ಟಿಕೆಟ್ ಆಕಾಂಕ್ಷಿಗಳ ಪೈಕಿ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಅವಕಾಶ ಕೊಡಿ

0

ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಹೇಮನಾಥ ಶೆಟ್ಟಿ ಆಗ್ರಹ

ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸಲು ಅವಕಾಶ ಕೋರಿ 13 ಮಂದಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಹಾಕಿದ್ದು, ಅರ್ಜಿ ಹಾಕಿದವರ ಪೈಕಿ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಹೈಕಮಾಂಡ್ ಅವಕಾಶ ಕೊಡಬೇಕು ಎಂದು ಕೆಪಿಸಿಸಿ ಸಂಯೋಜಕ, ಪುತ್ತೂರಿನ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅವರು ಬೈಪಾಸ್ ಅಶ್ಮಿ ಸಭಾ ಭವನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿರುವ ಮತ್ತು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸದಸ್ಯರಾಗಿರುವ ಕೋಡಿಂಬಾಡಿ ಅಶೋಕ್ ರೈ ಯವರಿಗೆ ಈ ಬಾರಿ ಅವಕಾಶ ಸಿಗುತ್ತದೆ ಎಂಬ ಸುದ್ದಿಗಳು ಹರಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಭೆಯನ್ನು ಆಯೋಜನೆ ಮಾಡಿದ್ದು ಅಶೋಕ್ ರೈಯವರು ಪಕ್ಷಕ್ಕೆ ಸೇರುವುದಾದರೆ ಸೇರಲಿ ನಮ್ಮ ಅಭ್ಯಂತರವಿಲ್ಲ ಆದರೆ ಯಾವುದೇ ಕಾರಣಕ್ಕೂ ಅವರಿಗೆ ಟಿಕೆಟ್ ಕೊಡಬಾರದು, ಕಾಂಗ್ರೆಸ್ ಹೈಕಮಾಂಡ್ ಅವಕಾಶ ಮಾಡಿದ್ದು ಆದಲ್ಲಿ ಏನು ಮಾಡಬೇಕೂಂತ ಕಾರ್ಯಕರ್ತರಿಗೆ ಗೊತ್ತಿದೆ. ನಾವು ಕಾಂಗ್ರೆಸ್ ಪಕ್ಷದ ೧೩ ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಈ ಪೈಕಿ ಪಕ್ಷದ ಏಳಿಗೆಗಾಗಿ ದುಡಿದವ ರು, ಕಾರ್ಯಕರ್ತರ ನೋವಿಗೆ ಸ್ಪಂದಿಸಿದವರಿಗೆ ಅವಕಾಶ ಮಾಡಿಕೊಡಬೇಕು ಎಂದ ಅವರು, ಪುತ್ತೂರು ಬ್ಲಾಕ್ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರು , ಪಕ್ಷದ ಹಿರಿಯ ಮುಖಂಡರು ಆಕಾಂಕ್ಷಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಿ ಎಂದು ಹೇಳಿದರು.

ಕಳೆದ ಬಾರಿ ಕಾಂಗ್ರೆಸ್ ಸೇರಿದ ಶಕುಂತಳಾ ಶೆಟ್ಟಿಯವರಿಗೆ ಪಕ್ಷದ ಸಿದ್ದಾಂತವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಇದ್ದ ಕಾರಣ ಕಾರ್ಯಕರ್ತರು ಪಕ್ಷದಿಂದ ದೂರವಾಗಿದ್ದು ಅವರ ನೋವನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮದೇ ಪಕ್ಷದ ಶಾಸಕರಿದ್ದರೂ ಕಾರ್ಯಕರ್ತರಿಗೆ ಬೆಲೆಯೇ ಇರಲಿಲ್ಲ, ಕಾರ್ಯಕರ್ತರು ಅವರ ಬಳಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಬಳಿಕ ನಡೆದ ತಳ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನೂ ಅನುಭವಿಸುವಂತಾಗಿದೆ. ಇದೀಗ ಮತ್ತೆ ಬಿಜೆಪಿ ಸದಸ್ಯರಾದ ಅಶೋಕ್ ರೈಗೆ ಅವಕಾಶ ನೀಡುವ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಬಾರದು. ಅಶೋಕ್ ರೈ ಯವರು ಅಷ್ಟೊಂದು ಪ್ರಭಾವಿಯಾಗಿದ್ದರೆ ಅವರು ಬಿಜೆಪಿಯಿಂದ ಟಿಕೆಟ್ ಕೇಳಲಿ ಎಂದು ಹೇಮನಾಥ ಶೆಟ್ಟಿ ಹೇಳಿದರು.


೨೦೧೮ರಲ್ಲಿ ಭರವಸೆ ಕೊಟ್ಟಿದ್ದರು: ೨೦೧೮ರಲ್ಲಿ ನಾನು ಅಭ್ಯರ್ಥಿ ಆಕಾಂಕ್ಷಿಯಾಗಿದ್ದೆ ಆ ಸಂದರ್ಭದಲ್ಲಿ ನನ್ನನ್ನು ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರ ಬಳಿ ಕರೆದುಕೊಂಡು ಹೋಗಿ ಮಾತುಕತೆ ನಡೆಸಿ ಮುಂದಿನ ಅವಧಿಗೆ ನಿಮಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು. ಇಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯವನ್ನು ನಾವು ಕೆಪಿಸಿಸಿಗೆ ಕಳುಹಿಸುತ್ತೇವೆ. ನಮ್ಮೊಳಗೆ ಏನೇ ಭಿನ್ನಮತ ಇದ್ದರೂ ಪಕ್ಷದ ವಿಚಾರ ಬಂದಾಗ ನಾವೆಲ್ಲರೂ ಒಟ್ಟಾಗುತ್ತೇವೆ. ಕಾಂಗ್ರೆಸ್‌ಗಾಗಿ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಡಬೇಕು ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

ಬಿಜೆಪಿಯವರ ಗುಲಾಮರಾಗಲು ನಾವು ಸಿದ್ದರಿಲ್ಲ: ಸೂತ್ರಬೆಟ್ಟು;

ನಾವು ಪಕ್ಷವನ್ನು ಬೆಳೆಸುವುದಕ್ಕೋಸ್ಕರ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದವರು, ಪಕ್ಷಕ್ಕಾಗಿ ಕೆಲಸ ಮಾಡಿದ ಅನೇಕ ಮಂದಿ ನಮ್ಮೊಳಗೆ ಇರುವಾಗ ಬಿಜೆಪಿಯಿಂದ ವ್ಯಕ್ತಿಯನ್ನು ಕರೆಸಿ ಅವರನ್ನು ಪಕ್ಷಕ್ಕೆ ಸೇರಿಸಿ ಟಿಕೆಟ್ ಕೊಡಿಸುವ ದುರ್ಗತಿ ಪಕ್ಷಕ್ಕೆ ಬಂದಿಲ್ಲ ಎಂದು ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಹೇಳಿದರು. ಯಾವುದೇ ನಾಯಕರು ಕಾರ್ಯಕರ್ತರನ್ನು ಎದುರುಹಾಕಿಕೊಳ್ಳಬೇಡಿ, ಅವರ ಭಾವನೆಗೆ ಬೆಲೆ ಕೊಡಿ. ಪಕ್ಷಕ್ಕೆ ಸೋಲಾದಾಗ ನೋವಾಗುವುದು ಕಾರ್ಯಕರ್ತರಿಗೆ, ನಾಯಕರು ನಾಯಕರಾಗಿಯೇ ಇರುತ್ತಾರೆ. ಯಾವುದೇ ಕಾರಣಕ್ಕೂ ಕೋಡಿಂಬಾಡಿ ಅಶೋಕ್ ರೈಯವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಕೊಡಬಾರದು. ಒಂದು ವೇಳೆ ಕೊಟ್ಟಿದ್ದು ಆದಲ್ಲಿ ಮುಂದೆ ನಾವು ನಮ್ಮ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಪಕ್ಷಕ್ಕೆ ಯಾರು ಬೇಕಾದರೆ ಬರಲಿ ಬಂದು ಕಾರ್ಯಕರ್ತನಾಗಿ ಕೆಲಸ ಮಾಡಲಿ ಅದಕ್ಕೆ ನಮ್ಮ ಸ್ವಾಗತವಿದೆ. ಟಿಕೆಟ್ ಗಾಗಿ ಪಕ್ಷಕ್ಕೆ ಬರುವುದೇ ಬೇಡ ಎಂದು ಸೂತ್ರಬೆಟ್ಟು ಹೇಳಿದರು.

ಪಕ್ಷ ಕಟ್ಟುವಾಗ ಯಾರೂ ಇರಲಿಲ್ಲ:

ಲ್ಯಾನ್ಸಿ: ಕಳೆದ ಹಲವು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳಸಿದವರು ಯಾರು ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ ಕೆಲವು ಮಂದಿ ಪಕ್ಷವನ್ನು ಕಟ್ಟಲು ಬಂದವರಲ್ಲ. ಅಂದಿನಿಂದ ಇಂದಿನ ತನಕ ಕಾರ್ಯಕರ್ತರ ನೋವಿಗೆ ಸ್ಪಂದಿಸಿದ ಕಾವು ಹೇಮನಾಥ ಶೆಟ್ಟಿಗೆ ಈ ಬಾರಿ ಅವಕಾಶ ಕೊಡದೇ ಇದ್ದಲ್ಲಿ ತಪ್ಪಾಗುತ್ತದೆ ಎಂದು ಹೇಳಿದರು.

ಹನೀಫ್ ಬಗ್ಗುಮೂಲೆ ಮಾತನಾಡಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿ ಬಂದವರು ಗೆದ್ದ ಬಳಿಕ ಮತ್ತೆ ಬಿಜೆಪಿಗೆ ಹೋಗುತ್ತಾರೆ ಇಂಥಹ ವಾತಾವರಣವನ್ನು ಹೈಕಮಾಂಡ್ ಸೃಷ್ಟಿಸಬಾರದು, ಕಾರ್ಯಕರ್ತರನ್ನು ಧಿಕ್ಕರಿಸಿ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಅಶೋಕ್ ರೈ ೫ ವರ್ಷ ಕಾರ್ಯಕರ್ತನಾಗಿ ಕೆಲಸ ಮಾಡಲಿ:

ಗಣೇಶ್ ರಾವ್: ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಪುರಸಭಾ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ ಕೋಡಿಂಬಾಡಿ ಅಶೋಕ್ ರೈ ಕಾಂಗ್ರೆಸ್‌ಗೆ ಸೇರಲಿ ಮುಂದಿನ ೫ ವರ್ಷ ಕಾರ್ಯಕರ್ತರಾಗಿ ಕೆಲಸ ಮಾಡಲಿ ಆ ಬಳಿಕ ಟಿಕೆಟ್ ಕೊಡುವ ಎಂದು ಹೇಳಿದರು.ಈ ಬಾರಿ ಪಕ್ಷಕ್ಕಾಗಿ ಕೆಲಸ ಮಾಡಿದ ಕಾವು ಹೇಮನಾಥ ಶೆಟ್ಟಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರಲ್ಲದೆ ಇದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಎಲ್ಲಾ ಮುಖಂಡರು, ಕಾರ್ಯಕರ್ತರು ಸಿದ್ದರಿದ್ದಾರೆ ಎಂದು ಹೇಳಿದರು.

ಪುತ್ತೂರು ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸುತ್ತಿತ್ತು. ಆ ಬಳಿಕ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಪುತ್ತೂರಿನಲ್ಲಿ ಪಕ್ಷ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಕಾರ್ಯಕರ್ತನ ಆಗ್ರಹವಾಗಿದೆ. ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದು ಕಾರ್ಯಕರ್ತರಲ್ಲಿ ನೋವಿದೆ. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ ಕಾವು ಹೇಮನಾಥ ಶೆಟ್ಟಿಯವರಿಗೆ ಈ ಬಾರಿ ಹೈಕಮಾಂಡ್ ಅವಕಾಶ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಜಗದೀಶ್ ಕಜೆ, ಅಸ್ಗರ್ ಆಲಿ,ಪವನ್‌ರಾಮ್ ಕಾವು, ನವೀನಾ, ಮಾತನಾಡಿ ಅನಿಸಿಕೆ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಪಕ್ಷದ ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಫಾರೂಕ್ ಬಯಬ್ಬೆ, ಕಿಟ್ಟಣ್ಣ ಗೌಡ, ಎಂಪಿ ಅಬೂಬಕ್ಕರ್, ಕೇಶವ ಪೂಜಾರಿ, ಅನ್ವರ್ ಖಾಸಿಂ, ಇಸಾಕ್ ಸಾಲ್ಮರ ಲ್ಯಾನ್ಸಿ ಮಸ್ಕರೇನಸ್, ಪರಮೇಶ್ವರ ಬಲ್ಯಾಯ, ಬೂಡಿಯಾರ್ ಪುರುಷೋತ್ತಮ ರೈ, ಮಹೇಶ್ವಂದ್ರ ಸಾಲಿಯಾನ್, ಅಶೋಕ್ ಕುಮಾರ್ ಸಂಪ್ಯ ಸೇರಿದಂತೆ ಸುಮಾರು ೧೫೦ ಮಿಕ್ಕಿ ಮುಖಂಢರು ಕಾರ್ಯಕರ್ತರು ಉಪಸ್ಥಿತರಿದ್ದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

ಅಶೋಕ್ ರೈಯವರಿಗೆ ಟಿಕೆಟ್ ಕೊಡಲೇಬೇಡಿ
ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಬರುವ ಕೋಡಿಂಬಾಡಿ ಅಶೋಕ್ ರೈಯವರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಬಾರದು. ಹೈಕಮಾಂಡ್‌ಗೆ ಈ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ತಲುಪಿಸಬೇಕು. ಹಣಬಲದಿಂದ ಅವರಿಗೆ ಹೈಕಮಾಂಡ್ ಅವಕಾಶ ನೀಡಿದ್ದೇ ಆದಲ್ಲಿ ಮುಂಬರುವ ಚುನಾವಣೆಯಲ್ಲಿ ನಮ್ಮ ನಡೆ ಏನೆಂಬುದನ್ನು ನಾವು ಬಹಿರಂಗವಾಗಿ ಘೋಷಣೆ ಮಾಡುವುದಾಗಿ ಸಭೆಯಲ್ಲಿದ್ದವರೆಲ್ಲೂ ಒಕ್ಕೊರಳಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here