ನೆಲ್ಯಾಡಿ: ಜ್ಞಾನ ಯಜ್ಞ ನಡೆಯುವುದು ಬಹಳ ಅಪರೂಪ, ಇಂತಹ ಯಜ್ಞ ಇನ್ನಷ್ಟೂ ನಡೆಯಬೇಕು. ಇದರಿಂದ ನಮ್ಮಲ್ಲಿರುವ ಪಾಪ, ಹಿಂಸೆ, ಅಧರ್ಮ ದೂರವಾಗಲಿದೆ. ಕಾಮ, ಲೋಭ, ಮೋಹ, ಕೋಪ, ಅಹಂಕಾರವೂ ದೂರವಾಗಲಿದೆ. ಶ್ರೀ ಮದ್ಭಾಗವತ ಪ್ರವಚನದಿಂದ ಮನಸ್ಸಿನ ಕರ್ಮವೂ ನಾಶಗೊಳ್ಳಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯರೂ ಆದ ರಾಜರ್ಷಿಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ಡಿ.೪ರ ತನಕ ನಡೆಯಲಿರುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞಕ್ಕೆ ಫೆ.೨೭ರಂದು ಚಾಲನೆ ನೀಡಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಜನರಿಗೆ ಶಾಲೆಯ ಶಿಕ್ಷಣ ಸಿಗದಿದ್ದರೂ ಪುರಾಣದ ವಿಚಾರ, ಸತ್ಯ, ಧಮ್ಯ, ನ್ಯಾಯದ ವಿಚಾರದ ಬಗ್ಗೆ ತಿಳುವಳಿಕೆ ಇತ್ತು. ಆದರೆ ಈಗ ಲೌಕಿಕ ವಿಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಭಗವಂತನ ಸ್ಪರ್ಶ ಮಾಡುವ ಅವಕಾಶವೇ ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ. ಇಂತಹ ಜ್ಞಾನ ಯಜ್ಞ ಸಪ್ತಾಹಗಳ ಮೂಲಕ ಪುರಾಣಗಳ ಬಗ್ಗೆ ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಪ್ರವಚನಕಾರರಾದ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆಯವರು ಮಾತನಾಡಿ, ಧರ್ಮ ಪ್ರಪಂಚದ ಆಧಾರ ಸ್ತಂಭ, ಧರ್ಮವು ವೇದ ಧರ್ಮಾಚರಣೆಗೆ ಪ್ರಥಮವಾದ ಗ್ರಂಥ. ಪ್ರಪಂಚದ ಸೃಷ್ಟಿಗೆ ಮೊದಲೇ ವೇದವಿತ್ತು.
ವೇದದ ಸಾರಗಳನ್ನು ತೆಗೆದು ೧೮ ಪುರಾಣದ ರೂಪದಲ್ಲಿ ವೇದವ್ಯಾಸರು ನೀಡಿದ್ದಾರೆ. ಇದರಲ್ಲಿ ಶ್ರೀ ಮದ್ಭಾಗವತ ಪುರಾಣ ತಿಲಕವೆನಿಸಿದೆ. ಇದು ಭಗವಂತನದೇ ಸ್ವರೂಪ. ಇದರ ೧ ಶ್ಲೋಕವಾದರೂ ಪಾರಾಯಣ ಆಗುವಲ್ಲಿ ಸಕಲ ದೇವತೆಗಳೊಂದಿಗೆ ಭಗವಂತನ ಸಾನಿಧ್ಯವಿರುತ್ತದೆ. ಶ್ರೀ ಮದ್ಭಾಗವತ ಪ್ರವಚನದಿಂದ ಕಷ್ಟಗಳು ದೂರವಾಗಿ ಭೂಮಿಯೂ ಪಾವನವಾಗಲಿದೆ. ಪೆರಣ ಭಂಡಾರ ಮನೆಯಲ್ಲಿ ನಡೆಯುವ ಜ್ಞಾನ ಯಜ್ಞಕ್ಕೆ ಭಗವಂತನ ಪ್ರೇರಣೆಯೂ ಇದೆ ಎಂದರು. ಪೆರ್ಲ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಬಡೆಕ್ಕಿಲ್ಲಾಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೆರಣ ಭಂಡಾರ ಮನೆಯ ಮೊಕ್ತೇಸರರಾದ ವಿಶ್ವನಾಥ ಗೌಡ ಪೆರಣ ಹಾಗೂ ಶ್ರೀಮತಿ ಗುಲಾಬಿ ಪೆರಣ ದಂಪತಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಫಲತಾಂಬೂಲ ಸಮರ್ಪಿಸಿದರು. ಪ್ರಚಾರ ಸಮಿತಿ ಸಂಚಾಲಕ ಪುರುಷೋತ್ತಮ ಕುದ್ಕೋಳಿ ಸ್ವಾಗತಿಸಿದರು. ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಅಧ್ಯಕ್ಷ ಓಡ್ಯಪ್ಪ ಗೌಡ ಪೆರಣ ಹಾಗೂ ಪದಾಧಿಕಾರಿಗಳು ಸಹಕರಿಸಿದರು. ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಬರಮಾಡಿಕೊಳ್ಳಲಾಯಿತು. ಪೆರಣ ಭಂಡಾರ ಮನೆಯ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಳಿಕ ಭಗವದ್ಗೀತೆಗೆ ಪೂಜೆ ಸಲ್ಲಿಸಿದರು.