ಫಂಡ್ ಇಲ್ಲ ಎಂದ ನಗರಸಭಾ ಸದಸ್ಯ | ಆದಂರವರ ಕಾರ್ಯಕ್ಕೆ ಸರ್ವರ ಪ್ರಶಂಸೆ
ಪುತ್ತೂರು: ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ಜಂಕ್ಷನ್ ಬಳಿ ಎತ್ತರದ ಪ್ರದೇಶ(ಒಳ ರಸ್ತೆ)ದಿಂದ ಮುಖ್ಯರಸ್ತೆಗೆ ಹರಿಯುತ್ತಾ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದ ಮಳೆ ನೀರಿಗೆ ಡ್ರೈನೇಜ್ ನಿರ್ಮಿಸಿ, ಮಳೆ ನೀರು ಡ್ರೈನೇಜ್ ಮೂಲಕವೇ ಹರಿಯುವಂತೆ ಮಾಡುತ್ತಾ ಮಳೆ ನೀರು ಮುಖ್ಯರಸ್ತೆಗೆ ಬರದಂತೆ ಸೂಕ್ತ ಕಾಯಕಲ್ಪ ಕಲ್ಪಿಸಿ ಸಾರ್ವಜನಿಕರಿಗೆ ಇದರಿಂದಾಗುವ ತೊಂದರೆಯನ್ನು ತಪ್ಪಿಸುವ ಮೂಲಕ ನಗರಸಭೆ ಮಾಡಬೇಕಾಗಿದ್ದ ಕಾರ್ಯವನ್ನು ಸ್ಥಳೀಯ ನಿವಾಸಿ ಆದಂ(ಸೌಹಾರ್ದ)ರವರು ಸ್ಥಳೀಯರ ಸಹಕಾರದಿಂದ ನಿರ್ವಹಿಸುವ ಮೂಲಕ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರಸಭೆ ವಾರ್ಡು 26ರ ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿನ ಬಸ್ಸು ನಿಲ್ದಾಣದ ಬಳಿ ಹಾದು ಹೋಗಿರುವ ರಸ್ತೆಯ ಒಂದು ಬದಿ ಡ್ರೈನೇಜ್ ಇತ್ತಾದರೂ ಮಳೆ ನೀರು ಮಾತ್ರ ಎತ್ತರದ ಪ್ರದೇಶದಿಂದ ಮಾರ್ಗದಲ್ಲಿಯೇ ಹರಿದು ಹೋಗುತ್ತಾ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟು ಮಾಡಿತ್ತು. ಮಳೆ ನೀರು ಮುಖ್ಯರಸ್ತೆಗೆ ಹೋಗದಂತೆ ತಡೆಯಲು ಸೂಕ್ತ ಡ್ರೈನೇಜ್‌ನ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ಮುಖ್ಯ ರಸ್ತೆಗೆ ಬಂದು ಇಳಿಜಾರು ಪ್ರದೇಶದ ಮೂಲಕ ಹರಿದು ಹೋಗುತ್ತಿತ್ತು. ಮಳೆ ನೀರು ಡ್ರೈನೇಜ್ ಮೂಲಕವೇ ಹರಿದು ಹೋಗಲು ಡ್ರೈನೇಜ್ ನಿರ್ಮಿಸಿಕೊಡುವಂತೆ ಸ್ಥಳೀಯ ವಾರ್ಡ್ ಸದಸ್ಯರಲ್ಲಿ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ ಸ್ಥಳೀಯರ ಮನವಿಗೆ ಅಲ್ಲಿನ ವಾರ್ಡ್ ಸದಸ್ಯರು ಇದಕ್ಕೆ ನಗರಸಭೆಯಲ್ಲಿ ಫಂಡ್ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ರೂ.43 ಸಾವಿರ ವೆಚ್ಚದ ಕಾಮಗಾರಿ:
ನಗರಸಭಾ ಸದಸ್ಯರ ನಿರ್ಲಕ್ಷ್ಯತನಕ್ಕೆ ಬೇಸತ್ತ ಸ್ಥಳೀಯ ನಿವಾಸಿ ಪಿಕಪ್ ಚಾಲಕ ಆದಂರವರು ತಾನೇ ಖುದ್ದಾಗಿ ನೇತೃತ್ವ ವಹಿಸಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಡ್ರೈನೇಜ್ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಮುಂದಾದರು. ಸಣ್ಣ ಮಟ್ಟಿನ ಮೊತ್ತದಲ್ಲಿ ಈ ಕಾರ್ಯ ಆಗಬಹುದು ಎಂದು ಆದಂರವರು ಮೊದಲು ತಿಳಿದಿದ್ದರು. ಆದರೆ ಖರ್ಚು ಹೆಚ್ಚಾಯಿತು ಎಂದು ಕೆಲಸ ನಿಲ್ಲಿಸದೆ ಡ್ರೈನೇಜ್ ಕಾರ್ಯವನ್ನು ಪೂರ್ಣಗೊಳಿಸಿರುತ್ತಾರೆ. ಆದಂರವರ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು ಕೂಡ ಕೈಜೋಡಿಸಿದ್ದು ಸುಮಾರು ರೂ.10 ಸಾವಿರ ಮೊತ್ತ ಸಂಗ್ರಹವಾಗಿದೆ. ಬಾಕಿ ಉಳಿದ ಮೊತ್ತವನ್ನು ತಾನೇ ಭರಿಸುತ್ತೇನೆ, ಸ್ಥಳೀಯರು ಕೊಟ್ಟರೆ ಸ್ವೀಕರಿಸುತ್ತೇನೆ. ಆದರೆ ನನಗೆ ಮಾಡಿದ ಕೆಲಸ ತೃಪ್ತಿ ಕೊಟ್ಟಿದೆ ಎಂದು ಆದಂರವರು ‘ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ. ಇದೇ ಆದಂರವರು ಸುಮಾರು ನಾಲ್ಕು ವರ್ಷ ಆಂಬುಲೆನ್ಸ್‌ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕೊಡೊಯ್ಯುವ ಕಾಯಕವನ್ನು ನಿರ್ವಹಿಸಿದ್ದರು. ಅಲ್ಲದೆ ತನ್ನ ಮನೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳನ್ನು ಸ್ವತಃ ಆದಂರವರೇ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿ ವರ್ಷ ತೆರವುಗೊಳಿಸಿ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಅನುವು ಮಾಡಿಕೊಡುತ್ತಾ ಬಂದಿರುತ್ತಾರೆ.
ಸ್ಥಳೀಯ ನಿವಾಸಿ ಚಂದ್ರಶೇಖರ್ ಭಟ್‌ರವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿನ ಆದಂರವರ ಸಮಯಸ್ಫೂರ್ತಿಯಿಂದ ಮತ್ತು ಅವರಲ್ಲಿನ ಸಮಾಜ ಸೇವೆಯ ಗುಣಗಳಿಂದ ಉತ್ತಮ ಕಾರ್ಯ ಇಲ್ಲಿ ನಡೆದಿದೆ. ಈ ಭಾಗದ ಜನರಿಗೆ ಇದರಿಂದ ಬಹಳ ಪ್ರಯೋಜನವಾಗಲಿದ್ದು ಯಾರು ನೆರವಿನ ಹಸ್ತವನ್ನು ನೀಡಲು ಮನಸ್ಸಿದ್ದವರು ಮುಂದಿನ ದಿನಗಳಲ್ಲಿ ನೀಡಬಹುದು ಎಂದರು. ಸ್ಥಳೀಯ ಅಮೃತ್ ಜನರಲ್ ಸ್ಟೋರ‍್ಸ್‌ನ ಉಮೇಶ್, ಅಮೃತ್ ಫ್ಯಾನ್ಸಿಯ ಗಣೇಶ್ ಆಚಾರ್ಯ, ಎ-ವನ್ ಸ್ಟೋರ್‌ನ ಅದ್ರಾಮ ಸಹಿತ ಹಲವರು ಉಪಸ್ಥಿತರಿದ್ದರು.