ಫಿಲೋಮಿನಾದಲ್ಲಿ ಅಂತರ್-ಪ್ರೌಢಶಾಲಾ ವಿದ್ಯಾರ್ಥಿಗಳ ‘ಪ್ರತಿಭಾ’ ಉದ್ಘಾಟನೆ

ವಿವಿಧ ಚಟುವಟಿಕೆಗಳಲ್ಲಿ ಪ್ರೀತಿಯಿಂದ ಭಾಗವಹಿಸಿ ಗೆಲ್ಲುವ ಪ್ರಯತ್ನಪಡಿ-ಐ.ಕೆ ಬೊಳುವಾರು

ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮನುಷ್ಯನಲ್ಲಿನ ಕಲ್ಪನೆ, ಪ್ರತಿಭೆ ಮತ್ತು ಶಕ್ತಿಯಿಂದ ಬಹಳಷ್ಟು ಸಾಧಿಸಬಹುದು. ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿನ ವಿವಿಧ ಚಟುವಟಿಕೆಗಳಲ್ಲಿ ಪ್ರೀತಿಯಿಂದ ಭಾಗವಹಿಸಿ ಗೆಲ್ಲುವ ಪ್ರಯತ್ನ ಪಡುವಂತಾಗಬೇಕು ಎಂದು ರಂಗಕರ್ಮಿ ಐ.ಕೆ ಬೊಳುವಾರುರವರು ಹೇಳಿದರು.

ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಆಶ್ರಯದಲ್ಲಿ ನ.17 ರಂದು ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲು ವರ್ಷಂಪ್ರತಿ ಆಯೋಜಿಸಲಾದ ಪ್ರೌಢಶಾಲಾ ವಿದ್ಯಾರ್ಥಿಗಳ ಅಂತರ್-ಶಾಲಾ ಸ್ಪರ್ಧೆ ‘ಪ್ರತಿಭಾ 2022’ ಕಾರ್ಯಕ್ರಮದಲ್ಲಿ ಅವರು ನವಿಲಾಕಾರದ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು. ಪ್ರತಿಭೆ ಎನ್ನುವ ಪದವನ್ನು ಇಂತಿಷ್ಟೇ ಎಂದು ಹೇಳಿ ಮುಗಿಸಲು ಸಾಧ್ಯವಾಗದು. ಪ್ರತಿಭೆ ಎಂಬ ಪದಕ್ಕೆ ಅಗಾಧ ಶಕ್ತಿಯಿದೆ. ಪ್ರತಿಯೋರ್ವ ವಿದ್ಯಾರ್ಥಿಯು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಾ ಸಂಪನ್ನನಾಗಿರುತ್ತಾನೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ಆಸಕ್ತಿಯುಳ್ಳ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದರಲ್ಲೂ ತುಂಬಾ ಹಳೆಯದಾದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಮುಂತಾದ ವಿಷಯಕ್ಕೆ ಸಂಬಂಧಿಸಿದ ಟೈಟಲ್‌ಗಳ ಪುಸ್ತಕಗಳನ್ನು ಹುಡುಕಿ ಅಧ್ಯಯನ ಮಾಡಿದಾಗ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೊಂದುವ ಮೂಲಕ ಜ್ಞಾನದ ವೃದ್ಧಿಯಾಗುತ್ತದೆ ಎಂದ ಅವರು ಇತ್ತೀಚೆಗೆ ಬಿಡುಗಡೆಯಾಗಿ ಅಪೂರ್ವ ಯಶಸ್ಸನ್ನು ಕಾಣುತ್ತಿರುವ ‘ಕಾಂತಾರ’ ಸಿನೆಮಾವನ್ನು ವಿದ್ಯಾರ್ಥಿಗಳು ವೀಕ್ಷಿಸಿ, ಸಿನೆಮಾ ಹೇಗಿರ್ತದೆ ಮತ್ತು ಸಿನೆಮಾದ ತಯಾರಿ ಹೇಗೆ ಆಗಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ. ನಮ್ಮ ಹತ್ತಿರದಲ್ಲಿಯೇ ನಡೆಯುವಂತಹ ಭೂತ ಕೋಲಕ್ಕೆ ಪ್ರೀತಿಯಿಂದ ಹೋಗಿ, ಅಲ್ಲಿನ ನಲಿಕೆಯವರು, ಪಾಡ್ದನ ಮುಂತಾದ ಭೂತ ಕೋಲಕ್ಕೆ ಸಂಬಂಧಿಸಿದ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಇವುಗಳು ಕಾಂತಾರ ಸಿನೆಮಾಕ್ಕೆ ಎಷ್ಟು ಹತ್ತಿರವಾಗಿದೆ ಎಂದು ತಿಳಿಯಬಹುದಾಗಿದೆ ಎಂದು ಅವರು ಹೇಳಿದರು.

ಪ್ರತಿಭೆ ಅನಾವರಣವಾಗುವುದು ವಿದ್ಯಾರ್ಥಿಯ ಕಠಿಣ ಪರಿಶ್ರಮದಿಂದ, ಸೃಜನಶೀಲತೆಯಿಂದ-ವಂ|ಸ್ಟ್ಯಾನಿ ಪಿಂಟೋ;

ಅಧ್ಯಕ್ಷತೆ ವಹಿಸಿದ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಪ್ರತಿಭೆ ಎನ್ನುವುದು ದೇವರ ವರ. ಜ್ಞಾನದ ಕಲೆಯ ಪ್ರತಿಭೆ ಅನಾವರಣವಾಗುವುದು ವಿದ್ಯಾರ್ಥಿಯ ಕಠಿಣ ಪರಿಶ್ರಮದಿಂದ ಹಾಗೂ ಸೃಜನಶೀಲತೆಯಿಂದ. ಅದುವೇ ವಿದ್ಯಾರ್ಥಿಯ ಯಶಸ್ಸಿನ ಮೆಟ್ಟಿಲುಗಳಾಗುತ್ತದೆ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಫಿಲೋಮಿನಾ ಸಂಸ್ಥೆಯವರು ಆಯೋಜಿಸಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು ಮಾತ್ರವಲ್ಲದೆ ವಿದ್ಯಾರ್ಥಿಗಳ ಬೆಳವಣಿಗೆಗೂ ಸಾಕಾರವಾಗುವುದು ಎಂದರು.

ಅವಕಾಶಗಳನ್ನು ಸದುದ್ಧೇಶದಿಂದ ಬಳಸಿಕೊಂಡಾಗ ಅದುವೇ ಜೀವನದ ದಾರಿದೀಪ-ಮೌರಿಸ್ ಮಸ್ಕರೇನ್ಹಸ್:

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಅವಕಾಶಗಳು ಕಡಿಮೆ ಬರುತ್ತದೆ. ಆದರೆ ಬಂದಂತಹ ಅವಕಾಶಗಳನ್ನು ಸದುದ್ಧೇಶದಿಂದ ಬಳಸಿಕೊಂಡಾಗ ಅದುವೇ ಜೀವನದ ದಾರಿದೀಪವಾಗುತ್ತದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಪ್ರತಿಭೆ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಉದ್ಧೇಶ ಈ ಫಿಲೋಮಿನಾ ಕ್ಯಾಂಪಸ್‌ನ ಭವ್ಯ ವಾತಾವರಣದ ಪರಿಚಯ, ಇಲ್ಲಿನ ಮೌಲ್ಯಾಧಾರಿತ ಶಿಕ್ಷಣವನ್ನು ತಿಳಿದುಕೊಳ್ಳುವುದಾಗಿದೆ ಎಂದ ಅವರು ಈ ಕ್ಯಾಂಪಸ್‌ನಲ್ಲಿ ಕೆ.ಜಿಯಿಂದ ಸ್ನಾತಕೋತ್ತರ ಅಧ್ಯಯನ ಕೋರ್ಸ್‌ಗಳ ತನಕ ವ್ಯಾಸಂಗಕ್ಕೆ ಅವಕಾಶವಿದೆ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಕಲಿತು ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕಂಡುಕೊಂಡಿರುತ್ತಾರೆ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಲ್ಲಾ ರಂಗದಲ್ಲೂ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾಲೇಜು ಪ್ರತಿ ವರ್ಷ ವೇದಿಕೆ ಕಲ್ಪಿಸುತ್ತಿದೆ-ವಂಅಶೋಕ್ ರಾಯನ್:

ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾಲೇಜು ಪ್ರತಿ ವರ್ಷ ವೇದಿಕೆಯನ್ನು ಒದಗಿಸುತ್ತಿದೆ. ಇಂದಿಲ್ಲಿ ಪ್ರತಿಭೆಯನ್ನು ತೋರ್ಪಡಿಸಲು ವಿವಿಧ ಶಾಲೆಗಳಿಂದ ಪ್ರಥಮ ಬಾರಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಇಲ್ಲಿನ ವಾತಾವರಣ ಹೊಸದು. ಅವಕಾಶ ಮತ್ತು ಸವಾಲುಗಳು ಜೀವನದಲ್ಲಿ ಎದುರಿಸಲು ಬಂದಾಗ ನಿರಾಶರಾಗದೆ ಸಾಧಿಸುತ್ತೇನೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುವ ಧೈರ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಸ್ಪರ್ಧೆಗಳು ಜೀವನಕ್ಕೆ ಸೋಲು-ಗೆಲುವಿನ ಪಾಠ ಕಲಿಸುತ್ತದೆ ಮಾತ್ರವಲ್ಲದೆ ಜೀವನದಲ್ಲಿ ಮುಂದೆ ಬರಲು ಸಹಕಾರಿಯೂ ಆಗುತ್ತದೆ ಎಂದರು.

ಫಿಲೋಮಿನಾ ಪದವಿ ಕಾಲೇಜು ಉಪ ಪ್ರಾಂಶುಪಾಲ ಪ್ರೊ|ಗಣೇಶ್ ಭಟ್, ಫಿಲೋಮಿನಾ ಪದವಿ ಪೂರ್ವ ಕಾಲೇಜು ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿ ಶಿವಪ್ರಸಾದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಶರತ್ ಆಳ್ವ ಚನಿಲರವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ|ಆಶಾ ಸಾವಿತ್ರಿ ವಂದಿಸಿ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.


26 ಪ್ರೌಢಶಾಲೆಗಳು…

ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸಂತ ಫಿಲೋಮಿನಾ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸಂತ ಮೇರೀಸ್ ಪ್ರೌಢಶಾಲೆ ಬೆಳ್ತಂಗಡಿ, ಸುದಾನ ವಸತಿಯುತ ಶಾಲೆ, ಸೈಂಟ್ ತೆರೆಸಾ ಪ್ರೌಢಶಾಲೆ ಬೆಳ್ತಂಗಡಿ, ವಿವೇಕಾನಂದ ಪ್ರೌಢಶಾಲೆ(ಕನ್ನಡ/ಆಂಗ್ಲ ಮಾಧ್ಯಮ), ಸೈಂಟ್ ಜೋಸೆಫ್ ಆ.ಮಾ ಪ್ರೌಢಶಾಲೆ ಬೀರಮಂಗಲ, ಬಾಲವಿಕಾಸ ಆ.ಮಾ ಪ್ರೌಢಶಾಲೆ ಮಾಣಿ, ಪ್ರಗತಿ ಆ.ಮಾ ಪ್ರೌಢಶಾಲೆ ಕಾಣಿಯೂರು, ಸೈಂಟ್ ರೀಟಾ ಆ.ಮಾ ಪ್ರೌಢಶಾಲೆ ವಿಟ್ಲ, ಕೆಪಿಎಸ್ ಸ್ಕೂಲ್ ಕುಂಬ್ರ, ಕಾನ್ನಾಯ ಜ್ಯೋತಿ ಆ.ಮಾ ಪ್ರೌಢಶಾಲೆ ಕಡಬ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಸುಳ್ಯ, ಸರಕಾರಿ ಪ್ರೌಢಶಾಲೆ ಪಾಪೆಮಜಲು, ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ, ಸೈಂಟ್ ಜಾರ್ಜ್ ಆ.ಮಾ ಪ್ರೌಢಶಾಲೆ ನೆಲ್ಯಾಡಿ, ವಿವೇಕಾನಂದ ಪ್ರೌಢಶಾಲೆ ತೆಂಕಿಲ, ಸುಬೋಧ ಪ್ರೌಢಶಾಲೆ ಪಾಣಾಜೆ, ಹೋಲಿ ರೆಡಿಮರ್ ಆ.ಮಾ ಶಾಲೆ ಬೆಳ್ತಂಗಡಿ, ಎಸ್‌ಡಿಎಂ ಆ.ಮಾ ಪ್ರೌಢಶಾಲೆ ಉಜಿರೆ, ಬೆಥನಿ ಆ.ಮಾ ಪ್ರೌಢಶಾಲೆ ಪುತ್ತೂರು, ಎನ್‌ಎಂಪಿಯುಸಿ ಪ್ರೌಢಶಾಲೆ ಅರಂತೋಡು, ಸುಳ್ಯ, ಸರಕಾರಿ ಉನ್ನತ ಪ್ರೌಢಶಾಲೆ ಕೆಮ್ಮಾಯಿ ಹೀಗೆ ೨೬ ಪ್ರೌಢಶಾಲೆಗಳು ಹೆಸರನ್ನು ನೋಂದಾಯಿಸಿವೆ.

೫೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು…

ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಸೆಮಿನಾರ್(ವಿಚಾರ ಸಂಕಿರಣ), ಬೆಸ್ಟ್ ಔಟ್ ಆಫ್ ವೇಸ್ಟ್(ಕಸದಿಂದ ರಸ), ಪೇಂಯ್ಟಿಂಗ್, ಕ್ಲೇ ಮಾಡೆಲಿಂಗ್, ಸೈನ್ಸ್ ಮಾಡೆಲ್(ವಿಜ್ಞಾನ ಮಾದರಿ ಪ್ರದರ್ಶನ), ಪ್ರೊಡಕ್ಟ್ ಲಾಂಚಿಂಗ್(ಹೊಸ ಉತ್ಪನ್ನಗಳ ಬಿಡುಗಡೆ), ಕೊಲಾಜ್(ತೇಪೆ ಚಿತ್ರಗಾರಿಕೆ), ಜಾನಪದ ನೃತ್ಯ ಹೀಗೆ ಹತ್ತು ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಸೂಸಲು ಕಾಲೇಜು ಅವಕಾಶವಿತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.