ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆಗೆ ದಿನಾಂಕ ಘೋಷಣೆ : ದ.5ರಂದು ಮತದಾನ: ಅಂದೇ ಮತ ಎಣಿಕೆ, ಫಲಿತಾಂಶ ಪ್ರಕಟ

 

  • ನ.24: ಪತ್ರಿಕಾ ಭವನದಲ್ಲಿ ಮತದಾರರ ಪಟ್ಟಿ ಪ್ರಕಟ- ಆಕ್ಷೇಪಣೆ ಸಲ್ಲಿಸಲು ಅವಕಾಶ
  • ನ.25: ಮತದಾರರ ಅಂತಿಮ ಪಟ್ಟಿ ಘೋಷಣೆ
  • ನ.26-28: ನಾಮಪತ್ರ ಸಲ್ಲಿಕೆಗೆ ಅವಕಾಶ
  • ನ.28: ನಾಮಪತ್ರ ಪರಿಶೀಲನೆ
  • ನ.29: ನಾಮಪತ್ರ ವಾಪಸ್ ಪಡೆಯಲು ಕೊನೇಯ ದಿನ, ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟ
    – ಪುಷ್ಪರಾಜ್ ಬಿ.ಯನ್. ಚುನಾವಣಾಧಿಕಾರಿ, ಇಬ್ರಾಹಿಂ ಅಡ್ಕಸ್ಥಳ ಉಪಚುನಾವಣಾಧಿಕಾರಿ

ಪುತ್ತೂರು: ಹಲವು ಹೈಡ್ರಾಮಗಳ ಮೂಲಕ ರಾಜ್ಯಾದ್ಯಂತ ಗಮನ ಸೆಳೆದಿರುವ ಪ್ರತಿಷ್ಠಿತ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಸಲು ನ.23ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಚುನಾವಣಾಧಿಕಾರಿಯಾಗಿ ಜಿಲ್ಲಾ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ ಬಿ.ಯನ್. ಮತ್ತು ಉಪಚುನಾವಣಾಧಿಕಾರಿಯಾಗಿ ಜಿಲ್ಲಾ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳರವರನ್ನು ನೇಮಕ ಮಾಡಲಾಗಿದೆ.

ದಿನಾಂಕ ನಿಗದಿ:
ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಬಳಿ ವಾರ್ತಾ ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ದ.5ರಂದು ಚುನಾವಣೆ ನಡೆಯಲಿದೆ. ನ.24ರಂದು ಬೆಳಿಗ್ಗೆ 11 ಗಂಟೆಗೆ ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದರೆ ನ.25ರ ಮಧ್ಯಾಹ್ನ 1ರ ಒಳಗೆ ಸಲ್ಲಿಸಬೇಕಿದೆ. ಅದೇ ದಿನ ಸಂಜೆ 5 ಗಂಟೆಗೆ ಮತದಾರರ ಅಂತಿಮ ಪಟ್ಟಿ ಘೋಷಣೆಯಾಗಲಿದೆ. ನ.26ರಿಂದ 28ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಪತ್ರಿಕಾ ಭವನದಲ್ಲಿ ನಾಮಪತ್ರ ಸ್ವೀಕಾರ ನಡೆಯಲಿದೆ. ಬಳಿಕ ನಾಮಪತ್ರ ಪರಿಶೀಲನೆ ನಡೆಯಲಿದೆ. ನ.29ರ ಮಧ್ಯಾಹ್ನದವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ. ಬಳಿಕ ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ದ.5ರಂದು ಮತದಾನ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದಿರುವ 36 ಮಂದಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿದ್ದಾರೆ. ಈ ಪೈಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು 26 ಸದಸ್ಯರು ಅವಕಾಶ ಪಡೆದಿದ್ದಾರೆ. ಪತ್ರಕರ್ತರ ಸಂಘದ ಒಂದು ಅಧ್ಯಕ್ಷ ಸ್ಥಾನ, ಒಂದು ಪ್ರಧಾನ ಕಾರ್ಯದರ್ಶಿ, ಎರಡು ಕಾರ್ಯದರ್ಶಿ, ಎರಡು ಉಪಾಧ್ಯಕ್ಷ, ಒಂದು ಕೋಶಾಧಿಕಾರಿ ಮತ್ತು ಕಾರ್ಯಕಾರಿಣಿಯ ಎಂಟು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ಎರಡು ಸಾವಿರ ರೂ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಕೋಶಾಧಿಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ತಲಾ 1500 ರೂ ಮತ್ತು ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ತಲಾ 500 ರೂ ಠೇವಣಿ ಇರಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.