ವಿದ್ಯಾರ್ಥಿಗಳಲ್ಲಿ ಸಮಗ್ರತೆ, ಪ್ರಾಮಾಣಿಕತೆ, ಜವಾಬ್ದಾರಿ ಮೇಳೈಸಲಿ-ಮೇಜರ್ ರಾಧೇಶ್
ಪುತ್ತೂರು: ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಬಹುದು ಜೊತೆಗೆ ವಿದ್ಯಾರ್ಥಿಗಳಲ್ಲಿ ಸಮಗ್ರತೆ, ಪ್ರಾಮಾಣಿಕತೆ, ಜವಾಬ್ದಾರಿ ಮೇಳೈಸಲಿ ಎಂದು ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಭಾರತೀಯ ಸೇನೆ(ವಾಯುಯಾನ ದಳ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಜರ್ ರಾಧೇಶ್ ಆರ್‌ರವರು ಹೇಳಿದರು.
ಡಿ.1 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ ಜರಗಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 50 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಥೆಯಲ್ಲಿನ ಶಿಕ್ಷಕರು ಹಾಗೂ ಮನೆಯಲ್ಲಿ ನಾವು ಹೊಂದುವ ಗುಣ ನಡೆತೆಗಳು ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಪಿಲ್ಲರ್ ಎನಿಸಬಲ್ಲುದು. ಜೀವನದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶೈಕ್ಷಣಿಕ ಹಂತದಲ್ಲಿ ನಾವು ತೆಗೆದುಕೊಂಡ ಧನಾತ್ಮಕ ನಿರ್ಧಾರಗಳೇ ನಮ್ಮ ಮುಂದಿನ ಹಾದಿಯನ್ನು ಸುಗಮಗೊಳಿಸಬಲ್ಲುದು ಜೊತೆಗೆ ನಮ್ಮಲ್ಲಿ ರಾಷ್ಟ್ರೀಯ ಸಮಗ್ರತೆಯ ಗೌರವ ಬೆಳೆಸಿಕೊಂಡಾಗ ದೇಶ ವೈಭವವನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ನೂತನ ಶಿಕ್ಷಣ ಕಾಯ್ದೆಯು ಜಾರಿಗೆ ಬರಲಿದ್ದು ಇದು ವಿದ್ಯಾರ್ಥಿಗಳ ಪ್ರಗತಿಗೆ ಕಾರಣವಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಎಲ್ಲರೂ ಜವಾಬ್ದಾರರು. ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬೆಳೆಯುವ ನಿಟ್ಟಿನಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು. ಪ್ರಸಕ್ತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ನಾಚಿಕೆ ಇಲ್ಲದಿರುವುದು, ವಿದ್ಯೆ ಇರುವವರೇ ಸಮಾಜದಲ್ಲಿ ಭ್ರಷ್ಟಾಚಾರ ಮಾಡುವುದು ನೋಡಿದಾಗ ಸಮಾಜ ಎತ್ತ ಸಾಗುತ್ತಿದೆ. ಮಕ್ಕಳಲ್ಲಿ ಆಧ್ಯಾತ್ಮಿಕತೆ, ಆಂತರಿಕ ಶಕ್ತಿಯನ್ನು ಬೆಳೆಸಬೇಕು. ಮಕ್ಕಳಲ್ಲಿ ಸವಾಲು ಎದುರಿಸಲು, ಒತ್ತಡ ಮೆಟ್ಟಿ ನಿಲ್ಲಲು ಕಲಿಸಿದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಶಿಕ್ಷಣದ ಪ್ರಗತಿ ಕಂಡಿದ್ದು ಕಳೆದ ಮೂವತ್ತು ವರ್ಷಗಳಿಂದ ಆಗಿದೆ. ಮೊದಲು ಸರಕಾರವೇ ಶಿಕ್ಷಣ ನೀಡುತ್ತಾ ಬಂದಿತ್ತಾದರೂ ಬಳಿಕ ಖಾಸಗಿ ಸಹಭಾಗಿತ್ವದಲ್ಲಿ ಶಿಕ್ಷಣದ ಪ್ರಕ್ರಿಯೆ ಮುಂದುವರೆದು ಪ್ರಸ್ತುತ ಭಾರತದಲ್ಲಿ ಶೇ.78 ಶೈಕ್ಷಣಿಕ ಪ್ರಗತಿ ಹೊಂದಲು ಕಾರಣವಾಗಿದೆ. ಮಾತ್ರವಲ್ಲದೆ ನಮ್ಮ ದೇಶ ಯುವ ಸಮೂಹದಿಂದ ಗುರುತಿಸಲ್ಪಟ್ಟಿದ್ದು ಯುವ ರಾಷ್ಟ್ರ ಎಂದು ಕರೆಸಿಕೊಂಡಿದೆ. ಕಾನ್ವೆಂಟ್ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಾಗಿ ಸಂಸ್ಕಾರಯುತ ಶಿಕ್ಷಣವನ್ನು ಕಲಿಸುತ್ತಾ ಬಂದಿದೆ. ಸರಕಾರ ಶಿಕ್ಷಣಕ್ಕಾಗಿ ಸಾಕಷ್ಟು ವ್ಯಯಿಸುತ್ತಿದೆ ಶಿಕ್ಷಣ ಮೆದುಳಿಗೆ ಸಿಕ್ಕಿ ಏನೂ ಪ್ರಯೋಜನವಿಲ್ಲ, ಶಿಕ್ಷಣ ಎಂಬುದು ಹೃದಯಕ್ಕೆ ಸಿಗಬೇಕಾಗಿದೆ ಎಂದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಉಲ್ಲಾಸ್ ಪೈ ಮಾತನಾಡಿ, ಎರಡು ವರ್ಷದ ಹಿಂದೆಯೇ ಶಾಲೆಯ ಐವತ್ತನೇ ವರ್ಷದ ಆಚರಣೆಯನ್ನು ಆಚರಿಸಬೇಕಿತ್ತು. ಆದರೆ ಕೊರೋನಾ ಇದಕ್ಕೆ ಅಡ್ಡಗಾಲು ಹಾಕಿತ್ತು. ವಿದ್ಯಾರ್ಥಿಗಳು ಜೀವನದಲ್ಲಿ ಸೋತೆ ಎಂದು ಭಾವಿಸದೆ ಮುಂದಿನ ಹಂತಗಳಲ್ಲಿ ಗೆದ್ದೇ ಗೆಲ್ತೇನೆ ಎಂಬ ಛಲವನ್ನು ಮೈಗೂಡಿಸಿಕೊಂಡಾಗ ಯಶಸ್ಸು ಖಂಡಿತಾ ಸಿದ್ಧಿಸುವುದು. ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ದೇಶಕ್ಕೆ ಮಾದರಿಯಾಗಿ ಮುನ್ನೆಡೆಯಬೇಕು. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಿದ್ದೇವೆ ಎಂದರು.
ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಶಾಲಾ ನಾಯಕ ಶೆಲ್ಡನ್ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಹೆರಿ ಡಿ’ಸೋಜ ವರದಿ ವಾಚಿಸಿದರು. ಶಿಕ್ಷಕರಾದ ಆಲಿಸ್ ಡಿ’ಸೋಜ ಸ್ವಾಗತಿಸಿ, ಲೀನಾ ಪಾಯಿಸ್ ವಂದಿಸಿದರು. ಶಿಕ್ಷಕರಾದ ಪ್ರೆಸಿಲ್ಲ ಮಿನೇಜಸ್, ವೀಣಾ ಪಿಂಟೋ, ರೀಟಾ ಮಸ್ಕರೇನ್ಹಸ್, ಗ್ರೆಟ್ಟಾ ಪಿರೇರಾ, ಪ್ರೀತಿ ಡಿ’ಸೋಜ, ಒಲಿವಿಯಾ ಸಿಕ್ವೇರಾ, ಲವೀನಾ ಲೋಬೊರವರು ಶೈಕ್ಷಣಿಕ, ಕ್ರೀಡಾ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಹೆಸರನ್ನು, ದಾನಿಗಳ ಹೆಸರನ್ನು ಓದಿದರು. ವಿದ್ಯಾರ್ಥಿಗಳಾದ ಪ್ರಗ್ಯಾನ್ ಹಾಗೂ ರಿಂಶಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ..
ಶಾಲೆಯು ಸ್ಥಾಪನೆಯಾಗಿ ೫೦ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಸಂದರ್ಭ ಶಾಲೆಯಲ್ಲಿ ಸೇವೆಗೈಯ್ದು ನಿವೃತ್ತರಾದ ಶಿಕ್ಷಕರಾದ ಎವ್ಲಿನ್ ಪಾಯಿಸ್, ಹಿಲ್ಡಾ ಡಿ’ಸೋಜ, ಗ್ರೇಸಿ ಡಿ’ಸೋಜ, ಹಿಲ್ಡಾ ಗ್ರಾಶಿಯಾ ಲೋಬೊ, ಝೀನಾ ಗೋವಿಯಸ್, ಸುಜಾತ ವಿ, ಆಡಳಿತ ಸಿಬ್ಬಂದಿ ಓಸ್ವಾಲ್ಡ್ ಲೂವಿಸ್ ರವರುಗಳನ್ನು ಗುರುತಿಸಿ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ನಿವೃತ್ತ ಶಿಕ್ಷಕರ ಪರವಾಗಿ ಗ್ರೇಸಿ ಡಿ’ಸೋಜರವರು, ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ. ಹಾಗೆಯೇ ಇಂದು ನಮ್ಮನ್ನು ಗುರುತಿಸಿ ಗೌರವಿಸಿದ ಶಾಲೆಯ ರಕ್ಷಕ-ಶಿಕ್ಷಕ ಸಂಘಕ್ಕೆ ಕೃತಜ್ಞತೆಗಳು ಎಂದರು.
ಸನ್ಮಾನ/ಗೌರವ..
ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಾಯುಸೇನೆಯ ಉದ್ಯೋಗಿ ರಾಧೇಶ್ ಆರ್.ರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಎರಡು ಅವಧಿ ಪೂರೈಸಿದ ನಿಕಟಪೂರ್ವ ಉಪಾಧ್ಯಕ್ಷ ಆಂಟನಿ ಒಲಿವೆರಾ ಹಾಗೂ ಪ್ರಸ್ತುತ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಲ್ಲಾಸ್ ಪೈಯವರನ್ನು ಗೌರವಿಸಲಾಯಿತು.