ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಮಣ್ಣಿನ ದಿನಾಚರಣೆ

0

ಪುತ್ತೂರು: ನಮ್ಮ ಆಹಾರದ ಮುಖ್ಯ ಮೂಲ ಮಣ್ಣು, ಮಾನವನ ಜೀವನಕ್ಕೆ ಪೋಷಕಾಂಶಗಳು ಹೇಗೆ ಅಗತ್ಯವೋ ಮಣ್ಣಿಗೂ ಇದು ಆವಶ್ಯಕ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮೆರೈನ್ ಜಿಯಾಲಜಿ ವಿಭಾಗದ ವಿಶ್ರಾಂತ ಪ್ರೊಫೆಸರ್ ಡಾ.ಎಚ್. ಗಂಗಾಧರ ಭಟ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರ್ ವಿಭಾಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಜಿಯೋ ಇನ್ಫಾರ್ಮೇಟಿಕ್ಸ್‌ನ ಪಾತ್ರ ಎನ್ನುವ ವಿಷಯದ ಬಗ್ಗೆ ಮಾತಾಡಿದರು.

ಅವ್ಯಾಹತವಾದ ಮಾಲಿನ್ಯದಿಂದ ಮಣ್ಣು ತನ್ನತನವನ್ನು ಕಳೆದುಕೊಳ್ಳುತ್ತಿದೆ. ಪೋಷಕಾಂಶಗಳ ಕೊರತೆಯಿಂದ ಅದರಲ್ಲಿ ಬೆಳೆಯುವ ಆಹಾರ ಪದಾರ್ಥಗಳೂ ಸತ್ವ ಹೀನವಾಗುತ್ತಿವೆ ಇದು ಅಪಾಯದ ಸಂಕೇತ ಎಂದು ನುಡಿದರು. ಮಣ್ಣಿನ ಮೇಲ್ಮೈ ಪದರದ ಸವಕಳಿಯನ್ನು ತಪ್ಪಿಸುವುದರಿಂದ ಪೋಷಕಾಂಶಗಳ ನಷ್ಟವನ್ನು ತಡೆಗಟ್ಟಬಹುದು ಎಂದರು. ಅವೈಜ್ಞಾನಿಕ ಕೃಷಿ ಪದ್ದತಿ, ಅಪಾರ ಪ್ರಮಾಣದ ರಾಸಾಯನಿಕಗಳ ಬಳಕೆ, ಮಿತಿಮೀರಿದ ಪ್ಲಾಸ್ಟಿಕ್‌ಗಳ ಉಪಯೋಗ, ಸಸ್ಯ ಸಂಕುಲಗಳ ನಾಶದಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಪರಿಸರ ಸಂರಕ್ಷಣೆಯ ಜತೆಯಲ್ಲಿ ನಾವೆಲ್ಲರೂ ಮಣ್ಣಿನ ರಕ್ಷಣೆಯನ್ನೂ ಮಾಡಬೇಕು ಎಂದು ನುಡಿದರು.

ಮಣ್ಣಿನ ದಿನದ ನೆನಪಿಗಾಗಿ ಅತಿಥಿಗಳೊಂದಿಗೆ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು. ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್ ವಿ.ಆರ್ ಸ್ವಾಗತಿಸಿದರು, ಡಾ.ಸೌಮ್ಯ. ಎನ್.ಜೆ ಪ್ರಾಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಪ್ರೊ.ಜಯಕೃಷ್ಣ ಭಟ್.ಡಿ ವಂದಿಸಿದರು. ಮಧುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here