಆಡಳಿತ ಮಾಡಿದೆ. ಆಗ ಅವರು ಯೋಚನೆ ಮಾಡದನ್ನು ಈಗ ಬಿಜೆಪಿ ಯೋಚನೆ ಮಾಡಿ ರಾಷ್ಟ್ರಕ್ಕಾಗಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಯಾರೆಲ್ಲಾ ಹೋರಾಡಿದ್ದಾರೋ ಇಂತವರನ್ನು ಸ್ಮರಿಸುವ ಕೆಲಸ ಮಾಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ದರ್ಬೆ ವೃತ್ತ ನಾಮಕರಣ ಗೊಂದಲ ಕೋರ್ಟ್ ಅಂಗಳದಲ್ಲಿ:
ದರ್ಬೆ ವೃತ್ತದ ನಾಮಕರಣ ವಿಚಾರದಲ್ಲಿ ದಿ.ಕೋಚಣ್ಣ ರೈ ಅವರ ಹೆಸರು ಇಡಬೇಕೆಂದು ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿ ನೀಡಿದ ಮನವಿಯಂತೆ ನಿರ್ಣಯ ಆಗಿ ಜಿಲ್ಲಾಧಿಕಾರಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಆಕ್ಷೇಪಣೆ ಅರ್ಜಿ ಪ್ರಕಟಿಸಿದಾಗ ದಲಿತ ಸಂಘಟನೆ ಸೇರಿದಂತೆ ಸುಮಾರು18 ಅರ್ಜಿಗಳು ಬೇರೆ ನಾಮಕರಣಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿಗೆ ಮತ್ತೆ ಕಳುಹಿಸುವ ಕೆಲಸ ನಾವು ಮಾಡಿದ್ದೇವೆ.

ಈ ನಡುವೆ ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯವರು ಕೋಚಣ್ಣ ರೈ ಅವರ ಹೆಸರು ಇಡಲೇ ಬೇಕೆಂದು ನಗರಸಭೆಯನ್ನು ಪಾರ್ಟಿ ಮಾಡಿ ಉಚ್ಚನ್ಯಾಯಾಲಯದ ಮೆಟ್ಟಲೇರಿದ್ದಾರೆ. ಕಾನೂನು ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ ಅವರು ದರ್ಬೆ ವೃತ್ತಕ್ಕೆ ಡಾ.ಬಿ.ಆರ್ ಅಂಬೇಡ್ಕರ್, ಕ್ಯಾಂಪ್ಕೋ ಸರ್ಕಲ್, ಮಾಜಿ ಶಾಸಕ ಕೂಜುಗೋಡು ವೆಂಕಟ್ರಮಣ ಗೌಡ, ದಿ.ಮುತ್ತಪ್ಪ ರೈ ಅವರ ಹೆಸರು ಇಡಬೇಕೆಂದೂ ಅರ್ಜಿಗಳು ಬಂದಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here