ಪುತ್ತೂರು: ಸಮಾಜಕ್ಕೆ ವೈದ್ಯರಷ್ಟೇ ವಕೀಲರ ಅಗತ್ಯವಿದೆ. ದೇಹದ ಕಾಯಿಲೆಗೆ ವೈದ್ಯರು ಮದ್ದು ನೀಡಿದರೆ, ಸಮಾಜದ ಸಂಕಟಗಳಿಗೆ, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದು ಎಂದು ಪುತ್ತೂರಿನ ನ್ಯಾಯವಾದಿ ಹಾಗೂ ಪುತ್ತೂರಿನ ವಕೀಲರ ಸಂಘದ ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್ ಹೇಳಿದರು. ಅವರು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮೂಟ್ ಸೊಸೈಟಿ ಹಾಗೂ ಡಿಬೇಟ್ ಸೊಸೈಟಿ ನೇತೃತ್ವದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರಾದವರು ಏಕಕಾಲಕ್ಕೆ ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆ ಹಾಗೂ ಸಮಾಜದ ಬಿಕ್ಕಟ್ಟುಗಳಿಗೂ ಕಣ್ಣು-ಕಿವಿಯಾಗಿ ಸಂರಕ್ಷಕನ ರೀತಿ ವರ್ತಿಸಬೇಕಿದೆ ಎಂದು ಅವರು, ಇಂದು ಸಮಾಜದ ಎಲ್ಲಾ ವೃತ್ತಿಗಳಲ್ಲಿ ನೈತಿಕತೆ ಕಾಣೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ವಕೀಲರು ತಮ್ಮ ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿ ಸದಾ ದುರ್ಬಲರ ಪರವಾಗಿ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಯಶಸ್ವಿ ವಕೀಲರಾಗಲು ಬೇಕಾಗುವ ಎಲ್ಲಾ ಗುಣಗಳನ್ನು ರೂಪಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್ ಎಂ ಮಾತನಾಡಿ, ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜವನ್ನು ತಿದ್ದುವಲ್ಲಿ ವಕೀಲರ ಸಲಹೆ, ಮಾರ್ಗದರ್ಶನ ಹಾಗೂ ಪ್ರಯತ್ನ ತುಂಬಾ ಉಪಯುಕ್ತವಾಗಿರುತ್ತದೆ. ಸಮಾಜವನ್ನು ಉತ್ತಮಗೊಳಿಸಲು, ತಿದ್ದುವಲ್ಲಿ ವಕೀಲರು ಮೊದಲಿಗರಾಗಿರುತ್ತಾರೆ. ಕಾನೂನಿನ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಿದರೆ ಸಮಾಜವು ಉತ್ತಮ ಸ್ವಾಸ್ಥ್ಯದಿಂದ ಕೂಡಿರುತ್ತದೆ. ಆದುದರಿಂದ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು, ತಮ್ಮ ನೆಲೆಯಲ್ಲಿ ಉತ್ತಮ ವಕೀಲನಾಗಿ ರುಪುಗೊಳ್ಳಲು ನಮ್ಮ ವಿವೇಕಾನಂದ ಮಹಾವಿದ್ಯಾಲಯದಲ್ಲಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು, ಭವಿಷ್ಯದಲ್ಲಿ ಒಬ್ಬ ಜವಾಬ್ದಾರಿಯುತ ವಕೀಲನಾಗಿ, ದೇಶದ ಅಭಿವೃದ್ಧಿಗೆ, ನ್ಯಾಯಾಂಗ ವ್ಯವಸ್ಥೆಗೆ ಕೊಡುಗೆ ನೀಡುವಂತೆ ಶುಭಹಾರೈಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಕೌಶಿಕ್ ಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೆಲ್ ಸ್ವಾಗಿತಿಸಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ ವಂದಿಸಿದರು. ತೃತೀಯ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿ ಸೂರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.