





ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಿಂದ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದ 5 ನೇ ದಿನವಾದ ಡಿ.2ರಂದು ರುಕ್ಮಿಣಿ ಕಲ್ಯಾಣೋತ್ಸವ ನಡೆಯಿತು.








ಬೆಳಿಗ್ಗೆ ಕಲಶಾರಾಧನೆ, ಶ್ರೀಮದ್ಭಾಗವತ ಪಾರಾಯಣ ಆರಂಭಗೊಂಡು ರುಕ್ಮಿಣ್ಯುದ್ವಾಹ ಪರ್ಯಂತ ನಡೆಯಿತು. ಶ್ರೀ ಲಕ್ಷ್ಮೀನಾರಾಯಣ ಮಂತ್ರ ಹವನ ನಡೆಯಿತು. ಬೆಳಿಗ್ಗೆ ರುಕ್ಮಿಣಿಯ ದಿಬ್ಬಣ ಆಗಮಿಸಿ ಬೆಳಿಗ್ಗೆ 11.47ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ರುಕ್ಮಿಣಿ ಕಲ್ಯಾಣೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಉಪಸ್ಥಿತರಿದ್ದು ರುಕ್ಮಿಣಿ ಕಲ್ಯಾಣೋತ್ಸವವನ್ನು ಕಣ್ತುಂಬಿಸಿಕೊಂಡರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ತಂಡದವರಿಂದ ಭಜನಾ ಸೇವೆ ನಡೆಯಿತು. ಸಂಜೆ ಶ್ರೀ ಮದ್ಭಾಗವತ ಪ್ರವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಯಿತು. ವೇದಮೂರ್ತಿ ವಿದ್ವಾನ್ ಕೆ.ಕೃಷ್ಣಮೂರ್ತಿ ಕಾರಂತ ಪೆರ್ನೆ ಅವರ ಆಚಾರ್ಯತ್ವದಲ್ಲಿ ವಿದ್ವಾನ್ ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ, ಮುರಳಿಕೃಷ್ಣ ಭಟ್ ನಂದಗೋಕುಲ ಆಲಂತಾಯ ಹಾಗೂ ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಕಾಟುಕುಕ್ಕೆರವರು ಪ್ರವಚನ ನೀಡಿದರು. ಪೆರಣ ಭಂಡಾರ ಮನೆಯ ಮೊಕ್ತೇಸರ ವಿಶ್ವನಾಥ ಗೌಡ ಪೆರಣ, ಶ್ರೀಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಭೇಟಿ:
ಡಿ.2ರಂದು ಮಧ್ಯಾಹ್ನ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಭಗವಂತನ ನಾಮಸ್ಮರಣೆಯ ಮೂಲಕ ನಮ್ಮ ದೇಹಕ್ಕೆ, ಮನಸ್ಸಿಗೆ ಸಂಸ್ಕಾರ ಕೊಡುವ ಕೆಲಸ ಆಗಬೇಕು. ಮನಸ್ಸಿನಲ್ಲಿರುವ ದ್ವೇಷ, ಅಸೂಯೆ ಬಿಡಬೇಕು. ಇಲ್ಲದೆ ಇದ್ದಲ್ಲಿ ಯಾವುದೇ ಯಜ್ಞ ಮಾಡಿದರೂ ಫಲಪ್ರದವಾಗುವುದಿಲ್ಲ ಎಂದರು. ಪೇರಣ ಭಂಡಾರ ಮನೆಯ ಯಜಮಾನ ವಿಶ್ವನಾಥ ಗೌಡ ದಂಪತಿ ಹಾಗೂ ಶ್ರೀಮದ್ಭಾಗತ ಸಪ್ತಾಹ ಜ್ಞಾನ ಯಜ್ಞ ಸಮಿತಿಯ ಪದಾಧಿಕಾರಿಗಳು ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಗೆ ಫಲ ತಾಂಬೂಲ ನೀಡಿ ಗೌರವಿಸಿದರು.










