ಪುತ್ತೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ’ ಒಂದು ದಂತ ಕಥೆ ಕನ್ನಡ ಸಿನಿಮಾ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಾ ಭರ್ಜರಿ ಕಲೆಕ್ಷನ್‌ನೊಂದಿಗೆ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಚಿಂದಿ ಉಡಾಯಿಸಿ ಮುಂದುವರಿಯುತ್ತಿದ್ದಂತೆ ಇತ್ತ ಕರಾವಳಿಯ ತುಳು ಭಾಷೆಗೆ ಡಬ್ಬಿಂಗ್ ಆಗಿ ‘ಕಾಂತಾರ’ ಹೆಸರಿನಲ್ಲೇ ದ.2 ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪುತ್ತೂರು ಅರುಣಾ ಚಿತ್ರಮಂದಿರದಲ್ಲೂ ದಿನಾ 4 ದೇಖಾವೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಈಗಾಗಲೇ ಕಾಂತಾರ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಕೋಟ್ಯಾಂತರ ಮೊತ್ತ ಬಾಚುತ್ತಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ತುಳುನಾಡಿನ ತುಳು ಭಾಷೆಯಲ್ಲಿ ಚಿತ್ರ ತೆರೆ ಕಾಣುತ್ತಿದ್ದು ಕರಾವಳಿಗರೇ ಹೆಚ್ಚಿರುವ ದೇಶ ವಿದೇಶಗಳಲ್ಲಿ ಟಾಕೀಸ್‌ಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ದುಬೈನಲ್ಲಿ ತುಳುವಿನಲ್ಲಿ ಚಿತ್ರ ತೆರೆ ಕಂಡಿದ್ದು ಬುಕ್ ಮೈ ಶೋದಲ್ಲಿ ಕಾಂತಾರದ ಪೋಸ್ಟರ್ ಸದ್ದು ಮಾಡುತ್ತಿದೆ. ಕರಾವಳಿ ಭಾಗದಲ್ಲೂ ಚಿತ್ರ ತುಳುವಿನಲ್ಲಿ ತೆರೆ ಕಂಡಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಲವು ಮಾಲ್‌ಗಳಲ್ಲಿ ಕಾಂತಾರ ತುಳು ಚಿತ್ರ ಪ್ರದರ್ಶನ ಕಾಣುತ್ತಿದೆ. ತುಳುನಾಡಿನ ಜನತೆ ಕಾಂತಾರವನ್ನು ನಮ್ಮ ನೆಲದ ಭಾಷೆಯಲ್ಲಿ ನೋಡಬೇಕು ಎಂದು ಬೇಡಿಕೆ ಇಟ್ಟಿದ್ದರು, ಅದಕ್ಕಾಗಿ ತುಳುವಿನಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಚಿತ್ರವನ್ನು ದೈವಾರಾಧಕರು, ದೈವ ನರ್ತಕರು, ದೈವಕ್ಕೆ ಸೇವೆ ನೀಡಿರುವ ಕುಟುಂಬದವರಿಗೆ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ. ಸಿನಿಮಾ ನೋಡಿ ಬೇರೆ ಬೇರೆ ರೀತಿಯಾ ವಿಡಿಯೋ ಅಥವಾ ಅಣುಕು ಪ್ರದರ್ಶನ ಮಾಡಿ ದೈವಾರಾಧಕರು ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ಅವರು ವಿನಂತಿ ಮಾಡಿಕೊಂಡಿದ್ದಾರೆ.
4 ದೇಖಾವೆಗಳು
ಪ್ರತಿದಿನ ಬೆಳಿಗ್ಗೆ 11, ಮಧ್ಯಾಹ್ನ 2, ಸಂಜೆ 6 ಮತ್ತು ರಾತ್ರಿ 9 ಗಂಟೆಗೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಚಿತ್ರ ಪ್ರೇಮಿಗಳು ಕಾಂತಾರವನ್ನು ತುಳು ಭಾಷೆಯಲ್ಲಿ ನೋಡಿ ಆನಂದಿಸುವ ಜೊತೆಗೆ ಪ್ರೋತ್ಸಾಹ ನೀಡುವಂತೆ ಚಿತ್ರಮಂದಿರದ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.