ಗ್ರಾಮಕರಣಿಕರ ಹುದ್ದೆಯ ಹೆಸರು ಬದಲಾವಣೆ ಬದಲು ಹುದ್ದೆಗಳನ್ನು ಭರ್ತಿಗೊಳಿಸಲಿ

0

ಕಾಂಗ್ರೆಸ್ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾಧ್ಯಕ್ಷರ ಆಗ್ರಹ

ಪುತ್ತೂರು:ಯಾವುದೇ ಯೋಜನೆ,ಯೋಚನೆ ಇಲ್ಲದೆ ಆಡಳಿತ ನಡೆಸುತ್ತಿರುವ ರಾಜ್ಯದ ಬಿಜೆಪಿ ಸರಕಾರ ಇದೀಗ ಗ್ರಾಮಕರಣಿಕರ ಹೆಸರು ಬದಲಾವಣೆ ಮಾಡಲು ಹೊರಟಿರುವುದಕ್ಕೆ ಕಾಂಗ್ರೆಸ್ ಪಂಚಾಯತ್‌ರಾಜ್ ಘಟಕ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದರ ಉದ್ದೇಶದ ಬಗ್ಗೆ ಸಂಶಯ ಉಂಟಾಗಿದೆ ಎಂದು ಕಾಂಗ್ರೆಸ್ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಗ್ರಾಮದಲ್ಲಿ ಗ್ರಾಮಕರಣಿಕರುಗಳಿಗೆ ಅಧಿಕಾರ ಕೊಡುವುದಕ್ಕೆ ನಮ್ಮ ಆಕ್ಷೇಪವಿಲ್ಲ.ಅವರು ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಗೌರವ ಬೇಕು. ಅವರಿಗೆ ಅವರ ಇಲಾಖೆಯ ಒಳಗೆ `ಕಂದಾಯ ಆಡಳಿತಾಧಿಕಾರಿ’ ಎಂಬ ಹೆಸರಿನಲ್ಲಿ ಅಧಿಕಾರ ಕೊಟ್ಟರೂ ನಮ್ಮ ಅಭ್ಯಂತರವಿಲ್ಲ.ಆದರೆ ಅವರಿಗೆ `ಗ್ರಾಮದ ಆಡಳಿತಾಧಿಕಾರಿ’ ಎಂದು ಹೆಸರು ಬದಲಾಯಿಸಿ ಅಧಿಕಾರ ನೀಡುವ ಉದ್ದೇಶವೇನು ಎಂದು ಅರ್ಥವಾಗುತ್ತಿಲ್ಲ.ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸುಪ್ರೀಮ್, ತಾಲೂಕಿನಲ್ಲಿ ತಹಶೀಲ್ದಾರ್ ಸುಪ್ರೀಮ್, ಅದೇ ರೀತಿ ಮುಂದೆ ಗ್ರಾಮಗಳಲ್ಲಿ ಗ್ರಾಮದ ಆಡಳಿತ ಅಧಿಕಾರಿಗಳೇ ಸುಪ್ರೀಂ ಎಂದು ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ.ಇದು ಚುನಾವಣಾ ತಂತ್ರಗಾರಿಕೆ ಮಾತ್ರ ಆಗಿರುತ್ತದೆ ಎಂದು ಅವರು ಹೇಳಿದರು.

ಸರಕಾರ ಗ್ರಾಮಣಕರಣಿಕರ ಹುದ್ದೆಯ ಹೆಸರು ಬದಲಾವಣೆ ಮಾಡುವ ಮೊದಲು ಜಿಲ್ಲೆಯಲ್ಲಿ ಎಷ್ಟೋ ಗ್ರಾಮಕರಣಿಕರ ಹುದ್ದೆ ಖಾಲಿ ಇದ್ದು, ಅದನ್ನು ಭರ್ತಿ ಮಾಡಿ ಅವರ ಹೊಣೆಯನ್ನು ಕಡಿಮೆ ಮಾಡುವ ಕೆಲಸ ಮಾಡಿ.ಆಗ ಅವರಿಗೆ ಮನಶಾಂತಿ ಉಂಟಾಗುತ್ತದೆ ಎಂದು ಹೇಳಿದರು.ದಿ. ಅಬ್ದುಲ್ ನಝೀರ್ ಸಾಬ್ ಅವರು ಜಿಲ್ಲಾ ಪಂಚಾಯತ್‌ನ್ನು ಪರಿಚಯಿಸುವಾಗ ಜಿಲ್ಲಾ ಪರಿಷತ್‌ನ್ನು ಜಿಲ್ಲೆಯ ಸರಕಾರ ಎಂದು ಜಿಲ್ಲೆಯ ಅಧ್ಯಕ್ಷರನ್ನು ಜಿಲ್ಲೆಯ ಮುಖ್ಯಮಂತ್ರಿ ಎಂದು, ತಾ.ಪಂ ಅಧ್ಯಕ್ಷರನ್ನು ತಾಲೂಕಿನ ಮುಖ್ಯಮಂತ್ರಿ ಎಂದು ಗ್ರಾ.ಪಂ ಮಂಡಲ ಪ್ರಧಾನರನ್ನು ಗ್ರಾಮದ ಮುಖ್ಯಮಂತ್ರಿಯೆಂದು ಹುದ್ದೆಗೆ ಗೌರವ ಇತ್ತು.ಬರಬರುತ್ತಾ ಇವತ್ತು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾ.ಪಂ ಅಧಿಕಾರಗಳನ್ನು ಮೊಟಕುಗೊಳಿಸಲಾಗಿದೆ ಎಂದು ಅವರು ಹೇಳಿದರು. ಇಡೀ ಭಾರತೀಯರು ಗೌರವಿಸುವ ಎರಡು ರಾಷ್ಟ್ರ ನಾಯಕರಾದ ಸ್ವಾಮಿ ವಿವೇಕಾನಂದ ಮತ್ತು ಸರದಾರ್ ವಲ್ಲಭಬಾಯಿ ಪಠೇಲ್ ಅವರನ್ನು ಯಾವುದೇ ಪಕ್ಷ ಜಾತಿ ಧರ್ಮ ನೋಡದೆ ಎಲ್ಲರೂ ಗೌರವಿಸುತ್ತಾರೆ.ಆದರೆ ಬಿಜೆಪಿಯವರು ಇವರನ್ನು ಕೂಡಾ ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಅವರ ಹೆಸರಿನಲ್ಲಿ ವಿವೇಕಾ ಶಾಲೆ ಎಂದು ಘೋಷಣೆ ಮಾಡುವುದು, ಆ ಮೂಲಕ ಏನಾದರೂ ವಿಷಬೀಜ ಬಿತ್ತುವ ಕೆಲಸ ಮಾಡುವ ಬದಲು ಆ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಕೊಠಡಿ ಸಮಸ್ಯೆಗಳನ್ನು ಸರಿಪಡಿಸಲು ಸರಕಾರ ಕೈ ಹಾಕಲಿ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ಬಗ್ಗೆ ಸರಕಾರಕ್ಕೇಕೆ ನಿರ್ಲಕ್ಷ್ಯ: ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮೊಹಮ್ಮದ್ ಅವರು ಮಾತನಾಡಿ ಬಡವರಿಗೆ, ದುರ್ಬಲ ವರ್ಗದವರಿಗೆ, ಕೂಲಿ ಕಾರ್ಮಿಕರ ಹೊಟ್ಟೆ ತಣ್ಣಗಾಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿತ್ತು.ಇದರಿಂದ ಅದೆಷ್ಟೋ ಬಡವರು ಪ್ರಯೋಜನ ಪಡೆಯುತ್ತಿದ್ದರು.ಆದರೆ ಬಿಜೆಪಿ ಸರಕಾರವು ಇಂದಿರಾ ಕ್ಯಾಂಟೀನ್ ಅನ್ನು ಅಸ್ತವ್ಯಸ್ತಗೊಳಿಸಬೇಕೆಂಬ ಉದ್ದೇಶದಿಂದ ನೌಕರರಿಗೆ ಸರಿಯಾದ ಸಂಬಳ ನೀಡದೆ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿಸುವ ಕೆಲಸಕ್ಕೆ ಕೈ ಹಾಕುತ್ತಿದೆ.ಇಂದಿರಾ ಕ್ಯಾಂಟೀನ್ ಬಗ್ಗೆ ಸರಕಾರದಿಂದ ಇಷ್ಟೊಂದು ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿದರು.ಬಡವರಿಗೆ ದುರ್ಬಲ ವರ್ಗದವರಿಗೆ ಬೇಕಾದ ಕಾರ್ಯಕ್ರಮಗಳಿಗೆ ಸರಕಾರದಿಂದ ಯಾವುದೇ ರೀತಿಯ ಪ್ರೋತ್ಸಾಹವಿಲ್ಲ.ಅನುದಾನವಿಲ್ಲ. ಇಂದಿರಾ ಕ್ಯಾಂಟೀನ್ ಮಾತ್ರವಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸಿಗುವ ಗೌರವ ಧನಗಳೂ ಸರಿಯಾದ ಸಂದರ್ಭದಲ್ಲಿ ಸಿಗದಿರುವುದು, ಶಿಕ್ಷಕರಿಗೆ ಸರಿಯಾದ ಸಮಯದಲ್ಲಿ ಸಂಬಳ ನೀಡದಿರುವುದು, ಪರಿಶಿಷ್ಟ ಜಾತಿ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಿಗೆ ಯಾವುದೇ ಯೋಜನೆಗಳಿಗೆ ಸರಿಯಾದ ಅನುದಾನ ಬಿಡುಗಡೆ ಮಾಡದಿರುವುದು, ಮಾತ್ರವಲ್ಲ ಬೇರೆ ಬೇರೆ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಲಾಗಿದ್ದು, ಇವರು ಆಡಳಿತ ಮಾಡುವುದು ಯಾವ ಉದ್ದೆಶಕ್ಕೆಂದು ಎಂ.ಎಸ್. ಪ್ರಶ್ನಿಸಿದರು.

ಹಿಮಾಚಲಪ್ರದೇಶದಲ್ಲಿ ಗೆಲುವು-ಕಾಂಗ್ರೆಸ್‌ಗೆ ಹೊಸ ಚೈತನ್ಯ:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿರುವುದು ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದಂತಾಗಿದೆ.ಮುಂದೆ ಕರ್ನಾಟಕದಲ್ಲೂ ಹಾಗೂ ಇನ್ನಿತರ ಕಡೆಗಳಲ್ಲೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.ಪುತ್ತೂರು ವಿಧಾನಸಭಾ ಕ್ಷೇತ್ರದ ಪಂಚಾಯತ್‌ರಾಜ್ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here