ಪುತ್ತೂರು: ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು, ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಡಿಸೆಂಬರ್ 10ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಗೌಡ ಆರ್.ಪಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ಸಮಿತಿ, ಪುತ್ತೂರು ವಕೀಲರ ಸಂಘ ಮತ್ತು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಡಿ.10ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. 2022ರ ಮಾನವ ಹಕ್ಕುಗಳ ದಿನದ ಥೀಮ್ ’ಘನತೆ, ಸ್ವಾತಂತ್ರ್ಯ ಮತ್ತು ಎಲ್ಲರಿಗೂ ನ್ಯಾಯ’ ಎನ್ನುವುದಾಗಿದೆ. ಮಾನವ ಹಕ್ಕುಗಳ ಕುರಿತು ವಿದ್ಯಾರ್ಥಿಗಳು ಅರಿತು ಕೊಳ್ಳುವುದು ಮುಖ್ಯ. ಮಾನವ ಹಕ್ಕುಗಳ ಮೂಲತಃ ಉದ್ದೇಶ ಏನು, ಎಲ್ಲಿಂದ ಬಂದದ್ದು, ಇದು ಯಾಕಾಗಿ ಅವಶ್ಯಕತೆ ಇದೆ ಎಂಬುದನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮನೋಹರ್ ಎ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪ್ಯಾನಲ್ ವಕೀಲ ಗೌರೀಶ್ ಕೆ, ಉಪಪ್ರಾಂಶಪಾಲ ವಸಂತ ಮೂಲ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ಕಾರ್ಯಕ್ರಮ ಸಂಯೋಜಿಸಿದರು. ಜಾನ್ ಅವರು ವಂದಿಸಿದರು.