ಬೆಂಗಳೂರು: ಕಂದಾಯ ಇಲಾಖೆಯ ‘ಗ್ರಾಮ ಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ’ ಎಂದು ಮರು ಪದನಾಮಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಗ್ರಾಮ ಲೆಕ್ಕಿಗರ ಹುದ್ದೆಯನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಬದಲಾಯಿಸುವಂತೆ ಕಂದಾಯ ಸಚಿವರು ಟಿಪ್ಪಣಿ ನೀಡಿದ್ದರು. ಈ ಸಂಬಂಧ ಎಲ್ಲ ಪ್ರಾದೇಶಿಕ ಆಯುಕ್ತರ ಅಭಿಪ್ರಾಯ ಕೇಳಲಾಗಿತ್ತು. ಗ್ರಾಮ ಲೆಕ್ಕಿಗರ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಿಸುವಂತೆ ರಾಜ್ಯದ ನಾಲ್ಕೂ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ವರದಿ ಸಲ್ಲಿಸಿದ್ದರು. ಅದರಂತೆ ಇನ್ನೂ ಮುಂದೆ ‘ಗ್ರಾಮ ಲೆಕ್ಕಿಗ’ ಹುದ್ದೆಯನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಬದಲಿಸಲಾಗಿದ್ದು ಈ ಬದಲಾವಣೆಯ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗೆ ಅನ್ವಯವಾಗುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.