ವರ್ತಕರಲ್ಲಿ ಸ್ಪರ್ಧೆ ಇರಬಾರದು: ಜಯಂತ ನಡುಬೈಲ್
ಪುತ್ತೂರು: ಗೂಡಂಗಡಿಯಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಯ ತನಕವೂ ವ್ಯಾಪಾರ ಮಾಡುವವರು ಎಲ್ಲರೂ ವರ್ತಕರೇ ಆಗಿದ್ದಾರೆ. ವರ್ತಕರಲ್ಲಿ ಸ್ಪರ್ಧೆ ಇರಬಾರದು. ಬೇರೆ ಅಂಗಡಿಯಿಂದ ತನ್ನಲ್ಲಿ 5 ರೂಪಾಯಿ ಕಡಿಮೆಗೆ ವಸ್ತುಗಳನ್ನು ಕೊಟ್ಟು ಗ್ರಾಹಕರನ್ನು ಸೆಳೆಯುವ ದುರಾಸೆ ಇರಬಾರದು. ವೈಮನಸ್ಸು ಬಿಟ್ಟು ಪರಸ್ಪರ ಸಹೋದರತೆಯಿಂದ, ಸತ್ಯ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದಾಗ ಖಂಡಿತಾ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂದು ಉದ್ಯಮಿ, ಸಂಪ್ಯ ಅಕ್ಷಯ ಕಾಲೇಜ್‌ನ ಸಂಚಾಲಕ ಜಯಂತ ನಡುಬೈಲ್ ಹೇಳಿದರು.
ಅವರು ಕುಂಬ್ರ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಹಾಗೂ ಹಿರಿಯ ವರ್ತಕರಿಗೆ ಸನ್ಮಾನ ಕಾರ್ಯಕ್ರಮವನ್ನು ನ.22 ರಂದು ಕುಂಬ್ರ ಅಕ್ಷಯ ಆರ್ಕೇಡ್ ಸಭಾ ಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಬೇರೆ ಬೇರೆ ರೀತಿಯ ವ್ಯವಹಾರ ಮಾಡುವವರು ವರ್ತಕರ ಸಂಘದಲ್ಲಿರುತ್ತಾರೆ ಆದ್ದರಿಂದ ವರ್ತಕರ ಸಂಘ ಒಂದು ಸಂಪರ್ಕದ ಕೊಂಡಿಯಾಗಿದೆ. ಇಂತಹ ಸಂಘಟನೆಗಳಿಂದ ವರ್ತಕರಿಗೂ ಒಂದು ರೀತಿಯ ಬಲ ಬರುತ್ತದೆ. ಬೆಳೆಯುತ್ತಿರುವ ಕುಂಬ್ರ ಪೇಟೆಗೆ ವರ್ತಕರ ಸಂಘದಿಂದ ಇನ್ನಷ್ಟು ಕೊಡುಗೆಗಳು ಸಿಗಲಿ, ಸಂಘ ಸದಾ ಚಟುವಟಿಕೆಯಿಂದ ಇರಲಿ ಎಂದು ಹೇಳಿದ ಜಯಂತ ನಡುಬೈಲ್‌ರವರು, ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಸಂಪತ್ತು ಇರುವಾಗ ದಾನ ಮಾಡಬೇಕು ಆಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಈ ನಿಟ್ಟಿನಲ್ಲಿ ಕುಂಬ್ರ ವರ್ತಕರ ಸಂಘದಿಂದ ಸಮಾಜಮುಖಿಯಾದ ಒಳ್ಳೆಯ ಕೆಲಸಗಳು ಆಗುತ್ತಿರುವುದು ಖುಷಿ ತಂದಿದೆ. ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಎಲ್ಲಾ ವರ್ತಕರು ಪಂಚಾಯತ್‌ನೊಂದಿಗೆ ಕೈಜೋಡಿಸಬೇಕು ಎಂದ ತ್ರಿವೇಣಿಯವರು, ಪಂಚಾಯತ್‌ನಿಂದ ಸಾಧ್ಯವಾಗು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಕುಂಬ್ರ ವರ್ತಕರ ಸಂಘಕ್ಕೆ ೧೮ ವರ್ಷ ತುಂಬಿದ್ದು 6 ಅಧ್ಯಕ್ಷರುಗಳು ಸಂಘವನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ. ಸಂಘದಿಂದ ವರ್ತಕರಿಗೆ ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಒಳ್ಳೆಯ ಸೇವೆ ಸಿಗುವಂತಾಗಲಿ ನೂತನ ಪದಾಧಿಕಾರಿಗಳಿಂದ ಉತ್ತಮ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಪದ ಸ್ವೀಕಾರ,ಪ್ರತಿಜ್ಞಾ ವಿಧಿ ಬೋಧನೆ
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾರವರು ಕುಂಬ್ರ ವರ್ತಕರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಹಣ ಮುಖ್ಯ ಅಲ್ಲ, ಮನುಷ್ಯನ ಮನಸ್ಸಿನ ಹಿಂದಿರುವ ಗುಣ ಮುಖ್ಯವಾಗಿದೆ. ಮನಸ್ಸು ಒಳ್ಳೆದಿದ್ದರೆ ದೇವರ ಆಶೀರ್ವಾದ ಸದಾ ಇರುತ್ತದೆ ಮತ್ತು ನಾವು ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಇಂತಹ ಒಳ್ಳೆಯ ಮನಸ್ಸು ವರ್ತಕರಲ್ಲಿ ಇರಬೇಕು ಎಂದರು. ಕುಂಬ್ರ ವರ್ತಕರ ಸಂಘದಿಂದ ಬಹಳಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿದೆ. ಮುಂದೆಯೂ ಇಂತಹ ಸೇವೆಗಳು ಮುಂದುವರಿಯಲಿ, ಪುತ್ತೂರು ಸಂಘದಿಂದ ಏನಾದರೂ ಸಹಾಯ ಬೇಕಾದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.
ಅತಿಥಿಯಾಗಿದ್ದ ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಮಾತನಾಡಿ, ವರ್ತಕರ ಸಂಘದಿಂದ ಇನ್ನಷ್ಟು ಸಮಾಜಮುಖಿ ಕೆಲಸಕಾರ್ಯಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. ಸಂಘದ ಗೌರವ ಸಲಹೆಗಾರ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಕುಂಬ್ರ ವರ್ತಕರ ಸಂಘ ಒಂದು ವಿಭಿನ್ನ ವಿಶೇಷ ಸಂಘವಾಗಿದೆ. ಜಾತಿ, ಮತ, ಧರ್ಮ ಮತ್ತು ರಾಜಕೀಯ ಇಲ್ಲದೆ ಸಂಘವೊಂದಿದ್ದರೆ ಅದು ಕುಂಬ್ರ ವರ್ತಕರ ಸಂಘ ಆಗಿದೆ. ಇದರಲ್ಲಿ ಹಿರಿಯರಿಂದ ಕಿರಿಯರ ತನಕ ಸದಸ್ಯರಿದ್ದಾರೆ ಎಂದು ಹೇಳಿದರು. ಗೌರವ ಸಲಹೆಗಾರ ಚಂದ್ರಕಾಂತ ಶಾಂತಿವನರವರು, ಸಂಘದ ಪದಾಧಿಕಾರಿಗಳು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿದರು. ಗೌರವ ಸಲಹೆಗಾರ ಪಿ.ಎಂ.ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ವರ್ತಕರಾದವರು ಸತ್ಯ, ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಿದರೆ ಅದರಿಂದ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಶುಭ ಹಾರೈಕೆ
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸೂರ್ಯನಾಥ ಆಳ್ವ, ಉದ್ಯಮಿ ರತ್ನಾಕರ ರೈ ಕೆದಂಬಾಡಿಗುತ್ತು, ರಂಗಭೂಮಿ ಕಲಾವಿದ ಸುಂದರ ರೈ ಮಂದಾರರವರು ನೂತನ ಪದಾಧಿಕಾರಿಗಳು ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರರವರು ತನ್ನ ಅವಧಿಯಲ್ಲಿ ಸಹಕಾರ ನೀಡಿದ ವರ್ತಕರ ಸಂಘದ ಸರ್ವರಿಗೂ ಹಾಗೂ ಗ್ರಾಹಕ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಮುಂದೆಯೂ ಸಂಘದೊಂದಿಗೆ ಸದಾ ಇರುತ್ತೇನೆ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷ ರಫೀಕ್ ಅಲ್‌ರಾಯ, ನಿಕಟಪೂರ್ವ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಟಕಪೂರ್ವ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಸ್ವಾಗತಿಸಿದರು. ರೇಷ್ಮಾ, ನಿಹಾಲ್ ಶೆಟ್ಟಿ,ಹನೀಫ್, ಚರಿತ್ ಕುಮಾರ್, ಶುತಿಚಂದ್ರ, ಹನೀಫ್ ಶೇಖಮಲೆ, ರಾಜೇಶ್ ರೈ ಪರ್ಪುಂಜ, ನಾರಾಯಣ ಪೂಜಾರಿ ಕುರಿಕ್ಕಾರ, ಜಯರಾಮ ಆಚಾರ್ಯ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು.
ಹಿರಿಯ ವರ್ತಕರಿಗೆ ಸನ್ಮಾನ
ಕುಂಬ್ರ ವರ್ತಕರ ಸಂಘದ ಹಿರಿಯ ವರ್ತಕರಾದ ಯೂಸುಫ್ ಹಾಜಿ (ಬಂಡಶಾಲೆ) ಶೇಖಮಲೆ, ವಿಶ್ವನಾಥ ಶೆಟ್ಟಿ ಉರುವ ಮತ್ತು ಶ್ರೀಧರ ಪೂಜಾರಿ ಪಿದಪಟ್ಲ ಪರ್ಪುಂಜರವರನ್ನು ಈ ಸಂದರ್ಭದಲ್ಲಿ ಶಾಲು, ಪೇಟಾ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಮೆಲ್ವಿನ್ ಮೊಂತೆರೋ, ರಮ್ಯಶ್ರೀ, ರಮೇಶ್ ಆಳ್ವ ಕಲ್ಲಡ್ಕ ಸನ್ಮಾನಿತರ ಪರಿಚಯ ಓದಿದರು.
ನೂತನ ಸಮಿತಿ
ಅಧ್ಯಕ್ಷ ರಫೀಕ್ ಅಲ್‌ರಾಯ, ಉಪಾಧ್ಯಕ್ಷರು ಉದಯ ಆಚಾರ್ಯ, ರಮ್ಯಶ್ರೀ, ಪ್ರ.ಕಾರ್ಯದರ್ಶಿ ಭವ್ಯ ರೈ, ಜತೆ ಕಾರ್ಯದರ್ಶಿ ಚರಿತ್ ಕುಮಾರ್, ರೇಷ್ಮಾ ಮೆಲ್ವಿನ್, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಗೌರವ ಸಲಹೆಗಾರರು ಅಬ್ದುಲ್ ರಹೀಮಾನ್ ಹಾಜಿ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು.
` 18 ವರ್ಷಗಳನ್ನು ಪೂರೈಸಿರುವ ಕುಂಬ್ರ ವರ್ತಕರ ಸಂಘಕ್ಕೆ ತನ್ನದೇ ಆದ ವಿಶೇಷತೆ ಇದೆ. ಸಂಘದಿಂದ ಈಗಾಗಲೇ ಬಹಳಷ್ಟು ಸಮಾಜಮುಖಿ ಕೆಲಸಗಳು ನಡೆದಿದೆ. ಮುಂದೆಯೂ ಎಲ್ಲಾ ವರ್ತಕರ, ಗ್ರಾಹಕರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಮಾಜಮುಖಿ ಕೆಲಸಗಳು ನಡೆಯಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿ ಕೋರಿಕೆ.’
ರಫೀಕ್ ಅಲ್‌ರಾಯ, ಅಧ್ಯಕ್ಷರು ಕುಂಬ್ರ ವರ್ತಕರ ಸಂಘ