ಪುತ್ತೂರಿನ ನಿವೃತ್ತ ಯೋಧನಿಗೆ ಜಮೀನು ನೀಡಲು ಹೈಕೋರ್ಟ್ ಆದೇಶ; 23 ಗೇಣಿದಾರರ ಅರ್ಜಿ ವಜಾ

0

ಪುತ್ತೂರು: ಗೇಣಿಗೆ ನೀಡಲಾಗಿದ್ದ ತಮ್ಮ ಜಮೀನಿನ ಸ್ವಾಧೀನಕ್ಕಾಗಿ ನಿವೃತ್ತ ಯೋಧರೊಬ್ಬರು ಹಲವು ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಎಳೆದಿರುವ ಹೈಕೋರ್ಟ್, 8 ವಾರಗಳೊಳಗೆ ಜಮೀನನ್ನು ಗೇಣಿದಾರರಿಂದ ಮಾಜಿ ಸೈನಿಕನ ಸುಪರ್ದಿಗೆ ಕೊಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಪುತ್ತೂರು ಬಳಿಯ ದರ್ಬೆ ಗ್ರಾಮದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದಿವಾನ್ ಗೋಪಾಲಕೃಷ್ಣ ಭಟ್ ಅವರಿಗೆ ಸೇರಿದ ಜಮೀನಿನಲ್ಲಿ ಗೇಣಿ ಮಾಡುತ್ತಿದ್ದ ನಫೀಜಾ ಸೇರಿ 23 ಗೇಣಿದಾರರು ಜಮೀನಿನ ಮಾಲೀಕತ್ವ ಕೋರಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು 8 ವಾರಗಳ ಒಳಗೆ ಜಮೀನನ್ನು ಗೋಪಾಲಕೃಷ್ಣ ಭಟ್ ಅವರ ಸ್ವಾಧೀನಕ್ಕೆ ನೀಡಬೇಕು. ಈ ಆದೇಶವನ್ನು ಅರ್ಜಿದಾರರು ಪಾಲಿಸದಿದ್ದರೆ, ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಜಮೀನಿನಿಂದ ಅರ್ಜಿದಾರರನ್ನು ಒಕ್ಕಲೆಬ್ಬಿಸಿ, ಗೋಪಾಲಕೃಷ್ಣ ಅವರಿಗೆ ಜಮೀನಿನ ಸ್ವಾಧೀನ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಸೈನಿಕರ ಬಗ್ಗೆ ಮುತುವರ್ಜಿ ಇರಲಿ: ದೇಶದ ಗಡಿ ರಕ್ಷಿಸಲು ಪ್ರಾಣವನ್ನು ಪಣಕ್ಕಿಡುವ ಸೈನಿಕರನ್ನು ಸಮಾಜದ ಒಂದು ವಿಭಾಗ ಎಷ್ಟು ಕಳಪೆಯಾಗಿ ನಡೆಸಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಹಿಡುವಳಿ ಕಾಯ್ದೆ ಅಡಿಯಲ್ಲಿ ಕೈತಪ್ಪಿದ್ದ ಜಮೀನನ್ನು ಮರಳಿ ಪಡೆಯಲು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ 15 (5)ರ ಅನುಸಾರ ಸೈನಿಕರು ನಿವೃತ್ತಿ ಆದ ಮೇಲೆ ತಮ್ಮ ಮಾಲೀಕತ್ವದ ಹಿಡುವಳಿ ಜಮೀನನ್ನು ಪುನಃ ಪಡೆಯಬಹುದು. ಸರ್ಕಾರಗಳು ಸೈನಿಕರ ಬಗ್ಗೆ ಮುತುವರ್ಜಿಯಿಂದ ವರ್ತಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಅರ್ಜಿದಾರರ ಪೂರ್ವಜ ಉಮರ್ ಬ್ಯಾರಿ ಎಂಬಾತ ಗೋಪಾಲಕೃಷ್ಣ ಅವರ ತಂದೆಯ ಮಾಲೀಕತ್ವದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಜಮೀನಿನಲ್ಲಿ 1940ರಿಂದ ಗೇಣಿ ಮಾಡುತ್ತಿದ್ದರು ಎನ್ನಲಾಗಿದೆ. 1993ರಲ್ಲಿ ಸೇನೆಯಿಂದ ನಿವೃತ್ತರಾದ ಗೋಪಾಲಕೃಷ್ಣ ಅವರು 1994ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(4) ಅಡಿಯಲ್ಲಿ ಜಮೀನು ಹಿಂಪಡೆಯಲು ಅರ್ಜಿ ಸಲ್ಲಿಸಿದರು. ಈ ಸಂಬಂಧ ಅರ್ಜಿದಾರರಿಗೆ ನೋಟಿಸ್ ನೀಡಲಾಗಿತ್ತಾದರೂ, ಅವರು ನೋಟಿಸ್‌ಗೆ ಸ್ಪಂದಿಸಿರಲಿಲ್ಲ.

ಈ ಮಧ್ಯೆ, ಭೂ ನ್ಯಾಯಾಧಿಕರಣ ಜಮೀನಿನ ಹಕ್ಕುಪತ್ರವನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಸಲು ಆದೇಶಿಸಿತ್ತು. ಆ ಆದೇಶವನ್ನು 2000ನೇ ಇಸವಿಯಲ್ಲಿ ರದ್ದುಪಡಿಸಿದ್ದ ಹೈಕೋರ್ಟ್, ಗೋಪಾಲಕೃಷ್ಣ ಅವರ ಅರ್ಜಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ತಹಸೀಲ್ದಾರ್‌ಗೆ ನಿರ್ದೇಶಿಸಿತ್ತು. ತಹಸೀಲ್ದಾರ್ ಅವರು ಗೋಪಾಕೃಷ್ಣ ಭಟ್ ಪರವಾಗಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಆದೇಶ ಎತ್ತಿಹಿಡಿದಿದ್ದರು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

LEAVE A REPLY

Please enter your comment!
Please enter your name here