ವಿದ್ಯಾರ್ಥಿಗಳು ಸಿಗುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು: ಪೇಜಾವರ ಶ್ರೀ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಮತ್ತು ಪ್ರೌಢಶಾಲೆಯ 2022-23ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ಡಿ.14ರಂದು ನಡೆಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ವಿದ್ಯಾಸಂಸ್ಥೆಗಳು ಅನೇಕ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸುತ್ತವೆ. ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಉತ್ತಮ ವಿಚಾರವಾಗಿದೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಹಾಸ್ಪಿಟಲ್‌ನ ಮೆಡಿಕಲ್ ಆಫೀಸರ್ ಡಾ.ಅವಿನ್ ಆಳ್ವರವರು ಮಾತನಾಡಿ, ರಾಮಕುಂಜದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇಲ್ಲಿ ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲ ಎಂಬುದನ್ನು ಹಳೆವಿದ್ಯಾರ್ಥಿಯಾಗಿ ನಾನು ನೋಡಿದ್ದೇನೆ. ಕಲಿಕೆಯ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಕಲಿಕೆಗೆ ಉತ್ತಮ ವಾತಾವರಣ ಇರುವ ರಾಮಕುಂಜದಲ್ಲಿ ಇಂಜಿನಿಯರ್, ಡಿಪ್ಲೋಮಾ, ಮೆಡಿಕಲ್ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳೂ ಮುಂದಾಗಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿ ರೈ ಹಾಸ್ಪಿಟಲಿಟಿ ಮತ್ತು ರೆಸಾರ್ಟ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹೇಮಂತ ರೈ ಮನವಳಿಕೆ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಸಿಗಬೇಕು. ಇದರಿಂದ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಿದೆ. ವಿದ್ಯಾರ್ಥಿಗಳಲ್ಲಿಯೂ ಆಸಕ್ತಿ, ಹಂಬಲ ಇರಬೇಕು. ಜೀವನದಲ್ಲಿ ಗುರು, ಗುರಿ ಇಟ್ಟುಕೊಂಡು ಮುನ್ನಡೆಯಬೇಕೆಂದು ಹೇಳಿದರು. ಸಿಸ್ಕೋ ಕಂಪನಿಯ ವಾದಿರಾಜ ರಮೇಶ್ ಮಾತನಾಡಿ, ಕಲಿಯುವ ವಯಸ್ಸಿನಲ್ಲಿ ಕಲಿಕೆಗೆ ಒತ್ತು ನೀಡಿದಲ್ಲಿ ಮುಂದಿನ ಜೀವನ ಸಮೃದ್ಧವಾಗಲಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪರಿಶ್ರಮ ಪಡಬೇಕೆಂದು ಹೇಳಿದರು. ಆಲಂಕಾರು ಧವಳಗಿರಿ ಕನ್‌ಸ್ಟಕ್ಷನ್‌ನ ಸಿವಿಲ್ ಇಂಜಿನಿಯರ್ ಮನೋಹರ ಕೊಳೆಂಜಿರೋಡಿ ಮಾತನಾಡಿ, ಶಿಸ್ತು ಬದ್ಧ ಜೀವನದಿಂದ ಗೌರವ ಸಿಗಲಿದೆ. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡಲ್ಲಿ ಭವಿಷ್ಯ ಉಜ್ವಲವಾಗಲಿದೆ ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಸೇಸಪ್ಪ ರೈ, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಗಮ ಬೆಂಗಳೂರು ಇದರ ಸಂಪನ್ಮೂಲ ವ್ಯಕ್ತಿ ಜಗದೀಶ್ ಹೆಬ್ಬಾರ್ ಕಾರಿಜ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್, ಪ.ಪೂ.ಕಾಲೇಜು ವಿದ್ಯಾರ್ಥಿ ನಾಯಕ ಗಗನ್‌ದೀಪ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರವೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಸಮಿತಿ ವತಿಯಿಂದ ಸ್ವಾಮೀಜಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ಪ.ಪೂ.ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆ., ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್‌ರವರು ಸಂಸ್ಥೆಯ ವರದಿ ಮಂಡಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವೆಂಕಟೇಶ್ ದಾಮ್ಲೆ ವಂದಿಸಿದರು. ಉಪನ್ಯಾಸಕ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಚಿನ್ಮಯಿ, ಪ್ರತೀಕ್ಷಾ, ಆಶಿಕಾ ಪ್ರಾರ್ಥಿಸಿದರು.
ದತ್ತಿನಿಧಿ ಬಹುಮಾನ ವಿತರಣೆ:
ದತ್ತಿನಿಧಿ ಬಹುಮಾನ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕ್ರೀಡಾಚಟುವಟಿಕೆಗಳಲ್ಲೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕಿಯರಾದ ಸುಪ್ರೀತಾ, ಭವ್ಯ, ಚೈತ್ರ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಫುಲ್ಲಾ, ಭರತ್‌ರವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು. ದಾನಿಗಳಾದ ಮೋಹನ್, ಮೋಹನ್ ಪೂಜಾರಿ, ಭುವನೇಶ್ ಬುಡಲೂರು, ಅಶೋಕ್ ಕೊಯಿಲ, ಜಗದೀಶ್ ಹೆಬ್ಬಾರ್ ಕಾರಿಜ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಹಳೆವಿದ್ಯಾರ್ಥಿಗಳೂ ಆಗಿದ್ದು ಸಮಾರಂಭದ ಅತಿಥಿಗಳಾಗಿದ್ದ ಡಾ.ಅವಿನ್ ಅಳ್ವ, ಹೇಮಂತ ರೈ, ವಾದಿರಾಜ್ ರಮೇಶ್, ಮನೋಹರ ಕೊಳೆಂಜಿರೋಡಿ ಅವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಉಪನ್ಯಾಸಕ ಚಂದ್ರಶೇಖರ, ಮುಖ್ಯಶಿಕ್ಷಕ ಸತೀಶ್ ಭಟ್ ಅತಿಥಿಗಳನ್ನು ಪರಿಚಯಿಸಿದರು.