ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

0

ಪುತ್ತೂರು ನಗರದಿಂದ ಬಪ್ಪಳಿಗೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾರತೀಯ ಸೇನೆಯಿಂದ ಇತ್ತೀಚೆಗೆ ನಿವೃತ್ತಿಗೊಂಡ ಯೋಧ ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಡಿ.10ರಂದು  ಕಾರ್ಯಕ್ರಮ ಆಯೋಜನೆಗೊಂಡಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ವಿಶ್ವನಾಥ ಶೆಣೈ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ದೊರಕುವುದೇ ಒಂದು ಅಪೂರ್ವ ಸಂಗತಿ. ಇತ್ತೀಚೆಗೆ ಅಗ್ನಿವೀರ್ ಎಂಬ ಯೋಜನೆಯ ಮೂಲಕ ಯುವಶಕ್ತಿ ಭಾರತೀಯ ಸೈನ್ಯವನ್ನು ಸೇರಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರಲ್ಲದೆ ಈಚೆಗಿನ ದಿನಗಳಲ್ಲಿ ರಾಷ್ಟ್ರದ ಗಡಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಾವಿಂದು ಸುಖವಾದ ಜೀವನ ಸಾಗಿಸುವಲ್ಲಿ ವೀರಯೋಧರ ತ್ಯಾಗವಿದೆ. ಹೆತ್ತ ತಂದೆತಾಯಿಗಿಂತ, ಮಡದಿ ಮಕ್ಕಳಿಗಿಂತಲೂ ದೇಶವೇ ಮುಖ್ಯ ಎಂಬ ಭಾವನೆಯಿಂದ ರಾಷ್ಟ್ರಕ್ಕಾಗಿಯೇ ತನ್ನನ್ನು ತಾನು ಸಮರ್ಪಿಸುವ ಯೋಧನಿಗೆ ಗೌರವ ನೀಡಬೇಕಾದದ್ದು ಭಾರತೀಯರೆಲ್ಲರ ಕರ್ತವ್ಯ. ಪ್ರತಿಯೊಬ್ಬನೂ ದೇಶದ ವೀರ ಯೋಧ ತಾನಾಗುವುದಕ್ಕೆ ಸಾಧ್ಯವೇ ಎಂದು ಕೇಳಿಕೊಳ್ಳಬೇಕಿದೆ. ತನ್ಮೂಲಕ ಭಾರತಾಂಬೆಯ ಸೇವೆಗೆ ಮನಮಾಡಬೇಕಿದೆ ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ನಿವೃತ್ತ ಯೋಧ ಸುಬೇದಾರ್ ರಮೇಶ್ ಬಾಬು ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಹವಾಲ್ದಾರ್ ವಿಶ್ವನಾಥ ಶೆಣೈ ಅವರ ಹೆತ್ತವರಾದ ನಂದಾವರ ಉಮೇಶ್ ಶೆಣೈ ಹಾಗೂ ಶ್ಯಾಮಲಾ ಶೆಣೈ, ಪತ್ನಿ ಶ್ರೀಮತಿ, ಪುತ್ರಿ ಓಮ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹವಾಲ್ದಾರ್ ವಿಶ್ವನಾಥ ಶೆಣೈ ದಂಪತಿಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಶಿಕ್ಷಕಿ ದಿವ್ಯ ಸ್ವಾಗತಿಸಿ, ಸುಜಯ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾಶ್ರೀ ಕೆ.ಎಸ್ ಹಾಗೂ ಶೃತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಪ್ಪಳಿಗೆಯ ಶ್ರೀಶಂಕರ ಸಭಾಭವನದವರೆಗೆ ತೆರೆದ ವಾಹನದಲ್ಲಿ ಹವಾಲ್ದಾರ್ ವಿಶ್ವನಾಥ ಶೆಣೈ ಅವರನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಹವಾಲ್ದಾರ್ ವಿಶ್ವನಾಥ ಶೆಣೈ ಕುಟುಂಬಸ್ಥರು ಹಾಗೂ ಸಾವಿರಾರು ಮಂದಿ ಅಂಬಿಕಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾದರು. ಮೆರವಣಿಗೆ ಹಾಗೂ ಕಾರ್ಯಕ್ರಮದುದ್ದಕ್ಕೂ ವಿದ್ಯಾರ್ಥಿಗಳು ಹಾಗೂ ನೆರೆದವರು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಮೊಳಗಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ನೀಡಿತು.

LEAVE A REPLY

Please enter your comment!
Please enter your name here