ಬಡಗನ್ನೂರು: ಗುಜಿರಿ ವ್ಯಾಪಾರಿಗಳ ದುರ್ವರ್ತನೆ ಆರೋಪ

0

ಗುಜಿರಿ ಇಲ್ಲವೆಂದರೂ ಕೇಳದೆ ಬಲವಂತದಿಂದ ಸಂಗ್ರಹ-ದೂರು

ಪುತ್ತೂರು: ಮನೆಗೆ ಬಂದ ಗುಜುರಿ ವ್ಯಾಪಾರಿಗಳು ನಮ್ಮಲ್ಲಿ ಯಾವುದೇ ಗುಜುರಿ ವಸ್ತುಗಳು ಇಲ್ಲವೆಂದು ಹೇಳಿದರೂ ಕೇಳದೆ ನೇರವಾಗಿ ಮನೆಗೆ ಬಂದು ಹುಡುಕಾಡಿದ್ದು ಅಲ್ಲದೇ ಮನೆ ಬಳಕೆಗೆ ಇಟ್ಟಿದ್ದ ವಸ್ತುಗಳನ್ನು ಕೊಂಡೊಯ್ದು ದುರ್ವರ್ತನೆ ತೋರಿದ್ದಾರೆ ಎಂದು ಬಡಗನ್ನೂರು ನೆಕ್ಕರೆ ನಿವಾಸಿ ಆನಂದ ಎನ್.ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾನು ಮತ್ತು ನನ್ನ ಪತ್ನಿ ಉದ್ಯೋಗ ನಿಮಿತ್ತ ಮನೆಯಿಂದ ಹೊರಹೋಗುತ್ತಿದ್ದು ಮನೆಯಲ್ಲಿ ಬುದ್ದಿಮಾಂದ್ಯ ಸಹೋದರಿಯೊಬ್ಬಳೇ ಇರುತ್ತಿದ್ದಳು. ನ.15 ರಂದು ಮಧ್ಯಾಹ್ನದ ವೇಳೆಯಲ್ಲಿ ಹಳದಿ ಬಣ್ಣದ ಟಾಟಾ ಏಸ್ ವಾಹನದಲ್ಲಿ ಗುಜುರಿ ಸಂಗ್ರಹಗಾರರು ಮನೆಗೆ ಬಂದಿದ್ದು ಈ ವೇಳೆ ಸಹೋದರಿ ನಮ್ಮಲ್ಲಿ ಯಾವುದೇ ಗುಜುರಿ ವಸ್ತುಗಳು ಇಲ್ಲ ಎಂದು ಎಷ್ಟೇ ಹೇಳಿದರೂ ಕೇಳದೆ ನೇರವಾಗಿ ಮನೆಗೆ ಬಂದದ್ದು ಅಲ್ಲದೆ ಮನೆಯ ಸುತ್ತಮುತ್ತ ಹುಡುಕಾಡಿ ಮನೆ ಬಳಕೆಗೆ ಇಟ್ಟಿದ್ದ ಪೈಪುಗಳನ್ನು ಹಾಗೂ ಸುಮಾರು 25 ಕೆ.ಜಿ ತೂಕದ ಕಬ್ಬಿಣದ ಕಲ್ಲು (ಕಬ್ಬಿಣದ ಕೆಲಸಕ್ಕೆ ಬಳಸುವ ಕಲ್ಲು) ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಪ್ರತಿಯಾಗಿ ಸಹೋದರಿ ಹತ್ತಿರ 40 ರೂಪಾಯಿಗಳನ್ನು ನೀಡಿರುತ್ತಾರೆ. ಗುಜುರಿ ವಸ್ತುಗಳು ಇಲ್ಲ ಎಂದು ಹೇಳಿದರೂ ಬಲವಂತವಾಗಿ ಮನೆಯ ಸುತ್ತಮುತ್ತ ಹುಡುಕಾಡಿದ್ದು ಅಲ್ಲದೆ ಬಳಕೆಗೆ ಇಟ್ಟಿದ್ದ ವಸ್ತುಗಳನ್ನು ಕೊಂಡುಹೋದ ಗುಜುರಿ ಸಂಗ್ರಹಗಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆನಂದ ಎನ್.ರವರು ದೂರಿನಲ್ಲಿ ತಿಳಿಸಿದ್ದಾರೆ. ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಇಲ್ಲದ ಕಾರಣ ಪೊಲೀಸರು ಆನಂದ ಎನ್.ರವರ ಮೌಖಿಕ ದೂರು ದಾಖಲಿಸಿಕೊಂಡಿದ್ದಾರೆ ಎಂದು ಆನಂದ ಎನ್. ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here