* ಕನ್ನಡ ಮಾಧ್ಯಮ ಶಾಲೆ ಉಳಿಸುವ ಕೆಲಸ ಆಗಬೇಕು: ಚನಿಲ
* ಮಕ್ಕಳಿಗೆ ಮೊಬೈಲ್ ನೀಡಬಾರದು-ಲೋಕೇಶ್ ಎಸ್.ಆರ್
* ಸರಕಾರಿ ಶಾಲೆಯಲ್ಲಿ ಬದುಕಿನ ಶಿಕ್ಷಣ-ರಾಜಾರಾಮ್ ಕೆ.ಬಿ
* ಇತರೇ ಶಾಲೆಗಳಿಂದಲೂ ಬೇಡಿಕೆ-ನವೀನ್ ಭಂಡಾರಿ
* ಮಠಂದೂರು ಶಾಸಕರಾಗಿರುವುದು ಸೌಭಾಗ್ಯ-ಶೌಕತ್:
* ಶಾಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು: ಚಂದ್ರಾವತಿ
ಹಿರೇಬಂಡಾಡಿ: ಹಿರೇಬಂಡಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಶಾಸಕರ, ಗ್ರಾಮ ಪಂಚಾಯಿತಿ ಹಾಗೂ ನರೇಗಾ ಅನುದಾನದಲ್ಲಿ ನಿರ್ಮಾಣಗೊಂಡ ಹವಾನಿಯಂತ್ರಿತ ಶಾಲಾ ಅಕ್ಷರದಾಸೋಹ ‘ಭೋಜನ ಶಾಲೆ’, ತರಗತಿ ಕೊಠಡಿಗಳ ಮತ್ತು ಶೌಚಾಲಯದ ಉದ್ಘಾಟನೆ ಹಾಗೂ ನೂತನ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮ ಡಿ.೧೦ರಂದು ಬೆಳಿಗ್ಗೆ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಭೋಜನ ಶಾಲೆ ಉದ್ಘಾಟಿಸಿ ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಶಾಲೆಗಳ ಅಭಿವೃದ್ಧಿಗೆ ೨೫ ಕೋಟಿ ರೂ.,ಅನುದಾನ ವಿನಿಯೋಗ ಮಾಡಲಾಗಿದೆ. ೧೧೧ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ೨೧೫ ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ೬೦ ಕ್ಕಿಂತ ಹೆಚ್ಚು ಶಾಲೆಗಳಿಗೆ ಆರ್‌ಸಿಸಿ ಕಟ್ಟಡ, ೧೪ ಅಂಗನವಾಡಿಗಳಿಗೆ ಹೊಸ ಕಟ್ಟಡ, ಪೀಠೋಪಕರಣ, ಆಟದ ಮೈದಾನ, ಆವರಣಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಲಾಗಿದೆ, ಐಟಿಐ, ಪ್ರಥಮ ದರ್ಜೆ, ಜೂನಿಯರ್ ಕಾಲೇಜುಗಳ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಹಿರೇಬಂಡಾಡಿ ಗ್ರಾಮಕ್ಕೆ ೧೮ ಕೋಟಿ ರೂ.,ಅನುದಾನ:
ಶಾಸಕನಾದ ಬಳಿಕ ಹಿರೇಬಂಡಾಡಿ ಗ್ರಾಮಕ್ಕೆ ಅಂದಾಜು ೧೮ ಕೋಟಿ ರೂ,ಅನುದಾನ ನೀಡಲಾಗಿದೆ. ಊರಿನ ಜನರ ಅಭಿಮಾನಕ್ಕೆ ಪೂರಕವಾಗಿ ತನ್ನ ಊರಿನ ಸರ್ವಾಂಗೀಣ ಅಭಿವೃದ್ಧಿಗೆ ಈ ಅನುದಾನ ನೀಡಲಾಗಿದೆ. ಈ ಮಧ್ಯೆ ಶಾಲಾ ಕಟ್ಟಡಕ್ಕೆ ಸರಕಾರದ ಅನುದಾನ ಬಂದಿದೆ. ಯಾಕೆ ಸನ್ಮಾನ ಎಂಬ ಮಾತು ವಾಟ್ಸಫ್‌ಗಳಲ್ಲಿ ಹರಿದಾಡುತಿತ್ತು. ೬೦ ವರ್ಷದಲ್ಲಿ ಹಿರೇಬಂಡಾಡಿ ಶಾಲೆಯಲ್ಲಿ ಇಂತಹ ಎ.ಸಿ.ರೂಮ್ ಮಾಡಲು ಯಾರಿಗೂ ಆಗಿಲ್ಲ, ಕಟ್ಟಡ, ಶೌಚಾಲಯ ಆಗಿಲ್ಲ ಎಂಬುದನ್ನು ಟೀಕಿಸುವವರು ಗಮನಿಸಬೇಕು. ಒಬ್ಬರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಗೌರವ ಬರುತ್ತದೆ. ಸಂಜೀವ ಮಠಂದೂರುಗೆ ಅಲ್ಲ. ಸನ್ಮಾನ ಮಾಡುವುದರಿಂದ ಮುಂದೆಯೂ ಒಂದಷ್ಟು ಕೊಡುಗೆ ಕೊಡಬೇಕು ಎನ್ನುವ ಸಂದೇಶ ನೀಡುವ ಕೆಲಸ ಆಗಿದೆ ಎಂದು ಮಠಂದೂರು ಹೇಳಿದರು
ಅಭಿವೃದ್ಧಿಯಲ್ಲಿ ಪ್ರಥಮ:
ಬಹಳಷ್ಟು ವರ್ಷಗಳ ಹಿಂದೆ ಹಿರೇಬಂಡಾಡಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ವೇಳೆ ಶಾಲೆಗೆ ೬ ಕೊಠಡಿ ನಿರ್ಮಾಣ ಮಾಡಿದ್ದೆ. ಈ ಸಂದರ್ಭದಲ್ಲಿ ಅಭಿವೃದ್ಧಿಯಲ್ಲಿ ಹಿರೇಬಂಡಾಡಿ ಶಾಲೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ೫೨೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು. ಶಾಲೆಯ ಕೊಠಡಿ ನಿರ್ಮಾಣದ ಸಂದರ್ಭದಲ್ಲಿ ಹಿರಿಯರಾದ ಪೆರ್ನು ಗೌಡ, ಬಂಡಾಡಿ ಬಾಬು ಗೌಡ, ಕೊರಗಪ್ಪ ಶೆಟ್ಟಿ, ಎಲ್ಯಣ್ಣ, ಜತ್ತಣ್ಣ ಗೌಡ ಮತ್ತಿತರರು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ಬೆನ್ನು ತಟ್ಟಿದ್ದರು. ಇವರ ಪ್ರೋತ್ಸಾಹದಿಂದಲೇ ನಾನು ಮತ್ತೆ ಮತ್ತೆ ಮೇಲಕ್ಕೇರಲು ಸಾಧ್ಯವಾಯಿತು ಎಂದು ಸಂಜೀವ ಮಠಂದೂರು ನೆನಪಿಸಿಕೊಂಡರು. ಇದೀಗ ಹಿರೇಬಂಡಾಡಿಯ ಸರಕಾರಿ ಶಾಲೆ ಹೊಸತನ, ಹೊಸಮೆರಗು ಪಡೆದುಕೊಂಡಿದೆ. ಮುಂದೆ ರಾಜ್ಯದಲ್ಲಿಯೇ ವಿಶಿಷ್ಠ ಶಾಲೆಯಾಗಿ ಗುರುತಿಸಿಕೊಳ್ಳುವಂತಾಗಲಿ ಎಂದು ಅವರು ಹೇಳಿದರು.
ಕನ್ನಡ ಮಾಧ್ಯಮ ಶಾಲೆ ಉಳಿಸುವ ಕೆಲಸ ಆಗಬೇಕು- ಚನಿಲ:
ಮುಖ್ಯ ಅತಿಥಿಯಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಸರಕಾರಿ ಶಾಲೆಯೊಂದರಲ್ಲಿ ಹವಾನಿಯಂತ್ರಿತ ಭೋಜನ ಶಾಲೆ ಹಿರೇಬಂಡಾಡಿ ಶಾಲೆಯಲ್ಲಿ ನಿರ್ಮಾಣಗೊಂಡಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಖಾಸಗಿ ಶಾಲೆಗಳಲ್ಲಿರುವಂತೆ ಕಲಿಕೆಗೆ ಪೂರಕವಾಗಿರುವ ವ್ಯವಸ್ಥೆಯನ್ನು ಸರಕಾರಿ ಶಾಲೆಯಲ್ಲೂ ಮಾಡುವ ಕೆಲಸ ಇಲ್ಲಿನ ಶಾಸಕರು, ಪಂಚಾಯತ್ ಹಾಗೂ ಊರಿನವರಿಂದ ಆಗಿದೆ. ಈಗ ಬಹುತೇಕ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ರಾಜಕೀಯ, ಸಾಮಾಜಿಕವಾಗಿ ಉನ್ನತ ಹುದ್ದೆಯಲ್ಲಿರುವವರೆಲ್ಲರೂ ಸರಕಾರಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಕಲಿತವರು. ಆದ್ದರಿಂದ ಸರಕಾರಿ, ಕನ್ನಡ ಮಾಧ್ಯಮ ಶಾಲೆ ಉಳಿಸುವ ಕೆಲಸ ನಾವೇ ಮಾಡಬೇಕು. ಊರಿನ ಅಭಿವೃದ್ಧಿಯ ಇಚ್ಛಾಶಕ್ತಿಯೂ ನಮಗೆ ಬೇಕು ಎಂದರು.
ಮಕ್ಕಳಿಗೆ ಮೊಬೈಲ್ ನೀಡಬಾರದು-ಲೋಕೇಶ್ ಎಸ್.ಆರ್:
ಇನ್ನೋರ್ವ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ಮಕ್ಕಳಿಗೆ ವಿದ್ಯೆ ಕಲಿಸುವ ಜವಾಬ್ದಾರಿ ಶಿಕ್ಷಕರಿಗೆ ಮಾತ್ರವಲ್ಲ. ಪೋಷಕರಿಗೂ ಇದೆ. ಪೋಷಕರ ಸಹಕಾರ ದೊರೆತಲ್ಲಿ ಸರಕಾರಿ ಶಾಲೆಗಳಲ್ಲೂ ಉತ್ತಮ ವ್ಯವಸ್ಥೆ ಸಿಗಲು ಸಾಧ್ಯವಿದೆ. ಪೋಷಕರಲ್ಲಿನ ಇಂಗ್ಲಿಷ್ ವ್ಯಾಮೋಹದಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಕರಿದ್ದಾರೆ. ಶಿಕ್ಷಕರಿಗೆ ತರಬೇತಿ, ಹೊಸ ಹೊಸ ಚಟುವಟಿಕೆಗಳ ಮೂಲಕ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಬಿಸಿಯೂಟ, ಸಮವಸ್ತ್ರ ಸೇರಿದಂತೆ ಎಲ್ಲಾ ಸವಲತ್ತೂ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಮೊಬೈಲ್ ಹೆಚ್ಚು ಬಳಕೆಯಿಂದ ಸಣ್ಣ ಮಕ್ಕಳು ಡಿಪ್ರೇಷನ್‌ಗೆ ಹೋಗುತ್ತಾರೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ನೀಡಬಾರದು ಎಂದರು.
ಸರಕಾರಿ ಶಾಲೆಯಲ್ಲಿ ಬದುಕಿನ ಶಿಕ್ಷಣ-ರಾಜಾರಾಮ್ ಕೆ.ಬಿ:
ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್‌ನ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ.ಮಾತನಾಡಿ, ಸರಕಾರಿ ಶಾಲೆಯಲ್ಲಿ ಮೌಲ್ಯಾಧರಿತ ಶಿಕ್ಷಣದ ಜೊತೆಗೆ ಬದುಕಲು ಕಲಿಯುವ ಶಿಕ್ಷಣವೂ ಸಿಗುತ್ತಿದೆ. ಇಂತಹ ಶಿಕ್ಷಣ ಆಂಗ್ಲಮಾಧ್ಯಮ ಶಾಲೆ, ಪೇಟೆ ಪಟ್ಟಣಗಳಲ್ಲಿನ ಶಾಲೆಗಳಲ್ಲಿ ಸಿಗಲು ಸಾಧ್ಯವಿಲ್ಲ. ಶಾಲೆ ಸರ್ವ ಜನಾಂಗದ ಶಾಂತಿಯ ತೋಟ. ಈ ಉದ್ಯಾನವನದಲ್ಲಿರುವ ಮಕ್ಕಳು ಮಂದಾರ ಪುಷ್ಪಗಳಾಗಬೇಕು. ಹಿರೇಬಂಡಾಡಿ ಶಾಲೆಯು ಶಾಸಕರ, ಗ್ರಾಮ ಪಂಚಾಯತ್‌ನವರ ಪ್ರೋತ್ಸಾಹದಿಂದ ಉತ್ತಮ ಶಾಲೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.
ಇತರೇ ಶಾಲೆಗಳಿಂದಲೂ ಬೇಡಿಕೆ-ನವೀನ್ ಭಂಡಾರಿ:
ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ, ನರೇಗಾ ಯೋಜನೆಯಡಿ ಭೋಜನ ಶಾಲೆ ನಿರ್ಮಾಣಕ್ಕೆ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ೩೦ ಲಕ್ಷ ರೂ.,ಖರ್ಚು ಮಾಡಿರುವುದು ರಾಜ್ಯದಲ್ಲಿಯೇ ಪ್ರಥಮ ಆಗಿದೆ. ಇದರ ಹಿಂದೆ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿಯವರ ಶ್ರಮ ಇದೆ. ಹಿರೇಬಂಡಾಡಿ ಶಾಲೆಯಲ್ಲಿರುವಂತಹ ಭೋಜನ ಶಾಲೆ ಮಾಡಿಕೊಡಿ ಎಂದು ಇತರೇ ಶಾಲೆಗಳಿಂದಲೂ ಬೇಡಿಕೆ ಬರುತ್ತಿದೆ. ಸಹಕಾರ ನೀಡಲು ನಾವು ಬದ್ಧರಿದ್ದೇವೆ ಎಂದರು.
ಮಠಂದೂರು ಶಾಸಕರಾಗಿರುವುದು ಸೌಭಾಗ್ಯ-ಶೌಕತ್:
ಸನ್ಮಾನಿತರಾದ ಹಿರೇಬಂಡಾಡಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ೭ ವರ್ಷಗಳ ಅವಧಿಯಲ್ಲಿ ದ.ಕ., ಕೊಡಗು ಹಾಗೂ ಉಡುಪಿ ಜಿಲ್ಲೆಗಳ ಪೈಕಿ ಅತೀ ಹೆಚ್ಚು ಅನುದಾನ ಹಿರೇಬಂಡಾಡಿ ಗ್ರಾಮ ಪಂಚಾಯಿತಿಯಲ್ಲಿ ಬಳಕೆ ಆಗಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಮಕ್ಕೆ ರೂ.೧೮ ಕೋಟಿಗೂ ಹೆಚ್ಚು ಅನುದಾನ ನೀಡಿದ್ದಾರೆ. ಹಿರೇಬಂಡಾಡಿ ಗ್ರಾಮದವರೇ ಈ ಹಿಂದೆ ಎರಡು ಸಲ ಶಾಸಕರಾಗಿದ್ದರೂ ಈ ರೀತಿಯ ಅನುದಾನ ಬಂದಿಲ್ಲ. ಆದರೆ ಸಂಜೀವ ಮಠಂದೂರುರವರು ಅಭಿವೃದ್ಧಿಯ ಮೂಲಕ ಸಂಚಲನ ಮೂಡಿಸಿದ್ದಾರೆ. ಅವರು ಶಾಸಕರಾಗಿ ಆಯ್ಕೆಯಾಗಿರುವುದು ನಮ್ಮ ಸೌಭಾಗ್ಯ. ಅವರೇ ಮತ್ತೆ ಶಾಸಕರಾಗಿ ಮುಂದುವರಿಯಲು ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿಸೀತಾರಾಮ ಗೌಡ ಮಾತನಾಡಿ, ಸರಕಾರಿ ಶಾಲೆಯೊಂದರಲ್ಲಿ ಹವಾನಿಯಂತ್ರಿತ ಭೋಜನ ಶಾಲೆ ನಿರ್ಮಾಣಗೊಂಡಿರುವುದು ಖುಷಿ ತಂದಿದೆ. ಇದರ ನಿರ್ಮಾಣದ ಹಿಂದೆ ನಿಕಟಪೂರ್ವ ಅಧ್ಯಕ್ಷರಾದ ಶೌಕತ್ ಆಲಿಯವರು ಬಹಳಷ್ಟು ಶ್ರಮಪಟ್ಟಿದ್ದಾರೆ. ಗ್ರಾಮ ಪಂಚಾಯತ್‌ನಿಂದ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಾಲೆಯ ಅಭಿವೃದ್ಧಿಯಾದಲ್ಲಿ ಗ್ರಾಮವೇ ಅಭಿವೃದ್ಧಿಯಾದಂತೆ. ಆದ್ದರಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು. ಸಹಾಯಕ ಇಂಜಿನಿಯರ್ ಸಂದೀಪ್, ಹಿರೇಬಂಡಾಡಿ ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ, ಪಿಡಿಒ ದಿನೇಶ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಭಾವತಿ ವರದಿ ಮಂಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸೋಮೇಶ್ ಕೆ.,ಸ್ವಾಗತಿಸಿದರು. ಮುಖ್ಯಶಿಕ್ಷಕ ಬಾಬು ಟಿ.ವಂದಿಸಿದರು. ಶಿಕ್ಷಕ ಕೃಷ್ಣಮೂರ್ತಿ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಬೆಳಿಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಸೋಮೇಶ್ ಕೆ.,ಧ್ವಜಾರೋಹಣ ನೆರವೇರಿಸಿದರು.
೧೯೭೪ರಲ್ಲಿ ಈ ಶಾಲೆಯ ಮುಖ್ಯಮಂತ್ರಿಯಾಗಿದ್ದೆ….
ಹಿರೇಬಂಡಾಡಿ ಸರಕಾರಿ ಶಾಲೆಯ ಹಳೆವಿದ್ಯಾರ್ಥಿಯೂ ಆಗಿರುವ ಶಾಸಕ ಸಂಜೀವ ಮಠಂದೂರುರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೆನಪಿಸಿಕೊಂಡರು. ೧೯೭೪ರಲ್ಲಿ ಈ ಶಾಲೆಯ ಮುಖ್ಯಮಂತ್ರಿಯಾಗಿದ್ದೆ. ಶಾಲೆಯ ಸೇವಾದಳದ ಲೀಡರ್ ಆಗಿ ಇತರೇ ವಿದ್ಯಾರ್ಥಿಗಳ ಜೊತೆಗೆ ಮೈಸೂರಿಗೆ ಹೋಗಿದ್ದೆ. ಮೈಸೂರಿನಲ್ಲಿ ಸೇವಾದಳದ ಅಧ್ಯಾಪಕರಾಗಿದ್ದ ರಝಾಕ್ ಮಾಸ್ಟರ್‌ರವರಿಗೆ ತಿಳಿಸದೇ ಜೊತೆಗೆ ಬಂದಿದ್ದ ಇತರೇ ವಿದ್ಯಾರ್ಥಿಗಳನ್ನು ಮೈಸೂರಿನ ದೇವರಾಜ ಅರಸು ಮಾರ್ಕೆಟ್‌ಗೆ ಕರೆದುಕೊಂಡು ಹೋಗಿದ್ದೆ. ಮಾರ್ಕೆಟ್‌ನಿಂದ ವಾಪಸು ಬರುವ ವೇಳೆ ಬೆತ್ತ ಸಿದ್ಧವಾಗಿತ್ತು. ರಝಾಕ್ ಮಾಸ್ಟರ್‌ರವರು ಎಲ್ಲಾ ಮಾಡುವುದು ನೀನು ಎಂದು ಮೊದಲು ನನಗೆ ಪೆಟ್ಟು ಕೊಟ್ಟಿದ್ದರು. ಮೈಸೂರಿನಲ್ಲಿ ಅಂದು ಪೆಟ್ಟು ತಿಂದ ಪರಿಣಾಮ ಇಂದು ಶಾಸಕನಾಗಿದ್ದೇನೆ. ಹಿರೇಬಂಡಾಡಿ ಶಾಲೆಯ ಕ್ಲಾಸ್ ರೂಮ್‌ಗಳಲ್ಲಿ ಪೆಟ್ಟು ತಿಂದಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ನೆನಪಿಸಿಕೊಂಡರು.
ಜಿಲ್ಲೆಯ ಮೊದಲ ಎ.ಸಿ.ಭೋಜನ ಶಾಲೆ:
ಶಾಲಾ ಅಕ್ಷರದಾಸೋಹ ‘ ಭೋಜನೆ ಶಾಲೆ’ ಹವಾನಿಯಂತ್ರಿತ ಆಗಿದ್ದು ಇದು ದ.ಕ.ಜಿಲ್ಲೆಯಲ್ಲಿ ಪ್ರಥಮ ಆಗಿದೆ.
೧.೨೨ ಕೋಟಿ ರೂ.,
ಒಟ್ಟು ೧.೨೨ ಕೋಟಿ ರೂ.,ವೆಚ್ಚದ ಕಾಮಗಾರಿ ಉದ್ಘಾಟಿಸಲಾಯಿತು. ನರೇಗಾ ಯೋಜನೆಯ ರೂ.೩೦ ಲಕ್ಷ ಹಾಗೂ ಶಾಸಕರ ೨೫ ಲಕ್ಷ ರೂ.,ಅನುದಾನದಲ್ಲಿ ನಿರ್ಮಾಣಗೊಂಡ ಶಾಲಾ ಅಕ್ಷರದಾಸೋಹ ‘ ಭೋಜನ ಶಾಲೆ’, ಶಾಸಕರ ೪೦ ಲಕ್ಷ ರೂ.,ಅನುದಾನದಲ್ಲಿ ನಿರ್ಮಾಣಗೊಂಡ ತರಗತಿ ಕೊಠಡಿ, ಗ್ರಾಮ ಪಂಚಾಯಿತಿಯ ೧೪ ಮತ್ತು ೧೫ನೇ ಹಣಕಾಸು ಹಾಗೂ ನರೇಗಾ ಯೋಜನೆಯ ಒಟ್ಟು ೧೬ ಲಕ್ಷ ರೂ.,ಅನುದಾನದಲ್ಲಿ ನಿರ್ಮಾಣಗೊಂಡ ಶೌಚಾಲಯ, ೧೪ನೇ ಹಣಕಾಸು ಹಾಗೂ ನರೇಗಾ ಯೋಜನೆಯ ೩ ಲಕ್ಷ ರೂ.,ಅನುದಾನದಲ್ಲಿ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಯ ಉದ್ಘಾಟನೆ ನಡೆಯಿತು.
ಸನ್ಮಾನ:
ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಪುತ್ತೂರು ಶಾಸಕ ಸಂಜೀವ ಮಠಂದೂರು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ, ಹಾಲಿ ಅಧ್ಯಕ್ಷೆ ಚಂದ್ರಾವತಿಸೀತಾರಾಮ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ೧೯ ವರ್ಷ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಶಾರದಾ ಎಲಿಯ ಅವರಿಗೆ ಶಾಲು, ಹಾರಾರ್ಪಣೆ, ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಬಾಬು ಟಿ., ಶಿಕ್ಷಕಿ ಪ್ರಭಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ವಾರಿಜ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಸ್ಮರಣಿಕೆ ನೀಡಿ ಗೌರವ:
ಎಸ್‌ಡಿಎಂಸಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಉಮೇಶ್ ನಾಯಕ್, ಶಾಂಭವಿ, ಲತಾಹೊಸಮನೆ, ಉಮ್ಮರ್ ಕುಂಞಿ ಅವರಿಗೆ ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು. ಗುತ್ತಿಗೆದಾರ ಪ್ರಸಾದ್‌ರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಕಲಿಕೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.