ಉಪ್ಪಿನಂಗಡಿ: ವಸುಧಾ ಪ್ರತಿಷ್ಠಾನ ಪಂಜಳ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಡಿ. 11ರಂದು “ಸುಧಾಮ” ಮನೆಯಂಗಳದ ಮಣಿಮಂಟಪದಲ್ಲಿ “ಹೇಮಂತ ಹಬ್ಬ-12” ಜರಗಲಿದೆ ಎಂದು ವಸುಧಾ ಪ್ರತಿಷ್ಠಾನದ ಮುಖ್ಯಸ್ಥ ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾ. ಮಣಿಮಾಲಿನಿಯವರ ನೆನಪಿಗೋಸ್ಕರ 2008ರಲ್ಲಿ ವಸುಧಾ ಪ್ರತಿಷ್ಠಾನವನ್ನು ಹುಟ್ಟು ಹಾಕಿದ್ದು, ಅದರ ಅಡಿಯಲ್ಲಿ ಸಾಹಿತ್ಯ, ಕಲೆಗೆ ಪ್ರೋತ್ಸಾಹ, ಒತ್ತುಕೊಡುವ ನಿಟ್ಟಿನಲ್ಲಿ ಕಳೆದ 12 ವರ್ಷದಲ್ಲಿ ಕಾರ್‍ಯಕ್ರಮ ಹಮ್ಮಿಕೊಂಡಿದ್ದು, ಆದರೆ ೩ ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಕಾರ್‍ಯಕ್ರಮ ಸ್ಥಗಿತಗೊಂಡಿತ್ತು. ಇದೀಗ ಈ ವರ್ಷ 12 ನೇ ಹೇಮಂತ ಹಬ್ಬವನ್ನು ಆಚರಿಸಲಾಗಿದೆ ಎಂದು ತಿಳಿಸಿದರು.
ಕಾರ್‍ಯಕ್ರಮದಲ್ಲಿ ಕನ್ನಡ ವಿವಿ. ಹಾಗೂ ಮುಕ್ತ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಕೆ. ಚಿನ್ನಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಂ. ಮಾಧವ ಭಟ್ ಅಭಿನಂದನಾ ನುಡಿ,ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು ನೆನಪುಗಳ ಮೆಲುಕು ಹಾಕಲಿದ್ದಾರೆ.
ಹೇಮಂತ ಗೌರವ:
ಸಾಹಿತ್ಯ ಕ್ಷೇತ್ರದಲ್ಲಿ ಪ್ರಾಧ್ಯಾಪಕ ಡಾ. ಎಚ್.ಜಿ. ಶ್ರೀಧರ ಮತ್ತು ಡಾ. ಎಂ.ಪಿ. ಶ್ರೀನಾಥ, ವೈದ್ಯ ಸೇವೆಗಾಗಿ ಡಾ. ಸುಲೇಖಾ ವರದರಾಜ್, ಸಮಾಜ ಸೇವೆಗಾಗಿ ಪ್ರಸನ್ನ ಎನ್. ಭಟ್ ಬಲ್ನಾಡು, ರಂಗ ಕಲೆ ಕ್ಷೇತ್ರದಲ್ಲಿ ಎಂ.ಕೆ. ಮಠ ಉಪ್ಪಿನಂಗಡಿ ಇವರುಗಳಿಗೆ ಹೇಮಂತ ಗೌರವ ಅರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಸಭಾ ಕಾರ್‍ಯಕ್ರಮಕ್ಕೆ ಮುನ್ನ ಮಧ್ಯಾಹ್ನ ಕರ್ಣಾರ್ಜುನ-ತಾಳಮದ್ದಳೆ ಇರುತ್ತದೆ. ಹಾಗೂ ಹೇಮಂತ ಕಲಾಪ ವಿರಾಮದ ಮನೆ ಉದ್ಘಾಟನೆ ನಡೆಯಲಿದೆ. ಸಂಜೆ ಭೀಷ್ಮ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಸುಧಾ ಪ್ರತಿಷ್ಠಾನದ ಡಾ. ಗೋವಿಂದ ಪ್ರಸಾದ ಕಜೆ ಉಪಸ್ಥಿತರಿದ್ದರು.