ಪ್ರೊ.ಅಮೃತ ಸೋಮೇಶ್ವರರಿಗೆ ‘ಯಕ್ಷಾಮೃತ’ ಗೌರವ ಸಮರ್ಪಣೆ

ಪುತ್ತೂರು:ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸರು, ಸಾಹಿತಿ, ಜಾನಪದ ತಜ್ಞ, ಪ್ರಸಂಗಕರ್ತರು ಆಗಿರುವ ಪ್ರೊ.ಅಮೃತ ಸೋಮೇಶ್ವರರಿಗೆ ‘ಯಕ್ಷಗಾನಾರ್ಚನೆ’ ಹಾಗೂ ‘ಯಕ್ಷಾಮೃತ’ ಗೌರವಾರ್ಪಣೆ ಕಾರ್ಯಕ್ರಮ ಸೋಮೇಶ್ವರದ ‘ಒಲುಮೆ’ಯಲ್ಲಿ ನಡೆಯಿತು.


ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು,ವಿವೇಕಾನಂದ ಸಂಶೋಧನಾ ಕೇಂದ್ರ,‌ ಯಕ್ಷರಂಜಿನಿ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು  ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಪುತ್ತೂರು ಈ ವಿಶೇಷ ಕಾರ್ಯಕ್ರಮವನ್ನು ಪ್ರೊ.ಅಮೃತರ ಮನೆಯಂಗಳದಲ್ಲಿ ಆಯೋಜಿಸಿತ್ತು.


ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಸಂತ ಕುಮಾರ್ ತಾಳ್ತಾಜೆ ಅವರು ನುಡಿ ಗೌರವವನ್ನು ಸಲ್ಲಿಸುತ್ತಾ, ಪ್ರೊ.ಅಮೃತ ಸೋಮೇಶ್ವರ ಅವರು ಸಮನ್ವಯದ ವ್ಯಕ್ತಿತ್ವದೊಂದಿಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ ಸಾಹಿತಿ, ವಿದ್ವಾಂಸರಾಗಿದ್ದಾರೆ. ಶಿಕ್ಷಣ, ಸಾಹಿತ್ಯ ಕ್ಷೇತ್ರದ ಸೇವೆಯೊಂದಿಗೆ, ಯಕ್ಷಗಾನ ಪ್ರಸಂಗಕರ್ತರಾಗಿ ಸಾಂಸ್ಕೃತಿಕ ಮೌಲ್ಯವನ್ನು ಬೆಳೆಸಿದ ಮಹಾನ್ ವಿದ್ವಾಂಸರಾಗಿದ್ದಾರೆ ಎಂದರು.

ಜಾನಪದ ವಿದ್ವಾಂಸ ಪ್ರೊ.ಚಿನ್ನಪ್ಪಗೌಡ ಅವರು ಮಾತನಾಡಿ ಸಾಹಿತ್ಯಿಕ , ಸಾಂಸ್ಕೃತಿಕವಾಗಿ ಸಮಾಜಕ್ಕೆ ಕೊಡುಗೆ ನೀಡಿದವರಲ್ಲಿ ಪ್ರೊ.ಅಮೃತಸೋಮೇಶ್ವರರು ನಮಗೆ ಬಹಳ ಮುಖ್ಯವಾಗಿ ಕಾಣುತ್ತಾರೆ. ಅಮೃತರ ಕುಟುಂಬದ ಶಕ್ತಿಯೇ ಪ್ರೀತಿ ಮತ್ತು ಒಲುಮೆ. ಜ್ಞಾನವನ್ನು, ಅರಿವನ್ನು ಇವರಷ್ಟು ಸಮಾಜಕ್ಕೆ ಹಂಚಿಕೊಂಡವರು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಅವರ ಬದುಕು, ನಡೆನುಡಿ ಎಲ್ಲವೂ ನಮಗೆ ಆದರ್ಶನೀಯವಾದುದು ಎಂದರು.

ಈ ಸಂದರ್ಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಯಕ್ಷರಂಜಿನಿ’ ಕಟ್ಟಿ ಬೆಳೆಸುವುದರ ಮೂಲಕ ಯಕ್ಷಗಾನ, ಸಾಹಿತ್ಯಕ್ಕೆ ಸಂಬಂಧಿಸಿ ಅವರ ಅನೇಕ ಚಟುವಟಿಕೆಗಳು ನಮಗೆಲ್ಲರಿಗೂ ದಾರಿ ದೀಪವಾಗಿದೆ. ಯಕ್ಷಗಾನದ ಕಲೆಯ ಸಂರಕ್ಷಣೆಯ ಕುರಿತ ಅವರ ಚಿಂತನೆಗೆ ನಾವೆಲ್ಲರೂ ಬದ್ಧರಾಗಿ ಯಕ್ಷಗಾನ ಕಲೆಯನ್ನು ಬೆಳೆಸೋಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಅಮೃತಸೋಮೇಶ್ವರ ಅವರು, ಪ್ರೀತಿಯ ಗೌರವಕ್ಕೆ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಇಂದಿನ ಆಧುನಿಕತೆಯಲ್ಲಿ ಆತ್ಮೀಯತೆ, ಸೌಹಾರ್ದತೆಯಿಂದ ನಾವು ಬದುಕಬೇಕು. ನಂಬಿಕೆ, ವಿಶ್ವಾಸದಿಂದ ವಿಶ್ವವನ್ನು ಗೆಲ್ಲಬಹುದು ಎಂದರು.

ಇದೇ ಸಂದರ್ಭದಲ್ಲಿ ವೈವಾಹಿಕ ಜೀವನದ 61 ವರ್ಷ ಪೂರೈಸಿದ ಪ್ರೊ.ಅಮೃತ ಸೋಮೇಶ್ವರ ದಂಪತಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳ ಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರೊ.ಅಮೃತ ಸೋಮೇಶ್ವರ ಅವರ ಸಹೋದ್ಯೋಗಿ ಮಿತ್ರರು, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
.
ಯಕ್ಷಗಾನ ಗಾನಾರ್ಚನೆ:
ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷರಂಜಿನಿ ತಂಡದಿಂದ ಅಮೃತ ಸೋಮೇಶ್ವರರು ರಚಿಸಿದ ಆಯ್ದ ಪ್ರಸಂಗಗಳ ಹಾಡುಗಳ ಯಕ್ಷಗಾನಾರ್ಚನೆ ಕಾರ್ಯಕ್ರಮವು ನಡೆಯಿತು.
ಕಾಲೇಜಿನ ದೇರಾಜೆ ಸೀತಾರಾಮಯ್ಯ ಕೇಂದ್ರದ ಸಂಯೋಜಕರಾದ ಡಾ.ಮನಮೋಹನ ಅವರು ಸ್ವಾಗತಿಸಿದರು.
ಪ್ರಾಧ್ಯಾಪಕ ಡಾ.ಎಚ್ ಜಿ.ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ವಂದಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಗೀತಾ ಕುಮಾರಿ ಟಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.