ಕಾನೂನು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವಿರಲಿ: ಭರತ್ ಕುಮಾರ್
ಪುತ್ತೂರು: ಸಾಹಿತ್ಯ ಅನ್ನುವುದು ಹೃದಯದ ಭಾಷೆ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಸಾಹಿತ್ಯದ ಕುರಿತು ಆಸಕ್ತಿ ಹೆಚ್ಚಾಗಲು ಪತ್ರಿಕೆಗಳ ಓದು ನೆರವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆಯ ಜತೆಗೆ ಕೌಶಲ್ಯವು ವೃದ್ಧಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಘಟಕದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಭರತ್ ಕುಮಾರ್ ಶೆಟ್ಟಿ ಹೇಳಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಜ್ಞಾನಬಿಂಬ ಭಿತ್ತಿಪತ್ರಿಕೆ-2022-23ರ ಸರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕವಾಗಿವೆ. ಉತ್ತಮ ಪತ್ರಿಕೆಗಳೆಂದರೆ ಸತ್ಯಾನ್ವೇಷಣೆ, ಪ್ರತಿಭಾನ್ವೇಷಣೆ ಮತ್ತು ಜ್ಞಾನಾನ್ವೇಷಣೆಯನ್ನು ಹೊಂದಿರಬೇಕು. ಅರಿವನ್ನು ಹೆಚ್ಚಿಸುವ ಬಗೆಯನ್ನು ಪತ್ರಿಕೆ ರೂಪಿಸುತ್ತದೆ. ಓದುವಿಕೆ ಎಂಬುದು ಎಲ್ಲಿ ಅರ್ಥಪೂರ್ಣತೆಯನ್ನು ಪಡೆದುಕೊಂಡಿರುತ್ತದೆಯೋ ಅಲ್ಲಿ ಸಮಾಜ ಆರೋಗ್ಯಕರವಾಗಿರುತ್ತದೆ ಎಂದರಲ್ಲದೆ, ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ಕಾನೂನು ವೃತ್ತಿ ಜೀವನಕ್ಕೆ ವೇಗವನ್ನು ಕೊಡುವ ಒಂದು ಅಸ್ತ್ರವಾಗಿ ಮಾಧ್ಯಮವು ನಿಂತಿದೆ. ಕಾನೂನು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವಿರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್ ಎಂ ಮಾತನಾಡಿ, ನಮ್ಮ ಸಮಾಜದಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಮೂಹ ಮಾಧ್ಯಮಗಳು ಆಧುನಿಕ ಕಾಲದ ದೊಡ್ಡ ಶಕ್ತಿಯಾಗಿದೆ. ಇದು ಜೀವನದಲ್ಲಿ ಸಾಮಾಜಿಕ, ಆರ್ಥಿಕ ಉನ್ನತಿಯನ್ನು ಪುನರುಜ್ಜೀವನಗೊಳಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮಾಧ್ಯಮವು ವಿಶೇಷ ಪಾತ್ರವಹಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇದನ್ನು ಸಕಾರಾತ್ಮಕ ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ‘E-ಬರಹ’ ಆನ್ಲೈನ್ ವೇದಿಕೆಯ ಸಂಯೋಜಕಿ ಆಂಗ್ಲ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ.ಎಂ. ನಮ್ಮ ಕಾಲೇಜಿನಲ್ಲಿ E-ಬರಹ ಎಂಬ ಆನ್ಲೈನ್ ವೇದಿಕೆಯ ಉಪಯೋಗ ಹಾಗೂ ಅದರಲ್ಲಿ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳನ್ನು ವಿವರಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ಜ್ಞಾನಬಿಂಬ ಭಿತ್ತಿಪತ್ರಿಕೆಯ ರೂಪುರೇಷೆಗಳನ್ನು ವಿವರಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.
ವಿದ್ಯಾರ್ಥಿಗಳಾದ ಶ್ರೀಕೃಷ್ಣ ಭಟ್ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾ ಎಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.