ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವಲ್ಲಿ ಸಮಸ್ಯೆ-ಆರೋಪ

0

ರೈತ ಸಂಘದ ಮುಖಂಡರಿಂದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ದೂರು

ಪುತ್ತೂರು: ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡದಿಂದ ಹಲವು ಸೇವೆಗಳಿಗೆ ಅಡ್ಡಿಯಾಗುತ್ತಿದೆ. ಸ್ಕ್ಯಾನಿಂಗ್ ಮಾಡಲು ಇಂತಿಷ್ಟೆ ಸಂಖ್ಯೆ ನಿಗದಿಪಡಿಸಿದ್ದರಿಂದ ತುರ್ತು ಸಂದರ್ಭದಲ್ಲಿ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ರೈತ ಸಂಘದ ಮುಖಂಡರೋರ್ವರ ಪತ್ನಿಗೆ ಇದೇ ರೀತಿ ಸಮಸ್ಯೆ ಎದುರಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಮತ್ತು ಪುತ್ತೂರಿನ ಮುಖಂಡರು ಡಿ.14ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ದೂರು ನೀಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.


ರೈತ ಸಂಘದ ಮುಖಂಡ ಉಪ್ಪಿನಂಗಡಿಯ ಇಸಾಕ್ ಅವರು ಮಾತನಾಡಿ, ‘ನನ್ನ ಪತ್ನಿ 2 ತಿಂಗಳ ಗರ್ಭವತಿ ರಕ್ತಸ್ರಾವದ ಹಿನ್ನಲೆಯಲ್ಲಿ 2 ದಿನಗಳ ಹಿಂದೆ ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಯ ವಿಭಾಗಕ್ಕೆ ಹೋದಾಗ ನೀವು 9 ಗಂಟೆಯೊಳಗೆ ಬರಬೇಕಾಗಿತ್ತು. ಇನ್ನು ಆಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಕುರಿತು ನಿನ್ನೆ ನಾನೇ ಪತ್ನಿಯನ್ನು ಕರೆದು ಕೊಂಡು ಬಂದಾಗಲೂ ಇದೇ ಉತ್ತರ ಕೊಟ್ಟಿದ್ದಾರೆ. ಆಗ ನಾನು ಪ್ರಶ್ನಿಸಿದ್ದಕ್ಕೆ ತಕ್ಷಣ ಸ್ಕ್ಯಾನಿಂಗ್ ಮಾಡಿಕೊಟ್ಟಿದ್ದಾರೆ. ಜೊತೆಗೆ ಅಲ್ಲಿದ್ದ ಉಳಿದವರಿಗೂ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ನನ್ನ ಕೆಲಸ ಆಯಿತೆಂದು ನಾವು ಸುಮ್ಮನೆ ಕುಳಿಕೊಳ್ಳದೆ ಸಾಮಾನ್ಯ ಜನರಿಗೂ ವಿಳಂಬರಹಿತವಾಗಿ ಸ್ಕ್ಯಾನಿಂಗ್ ಸೌಲಭ್ಯ ಸಿಗಬೇಕೆಂಬುದು ನಮ್ಮ ಆಗ್ರಹ’ ಎಂದರು. ಧ್ವನಿಗೂಡಿಸಿದ ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ, ‘ಇಲ್ಲಿ ನಮ್ಮ ಒಂದು ಸಮಸ್ಯೆ ಬಗೆಹರಿಸುವುದು ಬೇಡ. ಎಲ್ಲಾ ರೈತರ ಸಮಸ್ಯೆ ಪರಿಹರಿಸಬೇಕು. ನಾವು ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವವರು. ನಾವು ನಿಮ್ಮನ್ನು ದೂರುವುದಲ್ಲ. ನಿಮಗೆ ಕೆಲಸದ ಒತ್ತಡ ಹೆಚ್ಚಾಗಿದ್ದರೆ ಹೆಚ್ಚುವರಿ ವೈದ್ಯರನ್ನು ಕೇಳಿ. ಈ ಕುರಿತು ನಾವು ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಸರಕಾರ ನಮ್ಮದೆ. ಅವರು ಕೆಲಸ ಮಾಡದಿದ್ದರೆ ಅವರನ್ನು ಕೆಳಗಿಳಿಸುತ್ತೇವೆ. ಹಾಗಾಗಿ ನಿಮ್ಮ ಸಮಸ್ಯೆಯನ್ನು ಓಪನ್ ಅಗಿ ಹೇಳಿ’ ಎಂದರು. ಉತ್ತರಿಸಿದ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ಆಶಾ ಪತ್ತೂರಾಯ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕ್ಯಾನಿಂಗ್‌ಗೆ ಇರುವುದು ಇಬ್ಬರೇ ವೈದ್ಯರು. ಅದರಲ್ಲಿ ಒಬ್ಬರು ವೆನ್‌ಲಾಕ್‌ನಲ್ಲಿ, ಇನ್ನೊಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಇದ್ದಾರೆ. ಒಂದು ಸ್ಕ್ಯಾನಿಂಗ್‌ಗೆ ಕನಿಷ್ಟ 15 ನಿಮಿಷ ಬೇಕು. ದಿನದಲ್ಲೇ ಇಂತಿಷ್ಟೇ ಸ್ಕ್ಯಾನಿಂಗ್ ಮಾಡಬಹುದು. ನಮ್ಮಲ್ಲಿ ದಿನಕ್ಕೆ 30 ಸ್ಕ್ಯಾನಿಂಗ್ ಮಾಡುತ್ತೇವೆ.ತುರ್ತು ಸಂದರ್ಭ ತಕ್ಷಣ ಸ್ಕ್ಯಾನಿಂಗ್ ಮಾಡುತ್ತೇವೆ’ ಎಂದರು.

ಆಸ್ಪತ್ರೆಯಲ್ಲಿ ಹಿಂದಿಗಿಂತ ಉತ್ತಮ ಸೇವೆ: ‘ಆಸ್ಪತ್ರೆಯಲ್ಲಿ ಹಿಂದೆ 4 ವೈದ್ಯರಿದ್ದರು. ಈಗ 11 ತಜ್ಞ ವೈದ್ಯರಿದ್ದಾರೆ. ಅದೂ ಅಲ್ಲದೆ ಆಸ್ಪತ್ರೆಯ ಹೆಚ್ಚಿನ ಸೇವೆಗಾಗಿ ಅಪ್‌ಗ್ರೇಡ್‌ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಸ್ಪತ್ರೆ ಅಪ್‌ಗ್ರೇಡ್ ಆದ ತಕ್ಷಣ ಇನ್ನೂ ಹೆಚ್ಚಿನ ಸೌಲಭ್ಯ ಸಿಗುತ್ತದೆ’ ಎಂದು ಡಾ. ಆಶಾ ಪುತ್ತೂರಾಯ ಹೇಳಿದರು. ‘ನಮಗೆ ಅದೆಂತ ಕರ್ಮವೂ ಗೊತ್ತಿಲ್ಲ. ನಮಗೆ ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಅಷ್ಟೆ. ಇದರ ಜೊತೆಗೆ ಡಯಾಲಿಸಿಸ್ ಕುರಿತು ಉಪ್ಪಿನಂಗಡಿ ಭಾಗದಿಂದ ದೂರು ಬಂದಿದೆ.ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಬೇಕು’ ಎಂದು ರೂಪೇಶ್ ರೈ ಹೇಳಿದಾಗ ಉತ್ತರಿಸಿದ ಡಾ.ಅಶಾ ಪುತ್ತೂರಾಯ ಅವರು, ‘ಆಸ್ಪತ್ರೆಯ ರೋಗಿಗಳ ಸಂಖ್ಯೆ, ಹೆರಿಗೆ ಸಹಿತ ಎಲ್ಲಾ ವಿವರಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಡಯಾಲಿಸಿಸ್ ಮೆಷಿನ್ ಕೂಡಾ ಎಲ್ಲಾ ವರ್ಕ್ ಆಗುತ್ತಾ ಇದೆ. ಮುಂದೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ಅಲ್ಲಿ ಹೆಚ್ಚುವರಿ ಮೆಷಿನ್ ಅಳವಡಿಸಲಾಗುತ್ತದೆ. ಒಟ್ಟಾರೆಯಾಗಿ ಆಸ್ಪತ್ರೆಯಲ್ಲಿ ನಮ್ಮಿಂದಾದ ಉತ್ತಮ ಸೇವೆ ನೀಡುತ್ತಿದ್ದೇವೆ’ ಎಂದರು. ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಮಾತನಾಡುವುದನ್ನು ವೈದ್ಯರು ಪಾಲಿಸುವಂತೆ ರೈತ ಮುಖಂಡರು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಣ್ಚತ್ತಡ್ಕ, ತಾಲೂಕು ಮುಖಂಡರಾದ ವಿಕ್ರಂ ಶೆಟ್ಟಿ, ದಲಿತ ಮುಖಂಡ ಅಭಿಷೇಕ್, ವಿಕ್ರಮ್ ಕೋಡಿಯಾಡಿ, ಜಿಲ್ಲಾ ಮುಖಂಡ ಯತೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆಯಿಲ್ಲ 
ಸಾರ್ವಜನಿಕರೊಬ್ಬರ ಮಾಹಿತಿ !

ಆಸ್ಪತ್ರೆಯ ಸಮಸ್ಯೆ ಕುರಿತು ರೈತ ಸಂಘಟನೆ ಮುಖಂಡರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಚರ್ಚಿಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಮಹಮ್ಮದ್ ಆಲಿ ಪರ್ಲಡ್ಕ ಎಂಬವರು, ‘ಆಸ್ಪತ್ರೆಯ ವೈದ್ಯರಿಂದ ಯಾವುದೇ ಸಮಸ್ಯೆ ಇಲ್ಲ. ಇಲ್ಲಿನ ವೈದ್ಯರು ನಮಗೆಲ್ಲ ಉತ್ತಮ ಸೇವೆ ನೀಡುತ್ತಿದ್ದಾರೆ’ ಎಂದು ರೈತ ಮುಖಂಡರ ಜೊತೆಯಲ್ಲಿದ್ದ ದಲಿತ್ ಸಂಘದ ಮುಖಂಡ ಅಭಿಷೇಕ್ ಅವರಿಗೆ ಮಾಹಿತಿ ನೀಡಿದರು. ಈ ವೇಳೆ ಆಕ್ಷೇಪಿಸಿದ ರೂಪೇಶ್ ರೈ ಅಲಿಮಾರ್ ಅವರು, ‘ಪ್ರಸ್ತುತ ನಾವು ನಮ್ಮ ಮುಖಂಡರೊಬ್ಬರ ಪತ್ನಿಗೆ ಆಗಿರುವ ಸಮಸ್ಯೆಯ ಕುರಿತು ವೈದ್ಯರಲ್ಲಿ ಮಾತನಾಡಲು ಬಂದಿದ್ದೇವೆ. ನಾವೇನು ಸುಮ್ಮನೆ ಬಂದಿಲ್ಲ.ನಾವಿಲ್ಲಿ ವೈದ್ಯರ ಸಮಸ್ಯೆ ಎಂದು ದೂರುವುದಿಲ್ಲ. ಇಲ್ಲಿನ ವೈದ್ಯರಿಗೆ ಒತ್ತಡ ಇದೆ ಎಂದು ಹೇಳುವುದು’ ಎಂದರು. ಈ ಸಂದರ್ಭ ಅವರಿಬ್ಬರೊಳಗೆ ಮಾತಿಗೆ ಮಾತು ಬೆಳೆದ ಘಟನೆಯೂ ನಡೆಯಿತು.

LEAVE A REPLY

Please enter your comment!
Please enter your name here