ನೂಜಿಬಾಳ್ತಿಲ: ಕೃಷಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ; ಅಪಾರ ಹಾನಿ

0

ಅರಣ್ಯಾಧಿಕಾರಿಗಳ ಭೇಟಿ; ಕಂದಕ ನಿರ್ಮಾಣಕ್ಕೆ ನಾಗರಿಕರ ಆಗ್ರಹ

ಕಡಬ: ಕಾಡಾನೆ ಹಿಂಡು ತಡರಾತ್ರಿ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಸಂಬಂಧಿಸಿದ ಗಿಡ-ಮರಗಳಗಳನ್ನು ಹಾನಿಗೊಳಿಸಿದ್ದು, ಅಪಾರ ನಷ್ಟ ಉಂಟು ಮಾಡಿರುವ ಘಟನೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯಡ್ಕ ಭಾಗದಲ್ಲಿ ಸಂಭವಿಸಿದೆ. ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ ಸುಧಾಕರ ಎಸ್., ಪ್ರಸಾದ್, ಲಕ್ಷ್ಮಣ ಎಂಬವರ ಕೃಷಿ ತೋಟಕ್ಕೆ ಕಾಡಾನೆ ಹಾನಿ ಮಾಡಿದೆ. ಒಟ್ಟು 300ಕ್ಕೂ ಅಧಿಕ ಅಡಿಕೆ, 10ಕ್ಕೂ ಅಧಿಕ ತೆಂಗು, ಹಲವಾರು ಬಾಳೆ ಗಿಡಕ್ಕೆ ಹಾನಿಮಾಡಿದೆ. ಫಸಲು ಭರಿತ ಅಡಿಕೆ, ತೆಂಗು, ಬಾಳೆ ಕಾಡಾನೆ ದಾಳಿಗೆ ನೆಲಕಚ್ಚಿದೆ. ಘಟನೆಯಿಂದ ಕೃಷಿಕರು ಲಕ್ಷಾಂತರ ರೂ. ನಷ್ಟಕ್ಕೊಳಗಾಗಿದ್ದಾರೆ.

ಅರಣ್ಯಾಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ, ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃಷಿಕರು, ಸ್ಥಳೀಯರಿಂದ ಮಾಹಿತಿ ಪಡೆದು. ಘಟನೆ ಬಗ್ಗೆ ಹಾನಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಉಪವಲಯಾರಣ್ಯಾಧಿಕಾರಿ ಅಜಿತ್, ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಜತೆಗಿದ್ದರು.

ಆನೆಕಂದಕಕ್ಕೆ ಆಗ್ರಹ: ಈ ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿ ನಡೆಯುತ್ತಿದ್ದು, ಜನರು ಆತಂಕ ಗೊಂಡಿದ್ದಾರೆ. ಕೃಷಿ ನಾಶಕ್ಕೊಳಗಾಗುತ್ತಿರುವುದರಿಂದ ಅರಣ್ಯ ವ್ಯಾಪ್ತಿಯಲ್ಲಿ ಆನೆಕಂದಕ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದರು. ಸೂಕ್ತ ಕ್ರಮದ ಭರವಸೆಯನ್ನು ಅಧಿಕಾರಿಗಳು ನೀಡಿದರು. ಗ್ರಾ.ಪಂ. ಪ್ರಭಾರ ಪಿಡಿಒ ಗುರುವ ಎಸ್., ಗ್ರಾ.ಪಂ ಸದಸ್ಯ ಚಂದ್ರಶೇಖರ ಹಳೆನೂಜಿ, ಸ್ಥಳೀಯರಾದ ಲಕ್ಷ್ಮಣ ಗೌಡ, ಸುಧಾಕರ ಎಸ್., ಪ್ರಸಾದ್, ಸುಂದರ ಗೌಡ ಬಳ್ಳೇರಿ, ಶೀನಪ್ಪ ಗೌಡ ಕಾನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here