ಶಿಕ್ಷಕರ ಜೊತೆಗೆ ಪೋಷಕರೂ ಮಕ್ಕಳಿಗೆ ಶಿಸ್ತಿನ ಪಾಠವನ್ನು ಕಲಿಸುವ ಅಗತ್ಯತೆ ಇದೆ: ನಿತೀಶ್‌ಕುಮಾರ್
ಪುತ್ತೂರು: ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಎಲ್ಲವೂ ಕಲಿಯುತ್ತಾರೆ ಎಂದರ್ಥವಲ್ಲ, ಮಕ್ಕಳಿಗೆ ಕೆಲವೊಂದು ಶಿಕ್ಷಣ ಮನೆಯಿಂದಲೇ ನೀಡಬೇಕಿದ್ದು ,ಶಿಸ್ತು ಮನೆಯಿಂದಲೇ ಆರಂಭವಾದರೆ ಮಾತ್ರ ಮಕ್ಕಳು ಅದನ್ನು ಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ ಎಂದು ಕುಂಬ್ರ ಕೆಪಿಎಸ್ ಸ್ಕೂಲ್ ಕಾರ್ಯಾಧ್ಯಕ್ಷರಾದ ನಿತೀಶ್ ಕುಮಾರ್ ಶಾಂತಿವನ ಹೇಳಿದರು.
ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ದ.7 ರಂದು ನಡೆದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ, ಪ್ರೌಢಾವಸ್ಥೆಯಲ್ಲಿ ಮಕ್ಕಳಲ್ಲಿ ಶಿಸ್ತು ಇರುತ್ತದೆ ಆ ಬಳಿಕ ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಕೆಲವೊಂದು ಮಂದಿಯಲ್ಲಿ ಅಶಿಸ್ತು ಆರಂಭವಾಗುತ್ತದೆ ಆ ವೇಳೆ ಪೋಷಕರು ಜಾಗೃತರಾಗಿರಬೇಕು ಎಂದು ಹೇಳಿದರು. ಪೋಷಕರು ಶಾಲೆಯ ಜೊತೆ , ಶಿಕ್ಷಕರ ಜೊತೆ ನಿತ್ಯ ಸಂಪರ್ಕ ಇದ್ದಲ್ಲಿ ಮಾತ್ರ ತಮ್ಮ ಮಕ್ಕಳನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಪೋಷಕರೇ ಶಾಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರದಾರಿಗಳಾಗಬೇಕು ಎಂದು ಹೇಳಿದರು.
ಶಾಲೆಯ ಹಬ್ಬ ಊರಿನ ಹಬ್ಬ: ಚನಿಲ
ಕಾರ್ಯಕ್ರಮದಲ್ಲಿ ಮಾತನಾಡಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಗ್ರಾಮದ ಶಾಲೆಯ ವಾರ್ಷಿಕೋತ್ಸವ ಆ ಊರಿನ ಹಬ್ಬವಾಗಿದೆ. ಈ ಕಾರ್ಯಕ್ರಮದಲ್ಲಿ ಊರಿನ ಎಲ್ಲರೂ ಭಾಗವಹಿಸಬೇಕು. ಶಾಲೆಯ ಬಗ್ಗೆ ಅಭಿಮಾನ ಇರಬೇಕು. ನಮ್ಮ ಶಾಲೆ, ನಮ್ಮ ಮಕ್ಕಳು ಎಂಬ ಪ್ರೀತಿ ಮನೋಭಾವದಿಂದ ಇದ್ದರೆ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಪ್ರತೀಯೊಬ್ಬ ಪೋಷಕನೂ ತನ್ನ ಮಗುವಿನ ಶಿಕ್ಷಣದ ಬಗ್ಗೆ ಕಾಳಜಿವಹಿಸಬೇಕು. ಉತ್ತ ಗುರಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳು ಶಾಲೆಗೆ ಬಂದರೆ ಆ ಗುರಿ ಮುಟ್ಟುವ ತನಕ ಶತಪ್ರಯತ್ನದಿಂದ ಕಲಿಯುವಂಥಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಗ್ರಾಪಂ ಸದಸ್ಯ ಲತೀಫ್ ಕುಂಬ್ರ,ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳಾದ ಸುಧಾಕರ ರೈ ಕುಂಬ್ರ, ಮಾಧವ ರೈ ಕುಂಬ್ರ, ಕಾಲೇಜು ವಿದ್ಯಾರ್ಥಿ ನಾಯಕ ಶೇಕ್ ಮಹಮ್ಮದ್ ಪಾಹಿನ್, ಶಾಲಾ ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಕಸ್ತೂರಿ, ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ಮಹಮ್ಮದ್ ಮಸೂದ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ವಿಶಾಲ್ ಉಪಸ್ತಿತರಿದ್ದರು. ಸಭೆಯಲ್ಲಿ ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ಹರೀಶ್ ಬಿಜತ್ರೆ, ನಿವೃತ್ತ ಶಿಕ್ಷಕರಾದ ಜಯರಾಮ ಗೌಡ, ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ನಾರಾಯಣಪೂಜಾರಿ ಕುರಿಕ್ಕಾರ ಸೇರಿದಂತೆ ಹಲವು ಮಂದಿ ಉಪಸ್ತಿತರಿದ್ದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಮತಾ ವರದಿ ಮಂಡಿಸಿದರು. ಕೆಪಿಎಸ್ ಪ್ರಾಂಶುಪಾಲರಾದ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀನಾ ಕುವೆಲ್ಲೋ ವಂದಿಸಿದರು. ಉಪನ್ಯಾಸಕಿ ದಿವ್ಯಾ ಆಳ್ವ ಎಸ್ ಆರ್, ಶರ್ಮಿಳಾ ಗ್ಲಾಡಿಸ್ ಕಾರ್ಯಕ್ರಮ ನಿರೂಪಿಸಿದರು. ಪೋಷಕರು, ಶಿಕ್ಷಕ ವೃಂದ, ಸಿಬಂದಿಗಳು, ಅಂಗನವಾಡಿ ಪಟಾಣಿಗಳು ಉಪಸ್ತಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.