ಮುಕ್ರಂಪಾಡಿಯಲ್ಲಿ ತಮ್ಮನನ್ನು ಕೊಲೆಗೈದ ಆರೋಪಿ ಅಣ್ಣ ಹಾವೇರಿಯಲ್ಲಿ ಪೊಲೀಸ್ ಬಂಧನ !

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಶೆಡ್‌ನಲ್ಲಿ ಡಿ.1ರಂದು ರಾತ್ರಿ ಒಡಹುಟ್ಟಿದ ತಮ್ಮನನ್ನೇ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣಾ ಪೊಲೀಸರು ಹಾವೇರಿ ಜಿಲ್ಲೆಯಲ್ಲಿ ಡಿ.6ರಂದು ಬಂಧಿಸಿದ್ದಾರೆ.


ಹಾವೇರಿ ಜಿಲ್ಲೆಯ ದೇವಿಹೊಸೂರು ನಿವಾಸಿ ಮಹಾದೇವ ಎಂಬವರು ಕೊಲೆಗೀಡಾದವರಾಗಿದ್ದು, ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅವರ ಅಣ್ಣ ನಿಂಗನ ಗೌಡ ಯಾನೆ ನಿಂಗಪ್ಪ ಗೌಡ(58ವ.)ರವರನ್ನು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ಪುತ್ತೂರು ನಗರ ಠಾಣೆ ಪೊಲೀಸರು ಡಿ.6ರಂದು ಬಂಧಿಸಿದ್ದಾರೆ.


ಘಟನೆ ವಿವರ: ಹಾವೇರಿ ಜಿಲ್ಲೆಯ ದೇವಿಹೊಸೂರು ನಿವಾಸಿ ಮಹಾದೇವ ಹಲವು ಸಮಯಗಳಿಂದ ಸೂರಜ್ ನಾಯರ್ ಎಂಬವರ ಬಾಬ್ತು ಮುಕ್ರಂಪಾಡಿ ನ್ಯೂಲೈಫ್ ಪೆಲೋಶಿಪ್ ಚರ್ಚ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರ ಅಣ್ಣ ನಿಂಗನ ಗೌಡ ಯಾನೆ ನಿಂಗಪ್ಪ ಗೌಡ ಸಹ ಅವರ ಜೊತೆ ಗಾರೆ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ದಿನಗಳ ಹಿಂದೆ ಊರಿಗೆ ಹೋಗಿದ್ದ ನಿಂಗನ ಗೌಡರವರು ಡಿ.೧ರಂದು ಕೆಲಸಕ್ಕೆ ಬಂದವರು ರಾತ್ರಿ ಹೊತ್ತು ಕಟ್ಟಡದ ಶೆಡ್‌ನಲ್ಲಿ ಸಹೋದರ ಮಹಾದೇವ ಅವರ ಜೊತೆ ಹಣಕಾಸಿನ ವಿಚಾರದಲ್ಲಿ ಮಾತಿನ ಚಕಮಕಿ ನಡೆಸಿದ್ದಲ್ಲದೆ ಕಬ್ಬಿಣದ ರಾಡ್‌ನಿಂದ ಮಹಾದೇವ ಅವರಿಗೆ ಹಲ್ಲೆ ನಡೆಸಿದ್ದರು.

ಹಲ್ಲೆಯಿಂದ ಗಂಭೀರ ಗಾಯಗೊಂಡ ಮಹಾದೇವ ಅವರು ಮೃತಪಟ್ಟಿದ್ದರು. ಇದೇ ವೇಳೆ ಆರೋಪಿ ನಿಂಗನ ಗೌಡ ಅಲ್ಲಿಂದ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಆರೋಪಿಯ ಪತ್ತೆಗಾಗಿ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ನಿರ್ದೇಶನದಂತೆ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್‌ರವರ ಮಾರ್ಗದರ್ಶನದಲ್ಲಿ ಎಂ.ಎನ್.ರಾವ್ ಅವರ ವಿಶೇಷ ತಂಡ ಕೇರಳ ರಾಜ್ಯದ ಕಾಸರಗೋಡು, ಚರ್ಕಳ, ಬದಿಯಡ್ಕ, ಪೆರ್ಲ, ಕರ್ನಾಟಕ ರಾಜ್ಯದ ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೋಳ, ಚಿಕ್ಕಮಗಳೂರು, ಅರಸೀಕೆರೆ, ಶಿವಮೊಗ್ಗ, ಹಾವೇರಿ ಕಡೆಗಳಲ್ಲಿ ಆರೋಪಿ ಇರುವ ಕುರಿತು ಮಾಹಿತಿ ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿ ಡಿ.6ರಂದು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ಆರೋಪಿ ನಿಂಗನಗೌಡ ಯಾನೆ ನಿಂಗಪ್ಪ ಗೌಡರನ್ನು ವಶಕ್ಕೆ ಪಡೆದು ಠಾಣೆಗೆ ತಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣ ಪತ್ತೆ ಹಚ್ಚುವಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಕೃಷ್ಣಪ್ಪ, ಲೋಕನಾಥ್, ಸಿಬ್ಬಂದಿಗಳಾದ ಸ್ಕರೀಯ, ಜಗದೀಶ್, ಸುಬ್ರಹ್ಮಣ್ಯ, ಉದಯಕುಮಾರ್, ಬಸವರಾಜ್, ಕಿರಣ್ ಕುಮಾರ್, ವಿರೂಪಾಕ್ಷ, ರೇವತಿ ಸಹಕರಿಸಿದ್ದಾರೆ.

ತಲೆ ಬೋಳಿಸಿದ್ದ ಆರೋಪಿ

ತಮ್ಮನ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ನಿಂಗನ ಗೌಡ ಯಾನೆ ನಿಂಗಪ್ಪ ಗೌಡ ಪೊಲೀಸರಿಗೆ ಗುರುತು ಸಿಗಬಾರದು ಎಂಬ ಹಿನ್ನೆಲೆಯಲ್ಲಿ ತಲೆ ಬೋಳಿಸಿದ್ದರು. ಪೊಲೀಸರ ವಿಚಾರಣೆ ವೇಳೆ ನಾನು ಮಂಜುನಾಥನ ದರ್ಶನಕ್ಕೆ ಹೋಗಿದ್ದ ವೇಳೆ ತಲೆ ಬೋಳಿಸಿದ್ದೆ ಎಂದು ಆರೋಪಿ ತಿಳಿಸಿರುವುದಾಗಿ ವರದಿಯಾಗಿದೆ.

 

                                                                     ಕೊಲೆಯಾದವರು

 

LEAVE A REPLY

Please enter your comment!
Please enter your name here