ಸ್ವಾರ್ಥ ಬದಿಗಿಟ್ಟು ಪರರ ಸುಖ-ದುಃಖದಲ್ಲಿ ಭಾಗಿಯಾಗುವುದೇ ನಿಜವಾದ ಜೀವನ-ವಂ|ವಾಲ್ಟರ್ ಡಿ’ಮೆಲ್ಲೋ
ಪುತ್ತೂರು: ಅನೀತಿ, ಭ್ರಷ್ಟಾಚಾರಕ್ಕೆ ಮಾನವ ಒಳಗಾಗಿ ಮಾನವೀಯತೆ, ಮನುಷ್ಯತ್ವಕ್ಕೆ ಬೆಲೆ ಇಲ್ಲದಂತೆ ಆಗಿದೆ. ಮನುಷ್ಯ ತನ್ನಲ್ಲಿನ ಸ್ವಾರ್ಥ ಬದಿಗಿಟ್ಟು ಪರರ ಸುಖ-ದುಃಖದಲ್ಲಿ ಭಾಗಿಯಾಗುತ್ತಾನೋ ಅದುವೇ ನಿಜವಾದ ಜೀವನವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಶಿಯಲ್ ವಿಕಾರ್ ಆಗಿರುವ ವಂ|ವಾಲ್ಟರ್ ಡಿ’ಮೆಲ್ಲೋರವರು ಹೇಳಿದರು.
ಅವರು ಪುತ್ತೂರು ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ನಡೆಯುವ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ನ.20 ರಂದು ಚರ್ಚ್ನಲ್ಲಿ ಪೂರ್ವಾಹ್ನ ಪವಿತ್ರ ಪರಮಪ್ರಸಾದದ ಭ್ರಾತ್ವತ್ವ ಭಾನುವಾರ(ಕೊಂಪ್ರಿಚೊ ಆಯ್ತಾರ್)ದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಬೈಬಲ್ ವಾಚಿಸಿ, ಪರಮ ಪ್ರಸಾದದ ಆರಾಧನೆ ನೆರವೇರಿಸಿ ಸಂದೇಶ ನೀಡಿದರು.
ಯೇಸುಕ್ರಿಸ್ತರು ಸಂಸ್ಥಾಪಿಸಿದ ಸಂಸ್ಕಾರವೇ ಪವಿತ್ರ ಪರಮ ಪ್ರಸಾದವಾಗಿದೆ. ಪರಮಪ್ರಸಾದವನ್ನು ಭಕ್ತಿಯಿಂದ ಸೇವಿಸುವುದರಿಂದ ಕುಟುಂಬದ ಪಾವಿತ್ರ್ಯತೆ ಹೆಚ್ಚುತ್ತದೆ. ಯಾರು ಕ ಷ್ಟಪಟ್ಟು ದುಡಿಯುವುದರಿಂದ ಮತ್ತು ಯಾರಿಗೂ ನೋಯಿಸದೆ ಮತ್ತೊಬ್ಬರ ಸುಖವನ್ನು ಆಶಿಸುತ್ತಾ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡವರಿಗೆ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ.
ನಾವೆಲ್ಲರೂ ದೇವರ ಮಕ್ಕಳು. ನಾವೆಲ್ಲರೂ ಒಗ್ಗಟ್ಟಿನಲ್ಲಿ ಜೀವಿಸಿದಾಗ ಮತ್ತು ದೇವರನ್ನು ನಮ್ಮ ಅಂತರಾಳದಲ್ಲಿಟ್ಟು ಭಕ್ತಿಯಿಂದ ಪೂಜಿಸಿದಾಗ ಕ್ರೈಸ್ತ ಪವಿತ್ರಸಭೆಯಲ್ಲಿನ ನಮ್ಮ ಕುಟುಂಬ ಅಥವಾ ಸಮುದಾಯ ಜೀವಂತಿಕೆಯನ್ನು ಹೊಂದಲು ಸಹಕಾರಿಯಾಗುತ್ತದೆ ಎಂದ ಅವರು ಪವಿತ್ರ ಪರಮಪ್ರಸಾದವು ದೇವರ ಪ್ರತಿರೂಪವಾಗಿದ್ದು ಅದನ್ನು ನಾವು ಭಕ್ತಿಯಿಂದ ಸೇವಿಸಿದಾಗ ಕುಟುಂಬದಲ್ಲಾಗಲಿ ಅಥವಾ ಸಮುದಾಯದಲ್ಲಾಗಲಿ ಏಕತೆ, ಒಗ್ಗಟ್ಟು, ಸೇವಾ ಮನೋಭಾವ, ಕ್ಷಮಾಪಣಾಗುಣ ಹಾಗೂ ಪ್ರೀತಿ ಬಲಗೊಳ್ಳುವಂತೆ ಮಾಡುತ್ತದೆ. ಬಲ್ಲವನೇ ಬಲ್ಲ, ಬೆಲ್ಲದ ಸವಿಯನ್ನು ಎನ್ನುವ ನಾಣ್ಣುಡಿಯಂತೆ ನಾವು ಅಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಭಕ್ತಿಯಿಂದ ಜೀವನ ಸಾಗಿಸಿದಾಗ ದೇವರ ಮಹಿಮೆಯನ್ನು ಸವಿಯಲು ಸಾಧ್ಯ ಎಂದು ಅವರು ಹೇಳಿದರು.
ಚರ್ಚ್ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬ್ರದರ್ ಜೀವನ್ ಡಿ’ಸೋಜ,ಧರ್ಮಭಗಿನಿಯರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ವೇದಿ ಸೇವಕರು, ಗಾಯನ ಮಂಡಳಿ, ಚರ್ಚ್
ಸ್ಯಾಕ್ರಿಸ್ಟಿಯನ್, ಚರ್ಚ್ ಪಾಲನಾ ಸಮಿತಿ ಸದಸ್ಯರು, ವಾಳೆ ಗುರಿಕಾರರು, ವಿವಿಧ ಸಂಘ-ಸಂಸ್ಥೆಯ ಸದಸ್ಯರು ಮತ್ತು ಸಾವಿರಾರು ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಲಾಯಿತು.
ಸ್ಮರಣಿಕೆ ನೀಡಿ ಗೌರವ…
1999ರಲ್ಲಿ ಚರ್ಚ್ ಸ್ಥಾಪನೆಯಾದಾಗಿನಿಂದ ಪ್ರಸ್ತುತವರೆಗೆ ಸೇವೆ ಸಲ್ಲಿಸಿದ ಉಪಾಧ್ಯಕ್ಷರುಗಳಾದ ಹೆರಾಲ್ಡ್ ಮಾಡ್ತಾ, ಡೇವಿಡ್ ಪಿರೇರಾ, ಲೀನಾ ಪಾಯಿಸ್, ಎಡ್ವಿನ್ ಡಿ’ಸೋಜ, ಗ್ರೆಟ್ಟಾ ಮೊಂತೇರೊ, ಜೋನ್ ಸಿರಿಲ್ ರೊಡ್ರಿಗಸ್(ಪ್ರಸ್ತುತ) ಹಾಗೂ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಲ್ಯಾನ್ಸಿ ಲೂವಿಸ್, ಜೋನ್ ಮಸ್ಕರೇನ್ಹಸ್, ಎಡೋಲ್ಫ್ ಫೆರ್ನಾಂಡೀಸ್, ಮೌರಿಸ್ ಕುಟಿನ್ಹಾ, ಲಿಗೋರಿ ಸೆರಾವೋ,ನ್ಯಾನ್ಸಿ ಮಾಡ್ತಾ(ಪ್ರಸ್ತುತ)ರವರುಗಳನ್ನು ಗುರುತಿಸಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ಶರಲ್ ಶ್ವೇತಾ ವೇಗಸ್ ಕಾರ್ಯಕ್ರಮ ನಿರ್ವಹಿಸಿದರು.
ಚರ್ಚ್ ಸ್ಥಾಪನಾ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಅಗಲಿರುವ ಜೋಕಿಂ ರೆಬೆಲ್ಲೋರವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.