ಅಳಕೆಮಜಲು ಕಿ.ಪ್ರಾ. ಶಾಲೆಯಲ್ಲಿ ಬೆಳ್ಳಿ ಹಬ್ಬ ಸಂಭ್ರಮ, ನೂತನ ಕೊಠಡಿಗಳ ಉದ್ಘಾಟನೆ, ಸಾಧಕರಿಗೆ ಸನ್ಮಾನ – ಸಾಂಸ್ಕೃತಿಕ ವೈವಿಧ್ಯ

0
  • ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಶಾಲೆ ಶತಮಾನೊತ್ಸವವನ್ನು ಕಾಣಲಿ: ಸಂಜೀವ ಮಠಂದೂರು 
  • ಒಗ್ಗಡುವಿಕೆಯ ಫಲದಿಂದಾಗಿ ಈ ಶಾಲೆಯ ಬೇರುಗಳು ಗಟ್ಟಿಯಾಗಲು ಸಾಧ್ಯವಾಗಿದೆ: ಎಂ.ಸುಧೀರ್ ಕುಮಾರ್ ಶೆಟ್ಟಿ

ವಿಟ್ಲ: ಶಾಲೆ ಇಪ್ಪತೈದು ವರ್ಷದಲ್ಲಿ ಬೆಳೆದು ಬಂದ ಹಾದಿ ಅದು ಬಹು ಕಠಿಣ. ಅತೀ ಕಡಿಮೆ ಸ್ಥಳಾವಕಾಶವಿರುವ ಈ ಶಾಲೆಯಲ್ಲಿ ಇಷ್ಟೊಂದು ಅಭಿವೃದ್ಧಿಯಾಗಿರುವುದು ಬಹಳ ಸಂತೋಷದ ವಿಚಾರ. ಇಲ್ಲಿನ ಮಕ್ಕಳು ಉನ್ನತ ಸ್ಥಾನಕ್ಕೇರಿದರೆ ಅವರು ಮತ್ತೊಮ್ಮೆ ಈ ಊರಿಗಾಗಿ ಕೊಡುಗೆ ಕೊಡಲು ಸಾಧ್ಯವಾಗುತ್ತದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಶಾಲೆ ಶತಮಾನೊತ್ಸವವನ್ನು ಕಾಣಲಿ ಎಂದು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.

ಅವರು ಡಿ.೩ರಂದು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಅಳಕೆಮಜಲು ಕಿ.ಪ್ರಾ. ಶಾಲಾ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಹಾಗೂ ಶಾಸಕರ ಅನುದಾನ ದಿಂದ ನಿರ್ಮಾಣಗೊಂಡ ನೂತನ ತರಗತಿ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದರು.


ಇಪತೈದು ವರ್ಷದ ಸವಿಯನ್ನು ಬೆಳ್ಳಿಹಬ್ಬದ ಮರೆಯಲ್ಲಿ ಸವಿಯುವ ಅವಕಾಶ ನಮಗೆ ಲಭಿಸಿದೆ. ಈ ಶಾಲೆಗೆ ಉತ್ತಮ ಭವಿಷ್ಯವಿದೆ. ಗ್ರಾಮದ ಅಭಿವೃದ್ಧಿಗೆ ಶಾಲೆಯ ಪಾತ್ರವೂ ಮಹತ್ವದ್ದು. ಇಡ್ಕಿದು ಗ್ರಾಮ ಇಡೀ ನಾಡಿಗೆ ಆದರ್ಶಪ್ರಾಯವಾಗಿದೆ.ಕಟ್ಟಡಗಳು ಚೆನ್ನಾಗಿದ್ದಾಗ ಅದಕ್ಕೆ ಆಧುನಿಕತೆಯ ಸೊಬಗು ಬರಲು ಸಾಧ್ಯ. ಖಾಸಗಿ ಶಿಕ್ಷಣಕ್ಕೆ ಸಡ್ಡುಹೊಡೆಯುವ ರೀತಿಯಲ್ಲಿ ಸರಕಾರಿ ಶಾಲೆಗಳು ಬೆಳೆಯುತ್ತಿವೆ. ಪ್ರತಿಭಾವಂತ ಪ್ರಾದ್ಯಾಪಕರು ಸರಕಾರಿ ಶಾಲೆಗಳಲ್ಲಿ ಸಿಗಲು ಸಾಧ್ಯ. ಶಿಕ್ಷಣ ಪದ್ದತಿಯಲ್ಲೊಂದು ಅಮೂಲಾಗ್ರ ಬದಲಾವಣೆ ಆಗುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿನ ಸರಕಾರಿ ಶಾಲೆಗಳಿಗೆ ಒಟ್ಟು ೪೫ ಕೊಠಡಿಗಳನ್ನು ಕೊಡುವ ಕೆಲಸ ಮಾಡುತ್ತಿದ್ದೇನೆ. ಮಕ್ಕಳನ್ನು ಆಸ್ಥಿಯನ್ನಾಗಿ ಮಾಡಬೇಕು. ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು. ಶಾಲೆಗೆ ಇನ್ನಷ್ಟು ಕೊಡುಗೆಗಳನ್ನು ಕೊಡುವ ಕೆಲಸ ಸ್ಥಳೀಯರಿಂದಾಗಲಿ ಎಂದು ಹೇಳಿದ ಶಾಸಕರು ಮುಂದಿನ ದಿನಗಳಲ್ಲಿ ಶಾಲೆಗೆ ಇನ್ನಷ್ಟು ಮೂಲಭೂತ ಸೌಲತ್ತುಗಳನ್ನು ನೀಡಲು ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಪುಟ್ಟ ಗ್ರಾಮೀಣ ಪ್ರದೇಶಲ್ಲಿ ಬಹಳಷ್ಟು ಹಿರಿಯ ಮುತ್ಸದ್ದಿಗಳಿಂದ ಆರಂಭವಾದ ಈ ಶಾಲೆ ಇವತ್ತು ಬೆಳಗುವಂತಹ ಸ್ಥಿತಿಗೆ ಬಂದಿದೆ. ಕೇವಲ ೯ಸೆಂಟ್ ಜಾಗದಲ್ಲಿ ಈ ಶಾಲೆ  ಆಗಬೇಕಾದರೆ ಅದಕ್ಕೆ ದಿಟ್ಟತನ ಮತ್ತು ಧೈರ್ಯ ಬೇಕಾಗುತ್ತದೆ. ಒಗ್ಗಡುವಿಕೆಯ ಫಲದಿಂದಾಗಿ ಈ ಶಾಲೆಯ ಬೇರುಗಳು ಗಟ್ಟಿಯಾಗಲು ಸಾಧ್ಯವಾಗಿದೆ. ಈ ಶಾಲೆ ಹೆಮ್ಮರವಾಗಿ ಬೆಳೆಯಲು ಹಲವರ ತ್ಯಾಗದ ಫಲವಿದೆ. ಈ ಶಾಲೆ ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.

ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧರವರು ಗ್ರಂಥಾಲಯವನ್ನು ಉದ್ಘಾಟಿಸಿದರು. ಎಂ.ಆರ್.ಪಿ.ಎಲ್.ನ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣಗೊಂಡ ಕೊಠಡಿಯನ್ನು ಎಂ.ಆರ್.ಪಿ.ಎಲ್. ನ ಸಿ.ವಿ.ಜಿ ಸುಬ್ರಾಯ ಭಟ್ ರವರು ಉದ್ಘಾಟಿಸಿ ಶುಭಹಾರೈಸಿದರು.

ಅಳಕೆಮಜಲು ಜುಮ್ಮಾ ಮಸ್ಜೀದ್ ನ ಆಡಳಿತ ಸಮಿತಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಜಿರವರು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ತಿಲಕ್ ರಾಜ್ ಶೆಟ್ಟಿ, ಗೀತಾಂಜಲಿ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಬಂಟ್ವಾಳ ತಾ.ಪಂ. ಮಾಜಿ ಸದಸ್ಯೆ ವನಜಾಕ್ಷಿ ಭಟ್, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷರಾದ ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಸೋಮಶೇಖರ ಶೆಟ್ಟಿ ಅಳಕೆಮಜಲು, ಶಾಲಾ ಹಿಂದಿನ ಶಿಕ್ಷಕಿ ಚಂದ್ರಮತಿ, ಹಿರಿಯರಾದ ತಿಮ್ಮಪ್ಪ ಸಪಲ್ಯ ದೇವಸ್ಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಮಲತಾ,
ಕಂಬಳಬೆಟ್ಟು ಕ್ಲಸ್ಟರ್ ನ ಸಿ.ಆರ್.ಪಿ. ಜ್ಯೋತಿ
ನೆಹರೂನಗರ ಸೃಷ್ಠಿ ಕನ್ಸ್ ಸ್ಟ್ರೆಕ್ಷನ್ ನ ಶಿವಪ್ರಸಾದ್, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ , ಬಿ.ಆರ್.ಪಿ. ಲೊಕೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ದಿಗೆ ಸಹಕಾರಿಸಿದ ಧಾನಿಗಳನ್ನು, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳನ್ನು, ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು, ಶಾಸಕರನ್ನು, ಎಂ.ಆರ್.ಪಿ.ಎಲ್.ಪ್ರತಿನಿಧಿಗಳ ಸಹಿತ ಶಾಲೆಯ ಅಭಿವೃದ್ದಿಗೆ ಕೈಜೋಡಿಸಿದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ, ಹಳೇ ವಿದ್ಯಾರ್ಥಿಗಳಿಗೆ, ಮಕ್ಕಳ ಪೋಷಕರಿಗೆ ಬಹುಮಾನ ವಿತರಿಸಲಾಯಿತು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಪದ್ಮನಾಭ ಸಪಲ್ಯರವರು ಸ್ವಾಗತಿಸಿ ಕೇವಲ ೯.೫ ಸೆಂಟ್ ಜಾಗದಲ್ಲಿರುವ ಈ ಶಾಲೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ನಾವಿದ್ದೇವೆ. ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ನಾವು ಚಿರರುಣಿಯಾಗಿದ್ದೇವೆ. ಶಾಲೆಯ ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ್ ಮೆಂಡೋನ್ಸರವರು ವರದಿ ವಾಚಿಸಿ ಶಾಲೆ ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಕೆಮನಾಜೆರವರು ಸ್ವಸ್ತಿ ವಾಚಿಸಿದರು.

ಎಸ್. ಡಿ.ಎಂ.ಸಿಯ ಅಧ್ಯಕ್ಷರುಗಳಾದ ಸುಮಲತಾ ವಂದಿಸಿದರು.ಶಿಕ್ಷಕಿಯರಾದ ಜಯಂತಿ, ಅನುರಾದ, ರಾಜೀವಿ, ಶಿಕ್ಷಕರಾದ ಇಸ್ಮಾಲಿ ಕೆ. ಕಾರ್ಯಕ್ರಮ ನಿರೂಪಿಸಿದರು. ಹಳೆವಿದ್ಯಾರ್ಥಿಗಳಾದ ಕೃತಿ, ದೀಕ್ಷ ಸ್ಪರ್ದೆಗಳಲ್ಲಿ ವಿಜೇತರಾದವರ ಪಟ್ಟಿ ವಾಚಿಸಿದರು.
ಮಧ್ಯಾಹ್ನದ ಬಳಕ ಅಂಗನವಾಡಿ, ಎಲ್.ಕೆ.ಜಿ., ಯು.ಕೆ.ಜಿ., ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ ನಡೆಯಿತು.

LEAVE A REPLY

Please enter your comment!
Please enter your name here