ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ-ಶಿಕ್ಷಣ ಇಲಾಖೆ ಸುತ್ತೋಲೆ
ಬೆಂಗಳೂರು:ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2022-23) 5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ (ಮೌಲ್ಯಾಂಕನ) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಲಾಖೆಯ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ನ. 21ರಂದೇ ಅನುಮೋದನೆ ನೀಡಿತ್ತು.
ಪ್ರಸ್ತುತ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.ಆದರೆ, 1ನೇ ತರಗತಿಯಿಂದ 9ನೇ ತರಗತಿವರೆಗೆ ಶಾಲಾ ಹಂತದಲ್ಲಿ ಸಿಸಿಇ ಅಡಿ ಮೌಲ್ಯಾಂಕನ ವಿಶ್ಲೇಷಣೆ ಮಾಡಲಾಗುತ್ತಿದ್ದು, ವಾರ್ಷಿಕ ಪರೀಕ್ಷೆಗಳನ್ನು ನಿರ್ವಹಿಸುತ್ತಿಲ್ಲ. ಹೀಗಾಗಿ, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ ಅವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಕಲಿಕಾ ಫಲ ಹಾಗೂ ಸಾಮರ್ಥ್ಯವನ್ನು ಮೌಲ್ಯಮಾಪನ ನಡೆಸಿ, ವಿಶ್ಲೇಷಿಸುವ ಅವಶ್ಯವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ ಮೌಲ್ಯಾಂಕನ ವಿಶ್ಲೇಷಣೆಯಲ್ಲಿ ಕಲಿಕಾ ಕುಂಠಿತವಾಗಿರುವ ವಿಷಯ, ಶಾಲೆ, ಕ್ಲಸ್ಟರ್/ತಾಲ್ಲೂಕುಗಳನ್ನು ಗುರುತಿಸಲಾಗುವುದು. ಆ ವಿಷಯ, ಶಾಲೆ, ಕ್ಲಸ್ಟರ್, ತಾಲ್ಲೂಕುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆ ರಚಿಸಿ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಪರೀಕ್ಷೆ ನಿರ್ವಹಣೆ ಕುರಿತು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳ ಜೊತೆ ಸಭೆ ನಡೆಸಿ, ಪರೀಕ್ಷಾ ನಿರ್ವಹಣೆಗೆ ಪೂರ್ವ ಸಿದ್ಧತೆ ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದೂ ಸುತ್ತೋಲೆಯಲ್ಲಿದೆ.
ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸದೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೇ ಭರಿಸಲಿದೆ. ಶಾಲಾವಾರು ಮಕ್ಕಳ ಸಂಖ್ಯೆ ಆಧರಿಸಿ 5ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25, 8ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.ಎರಡೂ ತರಗತಿಗಳಿಗೆ 40 ಅಂಕಗಳ ಲಿಖಿತ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ಸೇರಿ ಒಟ್ಟು 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಸುತ್ತೋಲೆ ವಾಪಸು ಪಡೆಯಲು ಮುಖ್ಯಮಂತ್ರಿಗೆ ‘ರುಪ್ಸ ’ಮನವಿ: ’5 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕ ಹಾಗೂ ಶಿಕ್ಷಣದ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿದೆ.ಈ ಸುತ್ತೋಲೆಯನ್ನು ವಾಪಸು ಪಡೆಯಬೇಕು’ ಎಂದು ನೋಂದಾಯಿತ ಅನುದಾನತಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸ) ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
’ಶಿಕ್ಷಣ ಎಂಬುದು ಕಲಿಕೆಗಾಗಿ ಕಲಿಸುವುದೇ ವಿನಾ ಪರೀಕ್ಷೆಗಾಗಿ ಕಲಿಕೆ ಸಾಧುವಲ್ಲ. ಕೇಂದ್ರ ಹಾಗೂ ಇತರ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಇಲ್ಲದ ಪರೀಕ್ಷಾ ಪದ್ಧತಿಯನ್ನು ಕೇವಲ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ ವಿಧಿಸಿದರೆ ಅಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ, ಅಘಾತ, ಒತ್ತಡ, ಉಂಟಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ಮಕ್ಕಳು ಆತ್ಮಹತ್ಯೆಗೆ ಯತ್ನಿಸಲೂಬಹುದು. ಇದರಿಂದ ಮಕ್ಕಳು ಶಾಲೆಗಳನ್ನು ಬಿಡುವಂಥ ಸಾಧ್ಯತೆಗಳು ಹೆಚ್ಚಾಗುತ್ತವೆ’ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.
ಪರೀಕ್ಷಾ ವೇಳಾಪಟ್ಟಿ
2023ರ ಮಾರ್ಚ್ 9ರಿಂದ 17ರವರೆಗೆ ಪರೀಕ್ಷೆ, 21ರಿಂದ 28ರವರೆಗೆ ಮೌಲ್ಯಮಾಪನ, 31ರಿಂದ ಏಪ್ರಿಲ್ 5ರವರೆಗೆ ಫಲಿತಾಂಶ ಸಿದ್ಧಪಡಿಸಿ, ಏಪ್ರಿಲ್ 8ರಿಂದ 10ರ ಮಧ್ಯೆ ಫಲಿತಾಂಶ ಪ್ರಕಟಿಸಲು ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ 2023ರ ಏಪ್ರಿಲ್ 10ರಂದು ಕೊನೆಗೊಳ್ಳಲಿದೆ.