ಪುತ್ತೂರು: ಸುಮಾರು 300 ವರ್ಷಗಳ ಇತಿಹಾಸವಿರುವ ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜೀರ್ಣೋದ್ಧಾರದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಸಡಗರ, ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ.
ಈ ಕ್ಷೇತ್ರವು ಮಾಣಿ-ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಿಂದ ಮುಂಡೂರು-ತಿಂಗಳಾಡಿ ರಸ್ತೆಯಲ್ಲಿ 4 ಕೀ.ಮಿ. ಸಂಚರಿಸಿ ಪಂಜಳದಿಂದ ಪರ್ಪುಂಜ ರಸ್ತೆಯಲ್ಲಿ ಸುಮಾರು 1 ಕಿ.ಮೀ ಸಂಚರಿಸಿದಾಗ ಸಿಗುವ ಪ್ರಕೃತಿ ರಮಣಿಯ ಪರಿಸರದಲ್ಲಿದೆ. ಇಲ್ಲಿ ವಿಷ್ಣುಮೂರ್ತಿ ಪ್ರಧಾನ ದೈವವಾಗಿ ಮತ್ತು ಗುಳಿಗ ಸಾನಿಧ್ಯವೂ ಇದೆ. ಶ್ರೀ ಕ್ಷೇತ್ರವು ಕುರಿಯ, ಕೆಮ್ಮಿಂಜೆ, ಮುಂಡೂರು ಹಾಗೂ ನರಿಮೊಗರು ಗ್ರಾಮದ ವ್ಯಾಪ್ತಿಗೆ ಸಂಬಂಧಿಸಿರುವುದಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ.
ಕಾರಣಿಕ ಕ್ಷೇತ್ರ ಅಜಲಾಡಿ ಉದಯಗಿರಿ…!: ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನವು ಪುರಾತನ ಕಾರಣಿಕ ಕ್ಷೇತ್ರ. ನಾನಾ ರೀತಿಯ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ದೈವಸ್ಥಾನದ ಮುಂದೆ ನಿಂತು ಪ್ರಾರ್ಥಿಸಿಕೊಂಡಾಗ ಖಾಯಿಲೆಗಳು ಶೀಘ್ರ ಗುಣಮುಖಗೊಂಡಿರುವ ಉದಾಹರಣೆಗಳಿವೆ. ಅಲ್ಲದೆ ಸಮೀಪದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕೆಟ್ಟು ನಿಂತು, ಹೂತು ಹೋದ ಸಂದರ್ಭದಲ್ಲಿ ದೈವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದಾಗ ವಾಹನ ಯಾವುದೇ ತೊಂದರೆ ಇಲ್ಲದೆ ಸಂಚರಿಸಿದ ನಿದರ್ಶನಗಳೂ ಇವೆ. ಇಲ್ಲಿನ ದೈವಕ್ಕೆ ಬೆಳ್ಳಿಯ ಹೊಸ ಮೊಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಟ್ಸಪ್‌ಗಳಲ್ಲಿ ಕಳುಹಿಸಿರುವ ಸಂದೇಶಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತು ಸುಮಾರು 3 ಕೆ.ಜಿ. ಯಷ್ಟು ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೆ ಪ್ರತಿ ವರ್ಷ ನಡೆಯುವ ಒತ್ತೆಕೋಲದ ಸಂದರ್ಭದಲ್ಲಿ ಸಮಾರು 5000 ಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಳ್ಳುತ್ತಿರುವುದು ಈ ಕ್ಷೇತ್ರದ ಇನ್ನೊಂದು ಕಾರಣಿಕ, ಮಹಿಮೆಯೇ ಆಗಿದೆ ಎನ್ನುತ್ತಾರೆ ಇಲ್ಲಿನ ಭಕ್ತಾದಿಗಳು.
ರೂ.50ಲಕ್ಷದಲ್ಲಿ ಜೀಣೋದ್ಧಾರ ಕಾಮಗಾರಿ:
ಕ್ಷೇತ್ರದಲ್ಲಿ ಪ್ರಮುಖವಾಗಿ ತಾಮ್ರದ ಹೊದಿಕೆಯೊಂದಿಗೆ ವಿಷ್ಣುಮೂರ್ತಿ ದೈವಸ್ಥಾನ, ಗುಳಿಗ ದೈವದ ಕಟ್ಟೆ, ತೀರ್ಥಬಾವಿ, ಆಡಳಿತ ಕಚೇರಿ ನಿರ್ಮಾಣಗೊಳ್ಳುತ್ತಿದೆ ಭಕ್ತರ ಅನುಕೂಲತೆಗಾಗಿ ದೈವಸ್ಥಾನದ ಮುಂಭಾಗದಲ್ಲಿ ಶೀಟ್‌ನ ಛಾವಣಿ, ಇಂಟರ್‌ಲಾಕ್ ಅಳವಡಿಕೆ, ಸ್ಟೀಲ್ ರೈಲಿಂಗ್ಸ್, ದೈವಸ್ಥಾನದ ಸುತ್ತ ತಡೆಗೋಡೆ, ಆವರಣಗೋಡೆ, ಶಾಶ್ವತ ರಸ್ತೆ ನಿರ್ಮಾಣ ಸೇರಿದಂತೆ ಸಮಗ್ರ ಜೀರ್ಣೋದ್ಧಾರದ ಕಾಮಗಾರಿಗಳು ಸುಮಾರು ರೂ.50ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ಜೀಣೋದ್ಧಾರ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಬಹಳಷ್ಟು ಬಿರುಸಿನಿಂದ ನಡೆಯುತ್ತಿದೆ. ದೈವಸ್ಥಾನದ ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಡಾ.ಹರಿಕೃಷ್ಣ ಪಾಣಾಜೆ, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿಯಾಗಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ಒತ್ತೆಕೋಲ ಸಮಿತಿ ಅಧ್ಯಕ್ಷರಾಗಿ ಭಾಸ್ಕರ ಆಚಾರ್ ಹಿಂದಾರ್ ಹಾಗೂ ಕಾರ್ಯದರ್ಶಿಯಾಗಿ ಸದಾಶಿವ ಶೆಟ್ಟಿ ಪಟ್ಟೆ ಕಾರ್ಯನಿರ್ವಹಿಸುತ್ತಿದ್ದಾರೆ.
60 ದಿನದಲ್ಲಿ ರೂ.60ಲಕ್ಷದಲ್ಲಿ ಜೀರ್ಣೋದ್ಧಾರ- ಹೊಸ ಇತಿಹಾಸ ಸೃಷ್ಠಿಸಿದ ದೈವಸ್ಥಾನ :
ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳಿಗೆ ಚಾಲನೆ ದೊರೆತು ಕೇವಲ 60 ದಿನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಈ 60 ದಿನದಲ್ಲಿ ತಾಮ್ರದ ಹೊದಿಕೆಯೊಂದಿಗೆ ವಿಷ್ಣುಮೂರ್ತಿ ದೈವಸ್ಥಾನ, ಗುಳಿಗ ದೈವದ ಕಟ್ಟೆ, ತೀರ್ಥಬಾವಿ, ಆಡಳಿತ ಕಚೇರಿ, ಶೀಟ್‌ನ ಛಾವಣಿ, ಇಂಟರ್‌ಲಾಕ್ ಅಳವಡಿಕೆ, ಸ್ಟೀಲ್ ರೈಲಿಂಗ್ಸ್, ದೈವಸ್ಥಾನದ ಸುತ್ತ ತಡೆಗೋಡೆ, ಆವರಣಗೋಡೆ, ಶಾಶ್ವತ ರಸ್ತೆ ನಿರ್ಮಾಣ ಸೇರಿದಂತೆ ಸಮಗ್ರ ಜೀರ್ಣೋದ್ಧಾರದ ಕಾಮಗಾರಿ ಹಾಗೂ ಬ್ರಹ್ಮಕಲಶೋತ್ಸವಗಳು ಸುಮಾರು ರೂ.60ಲಕ್ಷ ವೆಚ್ಚದಲ್ಲಿ ಕೇವಲ 60 ದಿನದಲ್ಲಿ ಪೂರ್ಣಗೊಳ್ಳುತ್ತಿದೆ. ಜೀರ್ಣೋದ್ಧಾರಕ್ಕೆ ಚಾಲನೆ ದೊರೆತು ಕೇವಲ 60 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ಅಜಲಾಡಿ ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನ ಹೊಸ ಇತಿಹಾಸ ಸೃಷ್ಠಿಸುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಕರಸೇವಕರಿಂದ ನಿರಂತರ ಸೇವೆ:
ದೈವಸ್ಥಾನದದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾದ ದಿನಗಳಿಂದ ಪ್ರತಿದಿನ ಗ್ರಾಮದ ಪ್ರತಿ ಮನೆಗಳ ಸದಸ್ಯರು ಕರಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ನಡೆಯುವ ಕರಸೇವೆಯಲ್ಲಿ 50-60 ಮಂದಿ ಭಕ್ತಾದಿಗಳು ತಮ್ಮನ್ನು ನಿರಂತವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಮರ ದೇಣಿಗೆ:
ದೈವಸ್ಥಾನದ ನಿರ್ಮಾಣಕ್ಕೆ ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ರಾಮಣ್ಣ ಗೌಡ ಕೆಯ್ಯೂರು ಹಾಗೂ ಮುಂಡೂರು ಬದಿಯಡ್ಕ ಶ್ರೀ ಕೊರಗಜ್ಜ ಕ್ಷೇತ್ರದ ವತಿಯಿಂದ ಒಟ್ಟು ಸುಮಾರು ರೂ.8ಲಕ್ಷದ ಮರ ಮುಟ್ಟುಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ.
ಡಿ.30ರಿಂದ ಬ್ರಹ್ಮಕಲಶೋತ್ಸವ:
ದೈವಸ್ಥಾನದಲ್ಲಿ ಡಿ.30ರಿಂದ ಜ. 2ರ ತನಕ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವಗಳು ಪ್ರಾರಂಭಗೊಳ್ಳಲಿದೆ. ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದೆ. ಕಾಮಗಾರಿಗಳಿಗೆ ಚಾಲನೆ ನೀಡಿ ಕೇವಲ 60 ದಿನದಲ್ಲಿ ರೂ.60ಲಕ್ಷದ ಕಾಮಗಾರಿಗಳು ನಡೆದು ಬ್ರಹ್ಮಕಲಶೋತ್ಸವ ನೆರವೇರಲಿದೆ. ಜೀರ್ಣೋದ್ಧಾರ ಕೆಲಸ ಊರ ಭಕ್ತಾದಿಗಳ ಸಹಕಾರ, ದಾನಿಗಳ ನೆರವಿನಿಂದ ಸಾಂಗವಾಗಿ ನಡೆಯುತ್ತಿದೆ. ಪ್ರತಿ ದಿನ 50-60 ಮಂದಿ ಕರಸೇವಕರು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮ ಯೋಜನೆ ಎಲ್ಲವೂ ಅಂದು ಕೊಂಡಂತೆ ನೆರವೇರಿದರೆ ಅಜಲಾಡಿ ವಿಷ್ಣುಮೂರ್ತಿ ದೈವಸ್ಥಾನ ಜಿಲ್ಲೆಯಲ್ಲಿಯೇ ಮಾದರಿ ದೈವಸ್ಥಾನವಾಗಲಿದೆ. ಈ ಭಾಗದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಈ ದೈವೀ ಸಾನಿಧ್ಯವು ಬೆಳಗಲಿದೆ.
-ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ
ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಯೋಚನೆ ಬಹಳ ಸಮಯಗಳಿಂದ ಇತ್ತು. ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಈಗ ಕಾಲ ಕೂಡಿಬಂದಿದ್ದು ಅಷ್ಡಮಂಗಲ ಚಿಂತನೆ ನಡೆಸಿ, ಅದರಲ್ಲಿ ಕಂಡು ಬಂದಂತೆ ಪರಿಹಾರ ಕಾರ್ಯಗಳನ್ನು ನಡೆಸಿ ಜೀರ್ಣೋದ್ಧಾರ ಕಾಮಗಾರಿಗಳು ಊರ ಭಕ್ತಾದಿಗಳ ಅವಿರತ ಸಹಕಾರ, ದಾನಿಗಳ ನೆರವಿನಿಂದ ಭರದಿಂದ ಸಾಗುತ್ತಿದೆ. ತಾಮ್ರದ ಹೊದಿಕೆಯ ದೈವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಡಿ.30ರಿಂದ ಜ.2ರ ತನಕ ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲ ನಡೆಯಲಿದೆ.
– ಭಾಸ್ಕರ ಆಚಾರ್ ಹಿಂದಾರು, ಅಧ್ಯಕ್ಷರು ಒತ್ತೆಕೋಲ ಸಮಿತಿ
ದೈವಸ್ಥಾನದ ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡುವ ಭಕ್ತಾದಿಗಳು ಬ್ಯಾಂಕ್ ಆಫ್ ಬರೋಡಾದ ದರ್ಬೆ ಶಾಖೆಯಲ್ಲಿರುವ ಉಳಿತಾಯ ಖಾತೆ ನಂ. 70820100014013ಗೆ IFSC:BARBOVJDAPU ಅಥವಾ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಖಾತೆ ನಂ.1656ಕ್ಕೆ ಪಾವತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9950266678 ಅಥವಾ 9743703517 ಸಂಪರ್ಕಿಸುವಂತೆ ದೈವಸ್ಥಾನದ ಪ್ರಕಟಣೆ ತಿಳಿಸಿದೆ.