ದ.16 ರಾಜ್ಯ ವಕೀಲರ ಪರಿಷತ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಖ್ಯಾತ ವಕೀಲ ಪಿ.ಪಿ. ಹೆಗ್ಡೆ ಸ್ಪರ್ಧೆ

0

ಪುತ್ತೂರು: ಬೆಂಗಳೂರಿನಲ್ಲಿರುವ ರಾಜ್ಯ ಹೈಕೋರ್ಟ್‌ನ ಆವರಣದಲ್ಲಿ ದ.16ರಂದು ನಡೆಯಲಿರುವ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಖ್ಯಾತ ವಕೀಲ ಪಿ.ಪಿ. ಹೆಗ್ಡೆ ಸ್ಪರ್ಧಿಸಿದ್ದಾರೆ.


ಪ್ರಸ್ತುತ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷರಾಗಿರುವ ಮೋತಕಪಳ್ಳಿ ಕಾಶೀನಾಥ್‌ರವರ ಅಧ್ಯಕ್ಷ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದ್ದು ಪರಿಷತ್ ಕಾರ್ಯದರ್ಶಿ ಪುಟ್ಟೇಗೌಡ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲ ಪಿ.ಪಿ. ಹೆಗ್ಡೆ ನಾಮಪತ್ರ ಸಲ್ಲಿಸಿದ್ದು ಒಟ್ಟು ನಾಲ್ಕು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಸ್.ಬಸವರಾಜ್, ವಿಶಾಲ್‌ರಘು ಮತ್ತು ರಾಮ್‌ರೆಡ್ಡಿ ಚುನಾವಣಾ ಕಣದಲ್ಲಿರುವ ಇತರ ಅಭ್ಯರ್ಥಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿರುವ ಸುಮಾರು ಒಂದು ಲಕ್ಷ ವಕೀಲರ ಪ್ರತಿನಿಧಿಗಳಾಗಿ ಆಯ್ಕೆಗೊಂಡಿರುವ ೨೫ ಮಂದಿ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು ಈರ್ವರು ಕಣದಲ್ಲಿದ್ದಾರೆ.

ಪಿ.ಪಿ. ಹೆಗ್ಡೆಯವರು ಇತ್ತೀಚೆಗಷ್ಟೇ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ ಹೊಂದಿದ್ದರು. ಹೈಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಸರ್ವಾನುಮತದಿಂದ ಈ ಪದೋನ್ನತಿ ನೀಡಿತ್ತು. ವಕೀಲರ ಅನುಭವ, ದಕ್ಷತೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ಅವರ ಮೇಲಿನ ನಂಬಿಕೆಯನ್ನು ಪರಿಗಣಿಸಿ ಹೈಕೋರ್ಟ್ ನ್ಯಾಯಮೂರ್ತಿಗಳು ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸುವ ಪದ್ಧತಿಯಂತೆ ಸೀನಿಯರ್ ಅಡ್ವೋಕೇಟ್‌ಗಳ ಘೋಷಣೆ ಮಾಡಲಾಗಿದ್ದು ಇದರಲ್ಲಿ ಪಿ.ಪಿ. ಹೆಗ್ಡೆ ಒಳಗೊಂಡಿದ್ದರು.

ಸುಳ್ಯ ತಾಲೂಕಿನ ಪಂಜ ಕೂತ್ಕುಂಜದ ಶ್ರೀಧರ ಹೆಗ್ಡೆಯವರ ಪುತ್ರರಾಗಿದ್ದು ಪಿ.ಪಿ. ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ ಮತ್ತು ಎಲ್.ಎಲ್.ಎಮ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು. ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಪಿ.ಪಿ. ಹೆಗ್ಡೆರವರು ಮಂಗಳೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ಕಛೇರಿ ಹೊಂದಿದ್ದಾರೆ. ಸುಪ್ರೀಂಕೋರ್ಟ್ ವಕೀಲರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ಅವಧಿಯಲ್ಲಿ ಪಿ.ಪಿ. ಹೆಗ್ಡೆಯವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಹಲವಾರು ಕ್ಲಿಷ್ಟಕರ ಕೇಸುಗಳಲ್ಲಿ ಸಮರ್ಥವಾಗಿ ವಾದಿಸಿ ಗಮನ ಸೆಳೆದಿರುವ ಪಿ.ಪಿ. ಹೆಗ್ಡೆರವರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಪುತ್ರನ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಮತ್ತು ಸಂತೋಷ್ ಹೆಗ್ಡೆಯವರು ವಕೀಲರೊಂದಿಗೆ ಕೈ ಜೋಡಿಸಿದ್ದರು.

ತಾನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿದ್ದರಲ್ಲದೆ ವಕೀಲ ವೃತ್ತಿಯಲ್ಲಿ ಇರುವವರು ಅನ್ಯ ವೃತ್ತಿ ಮಾಡಬಾರದು ಎಂಬ ನಿಯಮವನ್ನು ಪಿ.ಪಿ. ಹೆಗ್ಡೆಯವರು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು. ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಪಿ.ಪಿ. ಹೆಗ್ಡೆಯವರು ಬರಹಗಳ ಮೂಲಕವೂ ಗಮನ ಸೆಳೆದಿದ್ದಾರೆ. ಅಲ್ಲದೆ, ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಲಕ ಸಹಕಾರಿ ಕ್ಷೇತ್ರವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಸುಳ್ಯದ ಪಂಜ ಕೂತ್ಕುಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಪಿ.ಪಿ. ಹೆಗ್ಡೆಯವರು ಬಳಿಕ ಮೂಡಬಿದ್ರೆ ಜೈನ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ನಂತರ ಬೆಳ್ತಂಗಡಿ ತಾಲೂಕಿನ ಉಜಿರೆ ಸಿದ್ದವನ ಗುರುಕುಲದ ವಿದ್ಯಾರ್ಥಿಯಾಗಿದ್ದ ಇವರು ಉಜಿರೆ ಎಸ್.ಡಿ.ಎಂ. ಕಾಲೇಜು ಮತ್ತು ಮಂಗಳೂರು ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಮಠ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, ಸುಬ್ರಹ್ಮಣ್ಯ ಮಠ ಸಹಿತ ಹಲವು ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಸಂಘಗಳ ಕಾನೂನು ಸಲಹೆಗಾರರಾಗಿಯೂ ಪಿ.ಪಿ. ಹೆಗ್ಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here