ಮಾಯಿದೆ ದೇವುಸ್ ಹಿ.ಪ್ರಾ ಶಾಲಾ ವಾರ್ಷಿಕೋತ್ಸವ

0

ಸೋಲೊಪ್ಪಿಕೊಂಡು ಮುನ್ನೆಡೆದಾಗ ಜೀವನದ ಪರೀಕ್ಷೆಯಲ್ಲಿ ಯಶಸ್ಸು-ಡಾ.ಜಯಪ್ರಕಾಶ್

ಪುತ್ತೂರು: ಜೀವನವೇ ಒಂದು ಪರೀಕ್ಷೆ. ಜೀವನದಲ್ಲಿ ಜ್ವಲಂತ ಗುರಿ ಇರಬೇಕಾಗುತ್ತದೆ. ಜೀವನದಲ್ಲಿ ಸೋಲು ಬರುತ್ತದೆ ಆದರೆ ಸೋಲನ್ನು ಒಪ್ಪಿಕೊಂಡು ಮುಂದುವರೆದಾಗ ಜೀವನವೆಂಬ ಪರೀಕ್ಷೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ವೈದ್ಯರಾದ ಡಾ.ಜಯಪ್ರಕಾಶ್‌ರವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಡಿ.2 ರಂದು ನಡೆದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಾಯಿದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 85 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಹೊರಗಿನ ಪ್ರಪಂಚದಲ್ಲಿ ಒಳಿತು-ಕೆಡುಕು ಎರಡೂ ಇದೆ. ಮಕ್ಕಳು ಸದಾ ಒಳಿತನ್ನು ಸ್ವೀಕರಿಸಿ ಹೆಜ್ಜೆಯಿಡಬೇಕು ಮತ್ತು ಕೆಡುಕಿನ ಬಗ್ಗೆ ತುಂಬಾ ಜಾಗರೂಕರಾಗಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವಿಚಾರಗಳನ್ನು ಮನಸ್ಸಿನಲ್ಲಿ ಹೊಂದುವಂತಾಗಬೇಕು. ಮಕ್ಕಳು ಕೇವಲ ಪುಸ್ತಕದ ಬದನೆಕಾಯಿ ಆಗದೆ ವಾಸ್ತವ ಪ್ರಪಂಚದ ಅರಿವನ್ನು ಮೈಗೂಡಿಸಿಕೊಂಡಾಗ ಜೀವನವನ್ನು ಯಶಸ್ವಿಯತ್ತ ಕೊಂಡೊಯ್ಯಬಹುದು. ಮನುಷ್ಯನಿಗೆ ತಾಳ್ಮೆ ಎಂಬುದು ಪ್ರಥಮ ಗುಣ. ತಾಳ್ಮೆ ಇದ್ದವರು ಬಾಳಿಯಾನು ಎಂಬಂತೆ ಜೀವನದಲ್ಲಿ ಎಲ್ಲಾ ವಿಫಲವಾದಾಗ ತಾಳ್ಮೆ ಎಂಬುದು ಸಫಲತೆಯನ್ನು ತಂದು ಕೊಡುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಶಿಕ್ಷಣದ ಕಾಶಿಯಾಗಿರುವ ಪುತ್ತೂರಿಗೆ ದೂರದ ಊರಿನಿಂದ ಇಲ್ಲಿಗೆ ಬಂದು ಉತ್ತಮ ಬದುಕನ್ನು ಕಟ್ಟಿಕೊಂಡವರು ಸಾವಿರಾರು ಮಂದಿ ಇದ್ದಾರೆ. ಅಂದಿನ ಹಿರಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದಂತಹ ಪರಿಶ್ರಮವನ್ನು ಇಂದಿನ ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಉತ್ತಮವಾಗಿ ಜೀವಿಸಲು, ಉತ್ತಮ ಉದ್ಯೋಗ ಹೊಂದಲು ಶಿಕ್ಷಣದ ಅಗತ್ಯತೆ ಇದೆ. ವಿದ್ಯಾರ್ಥಿಗಳು ಸ್ವಾವಲಂಭಿಯಾಗಿ ಬದುಕಲು ಆತ್ಮಸ್ಥೈರ್ಯವನ್ನು ಹೊಂದಬೇಕು ಮಾತ್ರವಲ್ಲದೆ ನಿರಂತರ ಸೇವಾ ಚಟುವಟಿಕೆಗಳ ನಿರ್ವಹಿಸುತ್ತಾ ಸಂಬಂಧಗಳಿಗೆ ಬೆಲೆ ಕೊಡುವವರಾಗಬೇಕು ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಕನ್ನಡ ಮಾಧ್ಯಮ ಎಂಬ ಕೀಳಿರಿಮೆಯನ್ನು ನಮ್ಮಿಂದ ತೆಗೆದು ಹಾಕಬೇಕು. ಕನ್ನಡ ಮಾಧ್ಯಮದಲ್ಲಿ ಓದಿ ಇಂದು ದೊಡ್ಡ ವೈದ್ಯರಾಗಿ ಸಾಧನೆ ಮಾಡಿದವರು ಇಂದಿನ ಅತಿಥಿ ಡಾ.ಜಯಪ್ರಕಾಶ್‌ರವರೇ ಉತ್ತಮ ಉದಾಹರಣೆ. ಕನ್ನಡ ಮಾಧ್ಯಮದಲ್ಲಿ ಕಲಿಯುವಂತಹ ಮಕ್ಕಳಿಗೆ ತಮ್ಮ ಆಯ್ಕೆ ಸಂದರ್ಭದಲ್ಲಿ ಸರಕಾರವೂ ಕೃಪಾಂಕವನ್ನು ನೀಡುತ್ತದೆ. ರಾಷ್ಟ್ರದ ಅತ್ತ್ಯುನ್ನತ ಪ್ರಶಸ್ತಿ ಎನಿಸಿದ ಜ್ಞಾನಪೀಠ ಪ್ರಶಸ್ತಿಗೆ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಎಂಟು ಮಂದಿ ಭಾಜನರಾಗಿದ್ದಾರೆ ಅದರಲ್ಲೂ ಈ ಜ್ಞಾನಪೀಠ ಪ್ರಶಸ್ತಿಯಲ್ಲಿ ಪುತ್ತೂರಿನ ಶಿವರಾಮ ಕಾರಂತರವರು ಬರೆದ ಮೂಕಜ್ಜಿಯ ಕನಸು ಎಂಬ ಕೃತಿಯೂ ಸೇರಿದೆ ಎಂಬುದು ಸಂತೋಷದ ವಿಚಾರ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಯಾರಾದರೂ ಮಕ್ಕಳಿಗೆ ತಮ್ಮ ಶುಲ್ಕವನ್ನು ಭರಿಸಲು ಸಾಧ್ಯವಾಗದಿದ್ದರೆ ಅವರ ಶುಲ್ಕವನ್ನು ಕಟ್ಟಿಸುವ ವ್ಯವಸ್ಥೆ ಮಾಡಲಿದ್ದೇವೆ ಎಂದರು.


ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಂಹಿತಾ ಬಿ, ಶಾಲಾ ನಾಯಕಿ ಎ.ನಫೀಶತ್ ರಿಧಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜರವರು ವರದಿ ವಾಚಿಸಿದರು. ಶಿಕ್ಷಕರಾದ ಜ್ಯೂಲಿಯೆಟ್ ತಾವ್ರೋ ಸ್ವಾಗತಿಸಿ, ಫ್ಲಾವಿಯಾ ಅಲ್ಬುಕರ್ಕ್ ವಂದಿಸಿದರು. ಶಿಕ್ಷಕರಾದ ಜಯಶ್ರೀ, ವಿಲ್ಮಾ ಡಿ’ಸೋಜ, ಪದ್ಮನಾಭರವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಶಿಕ್ಷಕ ಸುಬ್ಬರಾಜು ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸನ್ಮಾನ/ಅಭಿನಂದನೆ..
ಅತಿಥಿಯಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ವೈದ್ಯರಾದ ಡಾ.ಜಯಪ್ರಕಾಶ್‌ರವರನ್ನು ಶಾಲು ಹೊದಿಸಿ, ಫಲ-ಪುಷ್ಪ-ಸ್ಮರಣಿಕೆ ನೀಡಿ ಸನ್ಮಾನ ಹಾಗೂ ಕೋವಿಡ್ ಸಂದರ್ಭ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅನಾನುಕೂಲವಾದಂತಹ ಸಂದರ್ಭದಲ್ಲಿ ವಿದ್ಯಾಗಮ ಯೋಜನೆಯಡಿ ಮಕ್ಕಳಿದ್ದ ಆಯಾ ಪ್ರದೇಶಗಳಿಗೆ ಹೋಗಿ ಶಿಕ್ಷಣ ನೀಡಲು ಸ್ಥಳಾವಕಾಶ ನೀಡಿ ಸಹಕರಿಸಿದ ಕುಂಬ್ರ ಮಸೀದಿಯ ಪರವಾಗಿ ಕಾರ್ಯದರ್ಶಿ ಪತ್ರಕರ್ತ ಸಿದ್ಧೀಕ್ ಕುಂಬ್ರ, ಸಾಲ್ಮರ ಕ್ರಿಸ್ಟಿನಾ ಹಾಲ್‌ನ ಹೆನ್ರಿ ತಾವ್ರೋ, ಕೆದಿಲ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಭಟ್, ಪರ್ಲಡ್ಕ ಶೈಲಜಾ ಟೀಚರ್, ಕೊಡಿಪ್ಪಾಡಿ ಸೇಸಮ್ಮ, ಬಪ್ಪಳಿಗೆ ಶಾರದಾಂಬ ಸೇವಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಕೆ.ರಾಜೇಶ್ ನಾಯಕ ನೆಕ್ಕಿಲಾಡಿ, ಪಡೀಲು ಎಂಡಿಎಸ್ ಟ್ರಿನಿಟಿ ಹಾಲ್‌ನ ಲ್ಯಾನ್ಸಿ ಡಿ’ಸೋಜ, ಮುರ ಗೌಡ ಸಮುದಾಯ ಭವನದ ಅಧ್ಯಕ್ಷ ಬಾಬು ಗೌಡ, ಬಲ್ನಾಡು ಪದವಿನ ಬೊನಿಫಾಸ್ ಡಿ’ಸೋಜರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here