ಪುತ್ತೂರು ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಸಂದೀಪ್ ಕುಮಾರ್‌ರಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆಯವರಿಗೆ ಪತ್ರ

0

 

ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಐ.ಬಿ.ಸಂದೀಪ್ ಕುಮಾರ್ ಅವರು ಪುತ್ತೂರು ತಾಲೂಕು ಪತ್ರಕರ್ತರ ಸಂಘ ವಿಲೀನದ ಕುರಿತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಪತ್ರ ಬರೆದು ಶ್ರವಣ್ ಕುಮಾರ್ ನಾಳ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ವೈರಲ್ ಆಗಿರುವ ಪತ್ರದ ವಿವರ ಈ ಕೆಳಗೆ ನೀಡಲಾಗಿದೆ.
“ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆಯು ಇದೇ ನವಂಬರ್ 19 ರಂದು ನಡೆದಿದ್ದು, ಸಂಘದ ಸದಸ್ಯರು ಹೊಸ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ ನಡುವೆ ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜವಾಬ್ದಾರಿ ಹೊತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಶ್ರವಣ್ ಕುಮಾರ್ ನಾಳ ಪುತ್ತೂರಿನ ಸ್ಥಳೀಯ ಪತ್ರಿಕೆಯಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರವನ್ನು ಮಾಡುವ ಮೂಲಕ ನಿಮ್ಮದೇ ಸಂಘದ ಪ್ರತಿಷ್ಠೆಯನ್ನು ಹಾಳು ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಕಳೆದ 25 ವರ್ಷಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಿಂದ ಸಂಘದ ನೋಂದಣಿ ನವೀಕರಣವನ್ನು ಮಾಡಲು ಸಾಧ್ಯವಾಗಿಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಮಾನ್ಯತೆ ಕಳೆದುಕೊಂಡಿದೆ ಎಂದು ಸ್ಥಳೀಯ ಪತ್ರಿಕೆಯಲ್ಲಿ ಹೇಳಿಕೆಗಳನ್ನು ನೀಡಿಕೊಂಡು ಬರುತ್ತಿದ್ದಾರೆ. ಪುತ್ತೂರು ಪತ್ರಕರ್ತರ ಸಂಘ 2015 ರ ಇಸವಿಯಿಂದ ಸಹಕಾರಿ ಇಲಾಖೆ ಅಡಿಯಲ್ಲಿ ನೋಂದಣಿಯಾಗಿದ್ದು, ನೋಂದಣೆಯಾಗುವ ಮೊದಲೂ ಸಂಘ ಅಸ್ತಿತ್ವದಲ್ಲಿತ್ತು ಎನ್ನುವ ಕನಿಷ್ಠ ಜ್ಞಾನವನ್ನೂ ನಿಮ್ಮ ಪದಾಧಿಕಾರಿ ಹೊಂದಿರದಿರುವುದು ವಿಪರ್ಯಾಸ. ಸ್ಥಳೀಯ ಪತ್ರಿಕೆಯಲ್ಲಿ ಆತ ನೀಡುವ ಹೇಳಿಕೆಗೆ ಪೂರಕವಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ವಿಲೀನಗೊಂಡ ಯಾವುದಾದರೂ ದಾಖಲೆಗಳು ಆತನ ಬಳಿ ಇದ್ದಲ್ಲಿ ತಾವು ಅದನ್ನು ಪಡೆದುಕೊಂಡು ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿ. ಆ ರೀತಿಯ ಯಾವುದೇ ಪ್ರಕ್ರಿಯೆ ನಡೆಯಬೇಕಿದ್ದರೂ, ಸಂಘದ ಸಭೆಯಲ್ಲಿ ಈ ಕುರಿತು ನಿರ್ಣಯವನ್ನು ಮಂಡಿಸಬೇಕಾಗಿದೆ. ಆದರೆ ಈ ಬಗ್ಗೆ ಯಾವುದೇ ನಿರ್ಣಯವೂ ಸಂಘದಲ್ಲಿ ಈವರೆಗೂ ಮಂಡನೆಯಾಗದ ಹಿನ್ನಲೆಯಲ್ಲಿ ತಮ್ಮ ಸಂಘದ ಪದಾಧಿಕಾರಿಯಾಗಿರುವ ಶ್ರವಣ್ ಕುಮಾರ್ ನಾಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮೂಲಕ ಒತ್ತಾಯಿಸಲಾಗಿದೆ” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here