ಪುತ್ತೂರು: ಕೆಪಿಸಿಸಿ ಸಂಯೋಜಕ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಿಮುಕ್ತಿಗೊಳಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಆದೇಶಿಸಿದ್ದಾರೆ.
ಕೊಡುಗು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾವು ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ(ಕೋರ್ಡಿನೇಟರ್)ಹುದ್ದೆಯಿಂದ ವಿಮುಕ್ತಿಗೊಳಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ರವರು ಆದೇಶಿಸಿದ್ದಾರೆ. ಆದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ರವರಿಗೆ ಕಳುಹಿಸಲಾಗಿದೆ.
ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ ಸ್ಥಾನದಿಂದ ವಿಮುಕ್ತಿಗೊಳಿಸಲು ಕಾರಣ ತಿಳಿಸಲಾಗಿಲ್ಲ. ಆದರೆ, ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯೊಂದರಲ್ಲಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವ ವಿಚಾರ ಪ್ರಸ್ತಾಪಿಸಿದ್ದ ಹೇಮನಾಥ ಶೆಟ್ಟಿಯವರು, ನನ್ನಲ್ಲಿ ದುಡ್ಡಿದೆ ಎಂದು ಡಿಕೆಶಿಯವರಿಂದ ಹಿಡಿದು ಎಲ್ಲರನ್ನು ಖರೀದಿ ಮಾಡಬಹುದು ನಮ್ಮನ್ನಲ್ಲ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪಕ್ಷದ ಕಾರ‍್ಯಕರ್ತರೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ದೂರು ಸಲ್ಲಿಸಿದ್ದರು. ಇದರ ಪರಿಣಾಮ ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.