ಪತ್ರಕರ್ತರ ಸಂಘದ ಹೆಸರಿನಲ್ಲಿ ‘ಪತ್ರಿಕಾ ಭವನ’ವನ್ನು ದುರುಪಯೋಗಪಡಿಸುತ್ತಿದ್ದರು
ಈಗ ಪತ್ರಿಕಾ ಭವನ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನಕ್ಕೆ ಬರ್ತದೆ.
ಶ್ರವಣ್ ಕುಮಾರ್ ನಾಳ ಮನದಾಳದ ಮಾತು
ಉಪ್ಪಿನಂಗಡಿಯ ಪತ್ರಕರ್ತರು ನಮಗೆ ನಿರಂತರ ಬೆಂಬಲ ನೀಡಿದವರು. ಆ ಕಾರಣಕ್ಕಾಗಿಯೇ ನಮ್ಮದೇ ತಂಡದ ಸಿದ್ದೀಕ್ ನೀರಾಜೆಯವರಿಗೆ ಸಂಘದ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತಿರುವುದಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಸಂಘದ ಹಾಲಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಹೇಳಿದ್ದಾರೆ.
ಇಲ್ಲಿ ಒಂದು ಎರಡು ತಂಡ ಇತ್ತು, ನಮ್ ನಮ್ದೆ ಒಂದು ಸಂಘ ಅಂತ ಹೇಳಿ, ನಮ್ದು ಒಂದು ಸೆಪರೇಟ್ ಸಂಘ ಅಂತ ಹೇಳಿ ಪತ್ರಕರ್ತರು ವಿಭಾಗ ಮಾಡ್ಕೊಂಡು ಅವರವರೇ ಚುನಾವಣೆ ಮಾಡ್ಕೊಂಡಿದ್ರು.ಆ ಸಂಘವನ್ನು ಒಂದೇ ಸೂರಿನಡಿಯಲ್ಲಿ ತರ್ಬೇಕು ಅಂತ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ನಿರ್ದೇಶನ ಇತ್ತು, ಇವತ್ತಿಗೆ ಅದು ಸಕ್ಸಸ್ ಆಗಿದೆ.ಯಾರೆಲ್ಲಾ ನಮ್ ನಮ್ ಸಂಘ ಅಂತ ಹೇಳ್ಕೊಂಡು ಬಂದಿದ್ರೋ ಅವ್ರೆಲ್ಲಾ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ’ ಚುನಾವಣೆಗೆ ಸ್ಪಽಸಿದ್ದಾರೆ.ಅದ್ರಿಂದಾಗಿ ಅವರು, ತಮ್ಮ ಬೇರೆ ಸಂಘವನ್ನೆಲ್ಲಾ ತ್ಯಜಿಸಿ ಒಂದೇ ಸಂಘಕ್ಕೆ ಬಂದಿದ್ದಾರೆ ಎಂಬುದು ಖುಷಿಯ ವಿಚಾರ.ಎರಡನೇ ವಿಚಾರ ಏನಂದ್ರೆ, ನಾನು ಸಂಘದ ಚುನಾವಣೆಗೆ ಸ್ಪರ್ಧಿ ಅಲ್ಲ. ಈ ಸಲ ನಮ್ಮದೇ ತಂಡದ ಓರ್ವ ಸದಸ್ಯ ಸಿದ್ದಿಕ್ ನೀರಾಜೆ ಅವರಿಗೆ ನಾವು ಇವತ್ತು ಬೆಂಬಲ ಘೋಷಿಸ್ತೇವೆ, ಸಿದ್ದಿಕ್ ನೀರಾಜೆ ಅವರು ನಮ್ಮದೇ ತಂಡದ ಸದಸ್ಯನಾಗಿರುವುದರಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕುಳ್ಳಿರಿಸಿ ನಾವು ನಮ್ಮ ಪ್ರಪ್ರಥಮ ಕರ್ತವ್ಯವನ್ನು ನಿಭಾಯಿಸಿದ್ದೇವೆ.
ಈ ಪತ್ರಕರ್ತರ ಸಂಘದ ಹೆಸರಿನಲ್ಲಿ ‘ಪತ್ರಿಕಾ ಭವನ’ವನ್ನು ದುರುಪಯೋಗಪಡಿಸಿಕೊಂಡು ಇಲ್ಲಿ ಕೆಲವು ಅವ್ಯವಹಾರದ ಬಗ್ಗೆ ನಾವು ಬಹಳ ವರ್ಷದ ಹಿಂದೆ ಒಂದು ಹೋರಾಟ ಮಾಡಿದ್ವಿ.ವಾರ್ತಾ ಇಲಾಖೆಯ ಅಧೀನದಲ್ಲಿರುವ ಪ್ರೆಸ್ ಕ್ಲಬ್ ಕಟ್ಟಡದಲ್ಲಿ ರಾತ್ರಿ 12-1 ಗಂಟೆವರೆಗೆ ಓಪನ್ ಇರ್ತದೆ, ಅಲ್ಲಿ ಏನು ನಡೀತಿದೆ? ಏನು ಕಾರ್ಯಚಟುವಟಿಕೆ ನಡೀತಿದೆ? ಅಲ್ಲಿ ಏನ್ ಡೀಲ್ಗಳು ನಡೀತಾ ಇವೆ ಎಂಬುದರ ಬಗ್ಗೆ ಎಲ್ಲಾ ಪತ್ರಕರ್ತರಿಗೆ ಗೊತ್ತಿದೆ.ಈ ಬಗ್ಗೆ ನಮ್ಮ ಪುತ್ತೂರಿನವರಿಗಿಂತ ಜಾಸ್ತಿ ಉಪ್ಪಿನಂಗಡಿ ಭಾಗದ ಪತ್ರಕರ್ತರೇ ತುಂಬಾ ವಿರೋಧ ಮಾಡಿರುವಂತದ್ದು. ಆರು ತಿಂಗಳ ಹಿಂದೆ ಈ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬೆಂಬಲ ಕೊಟ್ಟವರು ಉಪ್ಪಿನಂಗಡಿಯವರು. ಉದಯ ಕುಮಾರ್ ಇರ್ಬಹುದು, ಸಿದ್ದಿಕ್ ನೀರಾಜೆ ಇರ್ಬಹುದು, ದೀಪಕ್ ಇರಬಹುದು ಹೀಗೆ ಒಂದು ಐದಾರು ಜನ ಪತ್ರಕರ್ತರು, ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲೇ ಅವರೆಲ್ಲಾ ಸ್ಪಷ್ಟವಾಗಿ ಒಂದು ಮಹಾಸಭೆಯಲ್ಲಿ, ಹೀಗಿಗೆ ಆಗಿದೆ – ಇಂತಹ ಸಮಸ್ಯೆ ಇದೆ, ಲೆಕ್ಕಪತ್ರ ಸರಿ ಇಲ್ಲ, ಇದನ್ನು ಸರಿ ಮಾಡಿಸ್ಬೇಕು ಎಂಬುದಾಗಿ, ಇದರ ಬಗ್ಗೆ ಸ್ಪಷ್ಟವಾಗಿ, ಖಡಾಖಂಡಿತವಾಗಿ ವಿರೋಽಸಿ, ಅದನ್ನು ಸರಿ ಮಾಡ್ಬೇಕು ಎನ್ನುವ ವಿಚಾರದಲ್ಲಿ ಆಗಿರುವಂತಹ ಗೊಂದಲ, ಅದು ಆಮೇಲೆ ಯಾವ್ದ್ಯಾವುದೋ ರೂಟಿಗೆ ಹೋಯ್ತು.
ಈಗ ಅದೇ ಉಪ್ಪಿನಂಗಡಿ ಭಾಗದ ಸದಸ್ಯರು ನಮ್ಮಲ್ಲಿ ಹೊಂದಾಣಿಕೆಯಲ್ಲಿ ಇದೀಗ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಸಿದ್ದಿಕ್ ನೀರಾಜೆ ಅವರು ನಿಂತಿದ್ದಾರೆ. ಸೋ ನಮ್ಗೆ ಭಾರೀ ಖುಷಿ, ನಮ್ಮದೇ ಒಂದು ಪತ್ರಕರ್ತರ ಸಂಘವನ್ನು-ಪತ್ರಿಕಾ ಭವನವನ್ನು ಸರಿದಾರಿಗೆ ತರುವಂತಹ ಒಂದು ಪ್ರಯತ್ನದಲ್ಲಿ ಮೊದಲ ಹೆಜ್ಜೆಯಾಗಿ ನಮಗೆ ಅದು ಯಶಸ್ವಿ ಗೆಲುವು.ಯೂಷ್ಯುವಲ್ ಆಗಿ ನಮ್ದೊಂದು ಪ್ಲ್ಯಾನ್ ಇತ್ತು, ಅಧ್ಯಕ್ಷ ಸ್ಥಾನಕ್ಕೆ ತುಂಬಾ ಜನ ಕಾಂಪೀಟ್ ಮಾಡ್ತಾರಾ ಅಂತ ಹೇಳಿ-ಅದಕ್ಕೆ ನಾವೊಂದು ವ್ಯವಸ್ಥಿತವಾದ ಪ್ಲ್ಯಾನ್ ಮಾಡ್ಕೊಂಡು ನಾನು ಮತ್ತು ಸಿದ್ದಿಕ್ ನೀರಾಜೆ ಅವರು ಇದೀಗ ನಾಮಪತ್ರ ಸಲ್ಲಿಸಿದ್ದೇವೆ.ಸಿದ್ದಿಕ್ ಅವರು ನಮ್ದೇ ಟೀಂ. ಸುದ್ದಿ ಬಿಡುಗಡೆ ಮತ್ತು ಇನ್ನಿತರರ ಬೆಂಬಲ ಪತ್ರಕರ್ತರಿಗೆ ನಿರಂತರವಾಗಿ ಇತ್ತು.ಅವರು ಪತ್ರಿಕಾ ಭವನದಲ್ಲಿ ನಡೆಯುವಂತಹ ಕಾರ್ಯಚಟುವಟಿಕೆ, ಅವ್ಯವಹಾರದ ಬಗ್ಗೆ ನಿರಂತರವಾಗಿ ವಿರೋಽಸ್ತಾ ಬಂದವರು.ಅದಕ್ಕೆ ನಮ್ಮ ಉಪ್ಪಿನಂಗಡಿಯವರು ಕೂಡಾ ಕಳೆದ ಹಲವು ಸಮಯಗಳಿಂದ ನಮಗೆ ಬೆಂಬಲ ಕೊಡ್ತಾ ಇದ್ರು ಈಗ ಯಶಸ್ವಿಯಾಗಿದೆ. ನಮ್ಮ ಒಂದು ಯಶಸ್ಸಿನ ಭಾಗವಾಗಿ ನಾವು ಉಪ್ಪಿನಂಗಡಿ ಭಾಗದ ಸಿದ್ದಿಕ್ ನೀರಾಜೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವಂತಹ ಒಂದು ಸನ್ನಿವೇಶ ಬಂದಿದೆ, ಇದು ನಮಗೆ ತುಂಬಾ ಖುಷಿಯ ವಿಚಾರ.
ಮತ್ತೊಂದು ವಿಚಾರ ಹೇಳ್ಬೇಕಂದ್ರೆ, ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಮೂರು ಸಲ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಸಹ ಒಂದು ಮಾತು ಹೇಳಿದ್ದಾರೆ, ‘ನೀನು ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ಏನು ಕ್ರಮ ಕೈಗೊಳ್ತಿಯಾ, ಅದು ಅವರನ್ನೆಲ್ಲಾ ಒಟ್ಟು ಸೇರಿಸುವ ಹಾಗೆ ಇರ್ಬೇಕು. ಅದರಿಂದಾಗಿ ನಿಂಗೆ ಏನು ಜವಾಬ್ದಾರಿ ಬೇಕು? ನಮ್ಮ ಬೆಂಬಲ ಬೇಕು ಅದನ್ನು ನಾವು ಕೊಡ್ತೇವೆ ಅಂತ ಹೇಳಿದ್ರು. ಆ ಕಾರಣಕ್ಕಾಗಿಯೇ ಮೊನ್ನೆ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ, ನಮ್ಮ ಪತ್ರಿಕಾ ಭವನಕ್ಕೆ ರಾಜ್ಯಾಧ್ಯಕ್ಷರು ಭೇಟಿ ನೀಡಿ, ಕಾರ್ಯನಿರತ ಪತ್ರಕರ್ತರ ಸಂಘದ ಮೆಂಬರ್ಶಿಪ್ ಎಲ್ರಿಗೂ ಕೊಟ್ಟಿದ್ದಾರೆ. ಅದರ ನಂತ್ರ ಕೆಲವು ಬೆಳವಣಿಗೆ ಆಯ್ತು, ಆವಾಗ ಅವರು ನಂಗೆ ಕಾಲ್ ಮಾಡಿ ‘ಏನಪ್ಪಾ.. ಏನಾಯ್ತು? ನಾನು ನಿನ್ನ ಮಾತು ಕೇಳಿ ಪುತ್ತೂರಿಗೆ ಬಂದೆ, ಈಗ ಅಲ್ಲಿ ಏನ್ ನಡೀತಿದೆ. ನಂಗೊತ್ತಿಲ್ಲ ಎರಡು ತಿಂಗಳಷ್ಟು ಸಮಯ ಕೊಡ್ತೇನೆ ನೀನು ಎಲ್ಲರನ್ನೂ ಒಂದೇ ಪ್ರೆಸ್ ಕ್ಲಬ್ ಅಂಡರ್ನಲ್ಲಿ ಎಲ್ಲರನ್ನೂ ತಂದು, ನಿಮ್ಮ ಆ ಸಂಘ ಈ ಸಂಘ ಯಾವುದೂ ಬೇಡ ‘ಕಾರ್ಯನಿರತ ಪತ್ರಕರ್ತರ ಸಂಘ’ದ ಅಡಿಯಲ್ಲೇ ಎಲ್ಲರೂ ಬರ್ಬೇಕು ಅಂತ ಹೇಳಿ ಒಂದು ನಿರ್ದೇಶನ ಕೊಟ್ಟಿದ್ರು. ಇದು ಇವತ್ತು ಸಕ್ಸಸ್ ಆಗಿದೆ, ನಂಗೆ ಭಾರೀ ಖುಷಿಯ ವಿಚಾರ. ಎಲ್ರೂ ಒಂದೇ ಸಂಘದ ಅಧೀನದಲ್ಲಿ ಇವತ್ತು ಕಾಂಪೀಟ್ ಮಾಡಿದ್ದಾರೆ. ನಮ್ಮ ಮೂಲ ಉದ್ದೇಶವೇ ಅದು, ಯಾರು ಬೇರೆ ಬೇರೆ ಸಂಘ ಕಟ್ಟಿಕೊಂಡು ಹೋಗಿದ್ದಾರೋ ಅವರು ಈ ಸಂಘಕ್ಕೇ ಚುನಾವಣೆಗೆ ಸ್ಪರ್ಧಿಸ್ಬೇಕು, ಮತದಾನ ಮಾಡ್ಬೇಕು ಎಂಬುದೇ ನಮ್ಮ ಉದ್ದೇಶ. ನಾವು ತುಂಬಾ ಜನರಲ್ಲಿ ಕೇಳಿದ್ದೇವೆ, ’ನೀವು ಯಾರಾದ್ರೂ ನಿಲ್ತೀರಾ? ಕಾಂಪೀಟ್ ಮಾಡ್ತೀರಾ?’ ಅಂತ. ಆವಾಗ ನಮ್ಮವರು ಯಾರೂ ’ಬೇಡ ನಮ್ಗೆ ಎಲ್ಲರೂ ಒಟ್ಟಿಗೆ ಇರ್ಬೇಕು ಅಂತ ಯೋಚನೆ ಇದೆ’ ಅಂತ ಹೇಳಿದ್ರು.ಈಗ ಪತ್ರಿಕಾ ಭವನ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನಕ್ಕೆ ಬರ್ತದೆ. ಮುಂದಿನ ಕಾರ್ಯಚಟುವಟಿಕೆ ಬಗ್ಗೆ ಮತ್ತು ಯಾವ ರೀತಿ ಪತ್ರಿಕಾ ಭವನ ಕಾರ್ಯ ನಡೆಸಬೇಕು ಎಂಬುದರ ಬಗ್ಗೆ ಜಿಲ್ಲಾ ಸಂಘ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿರ್ದೇಶನ ಬರ್ತದೆ. ಮುಂದಿನ ದಿನಗಳಲ್ಲಿ ಅದರ ಲೆಕ್ಕಪತ್ರ, ಅದರ ಕಾರ್ಯಚಟುವಟಿಕೆಗಳು, ಪ್ರೆಸ್ ಮೀಟ್ ಇದೆಲ್ಲದರ ಬಗ್ಗೆ ಗೈಡ್ ಲೈನ್ ಬರ್ತದೆ. ಇದೇ ಒಂದು ಖುಷಿ.ನಾನು ಈ ಬಾರಿ ತಾಲೂಕು ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸ್ಪರ್ಧೆಗೆ ಹಿಂದೆ ಸರಿದದ್ದು ಯಾಕಂದ್ರೆ ನನ್ನ ಜವಾಬ್ದಾರಿ ಮುಗಿಯಿತು. ರಾಜ್ಯಾಧ್ಯಕ್ಷರಾಗಿರುವ ಶಿವಾನಂದ ತಗಡೂರು ಮತ್ತು ಜಿಲ್ಲಾಧ್ಯಕ್ಷರಾಗಿರುವ ಶ್ರೀನಿವಾಸ ಇಂದಾಜೆ ಅವರೊಂದು ಮಾತು ಹೇಳಿದ್ರು, ‘ನೀನು ಮಂಗಳೂರು ಬಿಟ್ಟು ಪುತ್ತೂರಿಗೆ ಹೋಗ್ತಾ ಇದ್ದೀಯ ಅಲ್ಲಿ ಕೆಲವೊಂದು ಗೊಂದಲಗಳನ್ನು ಸರಿ ಮಾಡ್ಬೇಕು’ ಅಂತ ಹೇಳಿ. ಈಗ ನನ್ನ ಕಾರ್ಯವ್ಯಾಪ್ತಿ ಪುತ್ತೂರು ಸೇರಿದಂತೆ ಮಂಗಳೂರು ಕೂಡಾ ಆಗಿರುವ ಕಾರಣ ನಾನು ಸಾಮಾನ್ಯವಾಗಿ ಮಂಗಳೂರಿನಲ್ಲೇ ಇರ್ಬೇಕಾಗ್ತದೆ.ಈ ಸಂದರ್ಭ ನಮ್ಮ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಹೇಳಿದ್ರು, ‘ನಿನ್ನ ಕರ್ತವ್ಯವನ್ನು ನೀನು ಸರಿ ಮಾಡಿದ್ದೀಯಾ? ನೀನು ಯಾಕೆ ಎಲ್ಲರನ್ನೂ ಒಂದೇ ಸೂರಿನಲ್ಲಿ ತರ್ಲಿಲ್ಲ’ ಅಂತ ಹೇಳಿ. ಆ ನಿಟ್ಟಿನಲ್ಲಿ ಈಗ ಎಲ್ಲರೂ ಒಟ್ಟಿಗೆ ಸೇರಿದ್ದೇವೆ. ಎಲ್ರೂ ಹೊಂದಾಣಿಕೆಯ ಮೂಲಕ ಒಂದು ವ್ಯವಸ್ಥಿತವಾದ ಅಭ್ಯರ್ಥಿಯ ಘೋಷಣೆ ಆಗಿದೆ. ಈ ವಿಚಾರವಾಗಿ ನಮ್ಗೆ ಯಾರು ನೇರವಾಗಿ, ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದಾರೋ ಅವರಿಗೆಲ್ಲರಿಗೂ ನಾನು ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸ್ತಿದ್ದೇನೆ.
ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಡೆಯವರು ಅವರ ಕಡೆಯವರು ಅಂತ ಇಲ್ಲ. ಎಲ್ಲಾ ಒಟ್ಟಾಗಿಯೇ ಅವಿರೋಧವಾಗಿಯೇ ಆಯ್ಕೆ ಆಗ್ತದೆ, ಹೌದಾ ಅಲ್ವಾ ನೋಡಿ ನೀವು! ಕಾಂಪಿಟೇಷನ್ ಅಂತ ನಮಗೆ ಅಗತ್ಯವೇ ಇಲ್ಲ, ಬೇಡವೇ ಬೇಡ, ಚುನಾವಣೆಯಲ್ಲಿ ಸ್ಪರ್ಧಿಸ್ಲಿಕ್ಕೆ ಇಂಟರೆಸ್ಟ್ ಇರುವವರಿಗೆ ನಾವು ಈಗಾಗಲೇ ಕೇಳಿದ್ದೇವೆ. ಆದ್ರೆ ಈಗ ನಾವು ಅವಿರೋಧವಾಗಿಯೇ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆಗೆ ನಾವು ಬಂದಿದ್ದೇವೆ-ಅವಿರೋಧವಾಗಿಯೇ ಆಯ್ಕೆ ಆಗ್ತದೆ. ಮತ್ತಿದು ಯಾರ ಜಯವೂ ಅಲ್ಲ ನಮ್ಮ ಸಂಘಟಿತ ಹೋರಾಟದ ಜಯ ಎಂದು ಹೇಳಲು ಬಯಸ್ತೇನೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಈ ಚುನಾವಣೆ ನಮ್ಮ ರಾಜ್ಯ ಮತ್ತು ಜಿಲ್ಲಾ ಸಂಘ ಒಟ್ಟು ಸೇರಿ ಮಾಡುವ ಪ್ರಥಮ ಚುನಾವಣೆಯಾಗಿದ್ದು, ಈ ಪ್ರಥಮ ಚುನಾವಣೆಯಲ್ಲಿ ‘ಸ್ಪರ್ಧೆ ಇದೆ ಆದ್ರೆ ಚುನಾವಣೆ ಇಲ್ಲ’ ಅವಿರೋಧವಾಗಿಯೇ ಆಯ್ಕೆ ಆಗ್ತದೆ. ಇಂದು ಸಾಯಂಕಾಲದೊಳಗೆ ಸ್ಪಷ್ಟವಾದ ಚಿತ್ರ ನಿಮಗೆ ಸಿಗ್ತದೆ.
ರಾಜ್ಯಾಧ್ಯಕ್ಷರು ಒಂದು ಮಾತು ಹೇಳಿದ್ರು, ‘ಸುದ್ದಿ ಬಿಡುಗಡೆಯ ಕೆಲವು ಪತ್ರಕರ್ತರು ಪ್ರೆಸ್ ಕ್ಲಬ್ಗೆ ಬರುವುದಿಲ್ಲ ಅವರಿಗೆ ಅಲ್ಲಿ ಸ್ವಲ್ಪ ತೊಂದರೆ ಆಗ್ತಾ ಇದೆ ಹೌದಾ? ಅಂತ ನನ್ನಲ್ಲಿ ಕೇಳಿದ್ರು. ಹೌದು ಅವರಿಗೆ ಅಲ್ಲಿ ಸ್ವಲ್ಪ ಸಮಸ್ಯೆ ಆಗ್ತಿತ್ತು. ಅದನ್ನು ವ್ಯವಸ್ಥಿತ ರೀತಿಯಲ್ಲಿ ಸರಿ ಮಾಡ್ಲಿಕ್ಕೆ ಅವರು ಹೇಳಿದ್ರು. ಇವತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅವರಿಗೆ ಒಂದು ಸೂಕ್ತವಾಗಿರುವಂತಹ ಒಂದು ಭದ್ರತೆ ರೀತಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೂ ಕೂಡಾ ಕೊಟ್ಟಿದ್ದಾರೆ. ಈಗ ಅವರು ಪತ್ರಿಕಾ ಭವನಕ್ಕೆ ಬಂದಿದ್ದಾರೆ, ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಬಂದಿದ್ದಾರೆ, ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಇಲ್ಲಿ ಸ್ವಲ್ಪ ಗೊಂದಲ ಇತ್ತು, ನಮ್ಮ ಪ್ರೆಸ್ ಕ್ಲಬ್ನಲ್ಲಿ ಅವ್ಯವಹಾರದ ಬಗ್ಗೆ ನಿರಂತರವಾಗಿ ಅವರು ಹೇಳ್ತಾ ಇದ್ರು, ಪ್ರೆಸ್ ಕ್ಲಬ್ನಲ್ಲಿ ಆ ರೀತಿಯ ಸಮಸ್ಯೆ ಉಂಟು ಈ ರೀತಿಯ ಸಮಸ್ಯೆ ಉಂಟು’ ಎಂದು. ಇದರಿಂದಾಗಿ ಆ ಅವ್ಯವಹಾರದಲ್ಲಿ ನಿರತರಾಗಿದ್ದ ಕೆಲವು ಪತ್ರಕರ್ತರಿಗೆ ಅದನ್ನು ಅರಗಿಸಿಕೊಳ್ಳಿಕ್ಕೆ ಸಾಧ್ಯವಾಗ್ತಿರ್ಲಿಲ್ಲ ಇದರಿಂದಾಗಿ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಎಲ್ಲಾ ಕೊಡ್ತಾ ಇದ್ರು, ಈ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ಬಿನಿಂದ ಸುದ್ದಿಯವರು ಹೊರಗೆ ಇದ್ರು. ಈ ಕಾರಣಕ್ಕಾಗಿ ರಾಜ್ಯಾಧ್ಯಕ್ಷರು ಮಧ್ಯಪ್ರವೇಶಿಸಿ ಅವರನ್ನು ಈಗ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆಗೆ ಪ್ರಸ್ ಕ್ಲಬ್ಗೂ ಬರುವಂತಹ ಅವಕಾಶವನ್ನು ಕೊಟ್ಟಿದ್ದಾರೆ, ಅವರೂ ಬಂದಿದ್ದಾರೆ. ನಮ್ಮ ಎಲ್ಲಾ ಪತ್ರಕರ್ತರು ಹಳೆಯದನ್ನು ಮರೆತಿದ್ದಾರೆ ಅಂತ ನನ್ನ ನಂಬಿಕೆ. ಹಳೆಯದನ್ನು ಮರೆತರೆ ವ್ಯವಸ್ಥಿತವಾಗಿ ಮುಂದಿನದ್ದು ನಡೀತದೆ, ಇಲ್ಲದೇ ಇದ್ರೆ ಅದರ ವಿಚಾರ ರಾಜ್ಯ ಸಂಘಕ್ಕೆ ಮತ್ತು ಜಿಲ್ಲಾ ಸಂಘಕ್ಕೆ ಬಿಟ್ಟಿರುವಂತದ್ದು ಎಂದು ಶ್ರವಣ್ ಕುಮಾರ್ ನಾಳ ಹೇಳಿದ್ದಾರೆ.