ನ.20: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಪದಗ್ರಹಣ

0

ಬ್ರಹ್ಮೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಗಳ ಸಂಸ್ಮರಣೆ

ಪುತ್ತೂರು: 1 ವರ್ಷದಿಂದೀಚೆಗೆ ಕಾರ್ಯಾರಂಭಿಸಿದ ಬಂಟ್ವಾಳ ಮೆಲ್ಕಾರಿನ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಾಕಾಚಾರ್ಯ ಸಂಸ್ಥಾನ ಎಡನೀರು ಮಠದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳವರ ಸಂಸ್ಮರಣೆ ಮತ್ತು ಪ್ರತಿಷ್ಠಾನದ ಪುತ್ತೂರು ಘಟಕದ ಪದಗ್ರಹಣ ಸಮಾರಂಭ ನ.20ರಂದು ಬೆಳಿಗ್ಗೆ ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರೀಯ ಸಮಿತಿಯ ಸಹಸಂಚಾಲಕ ಭಾಸ್ಕರ ಬಾರ್ಯ ಹೇಳಿದ್ದಾರೆ.

ನ.16ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನವು 50 ವರ್ಷ ಮೇಲ್ಪಟ್ಟ ಹಿರಿಯರನ್ನು ಒಟ್ಟುಗೂಡಿಸುವ ಮೂಲಕ ಅವರ ಸಮಸ್ಯೆಗಳು, ಅಹವಾಲುಗಳಿಗೆ ಸ್ಪಂದಿಸುವ ಧ್ಯೇಯಗಳನ್ನು ಇಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಪ್ರತಿಷ್ಠಾನವು ಜಿಲ್ಲೆಯಲ್ಲಿ 7 ಘಟಕಗಳನ್ನು ಹೊಂದಿದ್ದು, ಪ್ರತೀ ತಿಂಗಳ ಎರಡನೇ ಶನಿವಾರ ಕೇಂದ್ರೀಯ ಸಮಿತಿಯ ಸಾಮಾನ್ಯ ಸಭೆ ನಡೆಯುತ್ತಿದೆ. ಇದೀಗ ಪುತ್ತೂರು ಘಟಕವು ಅಸ್ತಿತ್ವಕ್ಕೆ ಬಂದಿದ್ದು, ನ.20ರಂದು ಇದರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರು. ಬೆಳಿಗ್ಗೆ ಗಣಪತಿ ಹೋಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಯವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಕಾಲೇಜಿನ ವಿಶ್ರಾಂತ ಪಾಂಶುಪಾಲ ಕೆ. ರಾಜೇಂದ್ರ ಕಲ್ಲೂರಾಯ ಸಂಸ್ಮರಣಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದ್ದು, ಪುತ್ತೂರು ಘಟಕದ ಕಾರ್ಯಾಧ್ಯಕ್ಷ ಜಿ. ಮಹಾಬಲ ರೈ ಒಳತ್ತಡ್ಕರವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅ.ಕ.ಹಿ. ಪ್ರತಿಷ್ಠಾನ ಬಂಟ್ವಾಳದ ಗೌರವಾಧ್ಯಕ್ಷ ಎ.ವಿ. ನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ವಿಜಯ ಬ್ಯಾಂಕ್‌ನ ನಿವೃತ್ತ ಎ.ಜಿ.ಎಂ. ಜಗಜೀವನದಾಸ ರೈ, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಅ.ಕ.ಹಿ.ಪ್ರತಿಷ್ಠಾನ ಬಂಟ್ವಾಳದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್, ಕಲ್ಲೇಗ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಭೋಜನದ ವ್ಯವಸ್ಥೆಯಿದ್ದು, ಅಪರಾಹ್ನ 1.30 ರಿಂದ ಪ್ರಸಿದ್ಧ ಕಲಾವಿದರಿಂದ ‘ಸುಭದ್ರಾ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪ್ರತಿಷ್ಠಾನದ ಘಟಕ ಆರಂಭ: ಹಿರಿಯರ ಜೀವನವು ಕಾಲ ಹರಣವಾಗದೆ ಆತ್ಮ ಗೌರವದೊಂದಿಗೆ ಅವರ ಚೈತನ್ಯದ ಅನಾವರಣವಾಗಬೇಕೆಂಬ ಉದ್ದೇಶದಿಂದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಪ್ರತಿಷ್ಠಾನದ ಸದಸ್ಯರಾಗಿ ತಮ್ಮ ಕ್ಷೇತ್ರದ ಅನುಭವವನ್ನು ಸಮಷ್ಟಿಯ ಹಿತಕ್ಕೆ ಬಳಸಿಕೊಳ್ಳಲು ಅವಕಾಶಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಷ್ಠಾನದ ಘಟಕಗಳನ್ನು ಆರಂಭಿಸಲಾಗಿದ್ದು, ಅದರ ಪ್ರಾಥಮಿಕ ಉದ್ದೇಶಗಳನ್ನು ಈಡೇರಿಸುವಲ್ಲಿ ಹೆಜ್ಜೆಯನ್ನು ಇರಿಸಿದೆ. ಕೃಷಿ ಆರೋಗ್ಯ, ಪರಿಸರ ಸಂರಕ್ಷಣೆ, ಸಂಸ್ಕಾರ, ಶಿಕ್ಷಣಕ್ಕೆ ಮಹತ್ವವನ್ನು ನೀಡಿದೆ. ಹಿರಿಯ ಸಾಧಕರನ್ನು ಗೌರವಿಸುವುದು ಮತ್ತು ಅಶಕ್ತರಿಗೆ ನೆರವು, ರಕ್ತದಾನ ಶಿಬಿರ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದೆ. ಹಿರಿಯರ ಅಪೇಕ್ಷೆ ಮತ್ತು ಅವರ ಸಾಮಾಜಿಕ ಅಗತ್ಯಗಳನ್ನು ಪೂರೈಸುವುದು, ಸನಾತನ ಸಂಸ್ಕೃತಿ ಮತ್ತು ಕುಟುಂಬ ಜೀವನದ ಸಂಬಂಧಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸುವ ಚಿಂತನೆ ಇದೆ. ಕಾಸರಗೋಡು ಜಿಲ್ಲೆಯು ಸೇರಿದಂತೆ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಸಂಘಟನೆಯನ್ನು ವಿಸ್ತರಿಸುವ ಯೋಜನೆಯಿದೆ. ಈ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಪ್ರಗತಿಗೆ ಕರ್ತವ್ಯ ರೂಪದ ಕೊಡುಗೆಯನ್ನು ನೀಡಲು ಹಿರಿಯ ಬಂಧುಗಳು ಪ್ರತಿಷ್ಠಾನದೊಂದಿಗೆ ಕೈಜೋಡಿಸುವಂತೆ ಭಾಸ್ಕರ್ ಬಾರ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಕಾರ್ಯದರ್ಶಿ ಬಾಲಕೃಷ್ಣ ರಾವ್, ಕೇಂದ್ರ ಸಮಿತಿ ಉಪಾಧ್ಯಕ್ಷ ಯು.ಲೋಕೇಶ್ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here