ಉಪ್ಪಿನಂಗಡಿ: ಗುಜಿರಿ ಸಾಮಾನುಗಳನ್ನು ಹೆಕ್ಕುವ ನೆಪದಲ್ಲಿ ಮನೆಯಂಗಳಕ್ಕೆ ಭೇಟಿ ನೀಡಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿ ಸ್ಥಳೀಯರು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳವಾರ ನಸುಕಿನ ವೇಳೆ ಸಂಗಮ್ ಸೌಂಡ್ಸ್ ಮಾಲಕರ ಮನೆಯಂಗಳಕ್ಕೆ ಬಂದ ಕಳ್ಳರಿಬ್ಬರು ಅಲ್ಲಿದ್ದ ಮೆಟಲ್ ಚೋಕ್ ಹಾಗೂ ನಾಯಿಯ ಸರಪಳಿಯನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅರಿವಿಗೆ ಬಂದಾಕ್ಷಣ ಸ್ಥಳೀಯ ಸಿಸಿ ಕ್ಯಾಮರಾವನ್ನು ವೀಕ್ಷಿಸಿ ಕಳ್ಳರ ಗುರುತು ಪತ್ತೆ ಹಚ್ಚಿ, ಪೇಟೆಯಲ್ಲಿಯೇ ಇದ್ದ ಕಳ್ಳರಿಬ್ಬರನ್ನೂ ಹಿಡಿದು ಪೊಲೀಸರಿಗೊಪ್ಪಿಸಲಾಯಿತು.
ಕಳ್ಳರ ಪೈಕಿ ಓರ್ವ ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಹರ್‌ಕರಣ್ ಹಳ್ಳಿ ನಿವಾಸಿ ಶಿವ ಯಾನೆ ಧರ್ಮ ನಾಯಕ್ (39) ಹಾಗೂ ಇನ್ನೊಬ್ಬ ಗದಗ್ ಜಿಲ್ಲಾ ಮುಂಡರಿಲ್ಲಾ ನಿವಾಸಿ ಪ್ರದೀಪ್ ಯಾನೆ ಚಟ್ರಪ್ಪ (27) ಬಿನ್ ಚಟ್ರಪ್ಪ ಎಂದು ತಿಳಿದು ಬಂದಿದೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮನೆಯಂಗಳಕ್ಕೆ ನುಗ್ಗಿ ಕಳ್ಳತನ ಮಾಡಿದ ಕಳ್ಳರನ್ನು ಹಿಡಿಯಲಾಗಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಹಲವಾರು ಮಂದಿ ತಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಕಳವಿಗೀಡಾದ ವಸ್ತುಗಳನ್ನು ಪತ್ತೆ ಹಚ್ಚಲು ಗುಜಿರಿ ಅಂಗಡಿಯತ್ತ ದೌಡಾಯಿಸಿದ ಬೆಳವಣಿಗೆಯೂ ನಡೆಯಿತು.