ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಡಿಯಲ್ಲಿ ’ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ’ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಅರ್ಥಶಾಸ್ತ್ರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಯಚೂರಿನ ಮಸ್ಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ರಜಿಯಾ ಎಂ.ರವರು ಉಪನ್ಯಾಸ ನೀಡಿ, ಸುಸ್ಥಿರ ಅಭಿವೃದ್ಧಿಯು ಚರ್ಚಿಸಿದಷ್ಟು ಮುಗಿಯದ ಒಂದು ಅಂತರ್ಗತ ವಿಷಯವಾಗಿದೆ. ಪರಿಸರವನ್ನು ಸಂರಕ್ಷಿಸಿ ನಾವು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗಿದೆ. ಮಾನವನು ತನ್ನ ಸ್ವಹಿತದ ಸಾಧನೆಗೆ ಪ್ರಕೃತಿಯನ್ನು ಶೋಷಿಸುವುದು ಸರಿಯಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನೂರಂದಪ್ಪ ಅವರು ಮಾತನಾಡಿ, ಆರ್ಥಿಕ ಅಭಿವೃದ್ಧಿಯು ಪ್ರಕೃತಿಗೆ ಹಾನಿಕಾರಕವಾಗಬಾರದು, ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಂಚಾಲಕ ಹಾಗೂ ಅರ್ಥಶಾಸ್ತ್ರ ಸಂಘದ ಸಂಯೋಜಕಿ ಶ್ರುತಿ ಸ್ವಾಗತಿಸಿದರು. ಅರ್ಥಶಾಸ್ತ್ರ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಧನ್ಯಶ್ರೀ ಅತಿಥಿಗಳ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ಫೂರ್ತಿ ಕೆ.ಟಿ. ವಂದಿಸಿದರು. ವಿದ್ಯಾರ್ಥಿನಿ ನುಸ್ರಿಲ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ಸಂಘದ ಸಹ ಕಾರ್ಯದರ್ಶಿ ಸಂದೀಪ್ ಕುಮಾರ್ ಬಿ.ಎಂ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.