ಬೀಡಿ ಕಾರ್ಮಿಕರ ಕನಿಷ್ಟ ವೇತನ ಜಾರಿಯಾಗಲಿ – ಬಿ.ಎಂ.ಭಟ್

0

ಪುತ್ತೂರು: ಬೀಡಿಕಾರ್ಮಿಕರಿಗೆ 01.04.2018 ರಿಂದ ಅನ್ವಯವಾಗುವಂತೆ ಸರಕಾರ ನಿಗದಿಗೊಳಿಸಿದ ಕನಿಷ್ಟ ವೇತನ ಪ್ರತಿ 1000 ಬೀಡಿ ವೇತನದಿಂದ ತಲಾ ರೂ. 40ರಂತೆ ಕಡಿತ ಮಾಡಿ ವೇತನ ನೀಡುವ ಮಾಲಕರ ವಿರುದ್ದ ಕಠಿಣಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದ್ದಾರೆ. 

ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಸಮಾವೇಶವನ್ನುದ್ದೇಶಿಸಿ ಮಾತಾಡಿದರು. ಕನಿಷ್ಟವೇತನ ಕಾಯಿದೆ 5(1)(ಎ) ಪ್ರಕಾರ ತ್ರಿಪಕ್ಷೀಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನವಾಗಿ ಅದರ ಶಿಫಾರಸ್ಸಿನಂತೆ ರಾಜ್ಯ ಸರಕಾರ 2018 ಮಾರ್ಚ್‌ನಲ್ಲಿ ಆದೇಶದಂತೆ ಒಪ್ಪಿಕೊಂಡರೂ ವೇತನ ನೀಡದ ಮಾಲಕರು ಕಾರ್ಮಿಕರ ಸುಲಿಗೆ ಮಾಡುತ್ತಿದ್ದಾರೆ ಎಂದರು. ಇಂದು ಪ್ರತಿ 1000 ಬೀಡಿಯ ವೇತನ ಪಿ.ಎಫ್. ಸೇರಿ ರೂ.271 ಆಗಿದ್ದರೂ ಬೀಡಿ ಮಾಲಕರು ಮಾತ್ರ ರೂ.231 ನೀಡುತ್ತಿದ್ದಾರೆ. ಇದರ ಜೊತೆಗೆ ಬೀಡಿಕಾರ್ಮಿಕರಿಗೆ ನೀಡಬೇಕಾಗಿದ್ದ ಕಾನೂನು ಬದ್ದ ಗ್ರಾಚ್ಯುವಿಟಿ ನೀಡದೆ ನಿರಂತರವಾಗಿ ಕಾನೂನು ಉಲ್ಲಂಘಿಸುತ್ತಿದ್ದರೂ ಕಾರ್ಮಿಕ ಇಲಾಖೆಯಾಗಲಿ, ಸರಕಾರವಾಗಲಿ ಮಾಲಕರ ವಿರುದ್ದ ಕ್ರಮ ಕೈಗೊಳ್ಳದೆ ಮಾಲಕರ ವಂಚನೆಗೆ ಮೌನ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದರು. ಕಾರ್ಮಿಕರು ಗ್ರಾಚ್ಯುಟಿಗಾಗಿ ಕ್ಲೈಮ್ ಅರ್ಜಿ ಸಲ್ಲಿಸಿ ಒದ್ದಾಡುವ ದುಸ್ತಿತಿ ಸಹಿತ ಕಾರ್ಮಿಕರಿಗೆ ಬೀಡಿ ಮಾಲಕರಿಂದ ಆಗುತ್ತಿರುವ ಈ ವಂಚನೆಯನ್ನು ಕಂಡು ಕಾಣದಂತೆ ಮಾಲಕರ ಹಿತರಕ್ಷಣೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಬೃಹತ್ ಹೋರಾಟ ನಡೆಸಲು ಸಿಐಟಿಯು ಮುಂದಾಗಲಿದೆ ಎಂದರು. ವೇದಿಕೆಯಲ್ಲಿ ಬೀಡಿ ಬೀಡಿ ಕಾರ್ಮಿಕರ ಸಂಘದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here