ಚುನಾವಣಾ ವಿಶ್ಲೇಷಣೆಯಿಂದ ರಾಜಕೀಯ ವ್ಯವಸ್ಥೆಯ ಅನಾವರಣ: ಅಕ್ಷತಾ ಎ.ಪಿ.
ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ಪರಿಶುದ್ಧಗೊಳಿಸುವಲ್ಲಿ ಆಡಳಿತ ವ್ಯವಸ್ಥೆಯ ಜೊತೆಗೆ ಜನರ ಬದ್ಧತೆಯೂ ಮುಖ್ಯವಾಗಿದೆ. ಜನರಿಗೆ ಚುನಾವಣೆಯ ಹಾಗೂ ಜನಪ್ರತಿನಿಧಿಗಳಕುರಿತ ಮಾಹಿತಿಯು ಸರಿಯಾಗಿ ದೊರೆತಾಗ ಅವರಿಗೆ ನೀಡಿರುವ ಮತದಾನದ ಹಕ್ಕನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಚುನಾವಣಾ ಫಲಿತಾಂಶವನ್ನು ವಿಶ್ಲೇಷಣೆ ಮಾಡುವುದರಿಂದ ರಾಜಕಾರಣದ ಆಳ-ಅಗಲ ತಿಳಿದುಕೊಳ್ಳುಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ನೇತೃತ್ವದಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಡಿಬೇಟ್ ಸೊಸೈಟಿಯ ಸಹಯೋಗದಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶದ ಹಿನ್ನಲೆಯಲ್ಲಿ ನಡೆದ “ಚುನಾವಣಾ ಫಲಿತಾಂಶ ವಿಶ್ಲೇಷಣಾ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಚುನಾವಣೆಯು ವಿದ್ಯಾರ್ಥಿಗಳಿಗೆ ವಿವಿಧ ಪಾಠಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳೇ ವಿವಿಧ ಅಂಶಗಳನ್ನು ಇಟ್ಟುಕೊಂಡು ವಿಶ್ಲೇಷಣೆ ನಡೆಸಿರುವುದು ಅವರ ಚುನಾವಣಾ ಸಾಕ್ಷಾರತೆಯ ಮಟ್ಟವನ್ನು ತೋರಿಸುತ್ತದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಚುನಾವಣಾ ಫಲಿತಾಂಶದ ವಿಶ್ಲೇಷಣೆಯ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಾದ ಸೂರ್ಯ, ನವೀನ್ ಕೃಷ್ಣ, ದೇವಿಪ್ರಸಾದ್, ಮನ್ವಿತ್ ಹಾಗೂ ಶ್ರೇಯಸ್ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಮಂಡಿಸಿ ವಿಶ್ಲೇಷಣೆ ನಡೆಸಿದರು. ವಿದ್ಯಾರ್ಥಿ ಸುಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಯಶ್ವಿತಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರೀಕೃಷ್ಣ ಭಟ್ ನಿರೂಪಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.