ಪ್ರಗತಿಪರ ಕೃಷಿಕ ಮುದೆಲ್ಕಾಡಿ ದೇರಣ್ಣ ರೈ ಪಾಪನಡ್ಕರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಇತ್ತೀಚೆಗೆ ಅಗಲಿದ ಕುಡ್ತಜೆ ದೇವಪ್ಪ ರೈ ಹಾಗೂ ಮುದೆಲ್ಕಾಡಿ ಪರಮೇಶ್ವರಿ ರೈ ದಂಪತಿ ಪುತ್ರರಾಗಿರುವ ಪ್ರಗತಿಪರ ಕೃಷಿಕರೂ, ಪುತ್ತೂರು ಬಂಟರ ಸಂಘದಿಂದ ಉತ್ತಮ ಕೃಷಿಕ ಪ್ರಶಸ್ತಿಯ ಜೊತೆಗೆ ಚಿನ್ನದ ಪದಕ ವಿಜೇತರೂ, ಇರ್ದೆ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರೂ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರೂ, ಎನ್‌ಆರ್‌ಸಿಸಿಯಿಂದ ಉತ್ತಮ ಗೇರು ಕೃಷಿಕ ಪ್ರಶಸ್ತಿಯನ್ನು ಪಡೆದಿರುವ ಮುದೆಲ್ಕಾಡಿ ದೇರಣ್ಣ ರೈಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಗಳು ನ.30 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ಜರುಗಿ ಮಧ್ಯಾಹ್ನ ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ವೈಕುಂಠ ಸಮಾರಾಧನೆಯು ಜರಗಿತು.


ಅಗಲಿದ ಮುದೆಲ್ಕಾಡಿ ದೇರಣ್ಣ ರೈ ರವರ ಬಾವ  ಎ.ಜಗಜ್ಜೀವನ್‌ ದಾಸ್ ರೈ ಮಾತನಾಡಿ, ಮುದೆಲ್ಕಾಡಿ ದೇರಣ್ಣ ರೈಯವರೋರ್ವ ಉತ್ತಮ ಕೃಷಿಕರಾಗಿದ್ದು ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡುವ ಉತ್ಸಾಹವನ್ನು ಹೊಂದಿದ್ದರು. ಇವರ ಆವಿಷ್ಕಾರವನ್ನು ಕಣ್ತುಂಬಿಕೊಳ್ಳಲು ಅನೇಕ ಕೃಷಿ ಪ್ರಿಯರು ಇವರನ್ನು ಅರಸಿಕೊಂಡು ಬರುತ್ತಿದ್ದರು. ಎಲ್ಲರನ್ನು ತನ್ನ ಕುಟುಂಬ ಎಂಬಂತೆ ಕುಟುಂಬ ಪ್ರೇಮಿಯಾಗಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಹಿರಿ-ಕಿರಿಯರೊಂದಿಗೆ ಸದಾ ಆತ್ಮೀಯವಾಗಿ ಬೆರೆಯುವ ಸ್ವಭಾವ ಅವರದಾಗಿದ್ದು ಕೊಡುಗೈ ದಾನಿಯಾಗಿಯೂ ಗುರುತಿಸಿಕೊಂಡಿದ್ದರು. ಇದೀಗ ಅನಾರೋಗ್ಯದಿಂದ ಅಗಲಿದ ಅವರ ನೆನಪು ಮಾತ್ರ ಸದಾ ನಮ್ಮೊಂದಿಗೆ ಇದ್ದು, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರೂ, ಪುತ್ತೂರು ಬಂಟರ ಸಂಘದ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ದೇರಣ್ಣ ರೈಯವರು ಓರ್ವ ಸಹಕಾರಿ ಮನುಷ್ಯರಾಗಿ ಹಲವಾರು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವರು. ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಪ್ರಕ್ರಿಯೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳ ಏಳಿಗೆಗಾಗಿ ಅವರು ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವರು. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಉತ್ತಮ ಸುಸಂಸ್ಕೃತರನ್ನಾಗಿ ಅವರನ್ನು ಸಮಾಜದಕ್ಕೆ ಅರ್ಪಿಸಿದ್ದಾರೆ. ಅವರ ಆತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಅಗಲಿದ ಮುದೆಲ್ಕಾಡಿ ದೇರಣ್ಣ ರೈಯವರ ಪತ್ನಿ ಚಿಲ್ಮೆತ್ತಾರು ಸರೋಜಿನಿ ಡಿ.ರೈ ಪಾಪನಡ್ಕ, ಪುತ್ರರಾದ ಪ್ರೇಮ್‌ಜಿತ್ ರೈ, ಶ್ಯಾಮ್‌ಜಿತ್ ರೈ, ಸೊಸೆಯಂದಿರು, ಮೊಮ್ಮಕ್ಕಳು, ನಾಲ್ಕು ಮಂದಿ ಸಹೋದರರು, ಮೂವರು ಸಹೋದರಿಯರು, ಕುಡ್ತಜೆ ಹಾಗೂ ಚಿಲ್ಮೆತ್ತಾರು ಕುಟುಂಬಸ್ಥರು, ಹಿತೈಷಿಗಳು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಮೌನ ಪ್ರಾರ್ಥನೆ..ಪುಷ್ಪಾರ್ಚನೆ..
ಈ ಸಂದರ್ಭದಲ್ಲಿ ಕುಟುಂಬಿಕರು, ಹಿತೈಷಿಗಳು ಹಾಗೂ ಗಣ್ಯರು ಅಗಲಿದ ಪ್ರಗತಿಪರ ಕೃಷಿಕ ಮುದೆಲ್ಕಾಡಿ ದೇರಣ್ಣ ರೈ ಪಾಪನಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here